ಬಿಎಂಶ್ರೀ ಮೇರು ವ್ಯಕ್ತಿತ್ವದ ಮಹಾನ್ ಚೇತನ: ಖರಡ್ಯ ಬಸವೇಗೌಡ

| Published : Jul 02 2024, 01:37 AM IST

ಬಿಎಂಶ್ರೀ ಮೇರು ವ್ಯಕ್ತಿತ್ವದ ಮಹಾನ್ ಚೇತನ: ಖರಡ್ಯ ಬಸವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆಗೆ ಯಾವುದೇ ಸ್ಥಾನಮಾನವಿಲ್ಲದೆ ಕನ್ನಡಿಗರೇ ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲದಲ್ಲಿಯೇ ಮಾತೃ ಭಾಷೆಗಿರುವ ನ್ಯಾಯಸಮ್ಮತ ಸ್ಥಾನ ದೊರಕಿಸಲು ಕನ್ನಡಕ್ಕಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡವರು ಕನ್ನಡದ ಕಣ್ವ ಬಿಎಂಶ್ರೀ. ಅವರ ಜೀವನ ಮೌಲ್ಯಗಳು ಮತ್ತು ಕನ್ನಡ ಪ್ರೇಮ ಅವಿಸ್ಮರಣೀಯ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕನ್ನಡ ಭಾಷೆಗಿರುವ ನ್ಯಾಯಸಮ್ಮತ ಸ್ಥಾನ ದೊರಕಿಸಿಕೊಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಬಿಎಂಶ್ರೀಯವರು ಮೇರು ವ್ಯಕ್ತಿತ್ವದ ನಾಡಿನ ಮಹಾನ್ ಚೇತನ ಎಂದು ತಾಲೂಕು ಕಸಾಪ ಅಧ್ಯಕ್ಷ ಖರಡ್ಯ ಬಸವೇಗೌಡ ಬಣ್ಣಿಸಿದರು.

ತಾಲೂಕಿನ ಚಿಣ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಬಿ.ಎಂ.ಶ್ರೀ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕನ್ನಡ ಸಾಹಿತ್ಯವು ಹೆಚ್ಚು ಜನಪ್ರಿಯಗೊಳ್ಳಲು ಪ್ರೇರಕರಾಗಿ ಹಾಗೂ ಕನ್ನಡ ಭಾಷಯಲ್ಲಿ ಸಾಹಿತ್ಯ ಕೃಷಿ ಪ್ರಾರಂಭಿಸಲು ಬಿಎಂಶ್ರೀ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

ಕನ್ನಡ ಭಾಷೆಗೆ ಯಾವುದೇ ಸ್ಥಾನಮಾನವಿಲ್ಲದೆ ಕನ್ನಡಿಗರೇ ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲದಲ್ಲಿಯೇ ಮಾತೃ ಭಾಷೆಗಿರುವ ನ್ಯಾಯಸಮ್ಮತ ಸ್ಥಾನ ದೊರಕಿಸಲು ಕನ್ನಡಕ್ಕಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡವರು ಕನ್ನಡದ ಕಣ್ವ ಬಿಎಂಶ್ರೀ. ಅವರ ಜೀವನ ಮೌಲ್ಯಗಳು ಮತ್ತು ಕನ್ನಡ ಪ್ರೇಮ ಅವಿಸ್ಮರಣೀಯ ಎಂದರು.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದ ಬಿಎಂಶ್ರೀಕಂಠಯ್ಯನವರ ಪ್ರೀತಿಯ ವಿದ್ಯಾರ್ಥಿಗಳಾದ ಮಾಸ್ತಿ, ಕುವೆಂಪು, ಎಸ್.ವಿ.ರಂಗಣ್ಣ, ತೀ.ನಂ.ಶ್ರೀಕಂಠಯ್ಯ, ಜಿ.ಪಿ.ರಾಜರತ್ನಂ, ಡಿ.ಎಲ್.ನರಸಿಂಹಾಚಾರ್ ಸೇರಿದಂತೆ ಹಲವರಿಗೆ ಕನ್ನಡದಲ್ಲಿಯೇ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿಸಿದರು ಎಂದು ಹೇಳಿದರು.

ಬಿಎಂಶ್ರೀಯವರಲ್ಲಿದ್ದ ಕನ್ನಡತನವನ್ನು ನಾಡಿನ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಲ್ಲಿ ನಾಡು, ನುಡಿ, ಸಾಹಿತ್ಯ ಸಂಸ್ಕೃತಿಗೆ ಯಾವುದೇ ಧಕ್ಕೆಯಾಗದಂತೆ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಇದೇ ವೇಳೆ ಸೇವಾ ನಿವೃತ್ತಿ ಹೊಂದುತ್ತಿರುವ ಶಾಲೆ ಮುಖ್ಯ ಶಿಕ್ಷಕಿ ಖಮರ್‌ತಾಜ್, ದೈಹಿಕ ಶಿಕ್ಷಕ ಮಹಮ್ಮದ್ ಅಲಿ ಅವರನ್ನು ಸನ್ಮಾನಿಸಲಾಯಿತು. ಶಾಲೆ ಮುಖ್ಯ ಶಿಕ್ಷಕಿ ಖಮರ್‌ತಾಜ್ ಅಧ್ಯಕ್ಷತೆ ವಹಿಸಿದ್ದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪಾಂಡುರಂಗ ವಿಠಲ. ರಘು, ಶಿಕ್ಷಕರಾದ ಸುನಂದಮ್ಮ, ಪುಷ್ಪಲತಾ, ಪುಟ್ಟನಿಂಗಮ್ಮ ಸೇರಿದಂತೆ ಹಲವರಿದ್ದರು.