ತನ್ನನ್ನು ತಾನು ಅರಿತ ಜ್ಞಾನಿಯೇ ಶ್ರೇಷ್ಠ ಭಕ್ತ

| Published : Feb 24 2025, 12:30 AM IST

ಸಾರಾಂಶ

ಇಲ್ಲಿನ ಶ್ರೀ ಸಿದ್ಧಾರೂಢಸ್ವಾಮಿಗಳ ಮಠದಲ್ಲಿ ವಿಶ್ವಶಾಂತಿಗಾಗಿ ಆರಂಭವಾಗಿರುವ ವಿಶ್ವವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಭಾನುವಾರ ಶ್ರೀ ಕೃಷ್ಣ ಭಗವದ್ಗೀತೆಯ 7ನೇ ಅಧ್ಯಾಯದ ಚತುರ್ವಿಧಾ ಭಜಂತೆ ಮಾಂ ಜನಾಃ ಎಂಬ ವಾಕ್ಯ ಕುರಿತು ಚಿಂತನಾ ಗೋಷ್ಠಿ ನಡೆಯಿತು.

ಹುಬ್ಬಳ್ಳಿ: ಭಗವಂತನ ಭಕ್ತರಲ್ಲಿ ಜ್ಞಾನಿಯೇ ಶ್ರೇಷ್ಠ. ಕರ್ಮಗಳನ್ನು ನಾಶ ಮಾಡಿಕೊಳ್ಳುವ ಮತ್ತು ತನ್ನನ್ನು ತಾನು ಅರಿತ ಜ್ಞಾನಿ ಭಕ್ತನೇ ಶ್ರೇಷ್ಠ ಎಂದು ಸಾಧು ಸಂತರು ಅಭಿಪ್ರಾಯ ಪಟ್ಟರು.

ಇಲ್ಲಿನ ಶ್ರೀ ಸಿದ್ಧಾರೂಢಸ್ವಾಮಿಗಳ ಮಠದಲ್ಲಿ ವಿಶ್ವಶಾಂತಿಗಾಗಿ ಆರಂಭವಾಗಿರುವ ವಿಶ್ವವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಭಾನುವಾರ ಶ್ರೀ ಕೃಷ್ಣ ಭಗವದ್ಗೀತೆಯ 7ನೇ ಅಧ್ಯಾಯದ ಚತುರ್ವಿಧಾ ಭಜಂತೆ ಮಾಂ ಜನಾಃ ಎಂಬ ವಾಕ್ಯ ಕುರಿತು ನಡೆದ ಚಿಂತನಾ ಗೋಷ್ಠಿಯಲ್ಲಿ ಪಾಲ್ಗೊಂಡ ಸದ್ಗುರುಗಳು ಅಭಿಮತ ವ್ಯಕ್ತಪಡಿಸಿದರು. ಸಂಘದರಿಯ ಗುರುನಾಥ ಮಹಾರಾಜರು ಆಶೀರ್ವಚನ ನೀಡಿ, ಪರಮಾತ್ಮನನ್ನು ಆಶ್ರಯಿಸಿದವರೇ ಪುಣ್ಯವಂತರು. ಉಳಿದವರು ಪಾಪಿಗಳು. ನಾಲ್ಕು ತರಹ ತನ್ನನ್ನು ಭಜಿಸುವ ಭಕ್ತರು ಸಾಧು ಸಂತರಿಗಿಂತ ದೊಡ್ಡವನು ಎಂಬುದು ಭಗವಂತನ ಅನಿಸಿಕೆ. ಏನೇ ಆದರೂ ಭಗಂತನಿಗೇ ಶರಣು ಹೋಗಿ, ಶತಾಯ ಗತಾಯ ಅವನನ್ನೇ ನಂಬಿ ಕೊನೆಗೆ ತಾನೂ ಭಗವಂತನ ಸ್ವರೂಪವೇ ಆಗುವ ಜ್ಞಾನಿ ಭಕ್ತ ಎನಿಸಿಕೊಳ್ಳುವುದೇ ಎಲ್ಲರ ಗುರಿಯಾಗಬೇಕು ಎಂದರು.

ಕಾಶಿ ಮಲೆಯಾಳ ಸ್ವಾಮಿ ಮಠದ ಪರಮಾತ್ಮಾನಂದ ಸ್ವಾಮೀಜಿ ಮಾತನಾಡಿ, ವೇದ ಶಾಸ್ತ್ರಗಳನ್ನು ಮೂಲದಲ್ಲಿಯೇ ಓದಿ ತಿಳಿಯಬೇಕು. ಅದಕ್ಕಾಗಿ ನಿಜ ಭಕ್ತರಾಗುವವರು ಸಂಸ್ಕೃತ ಭಾಷೆಯನ್ನು ಕಲಿಯಬೇಕು. ಸಂಸ್ಕೃತ ಮೃತ ಭಾಷೆಯಲ್ಲ, ಅದು ಅಮೃತ ಭಾಷೆ ಎಂದರು.

ಸುಖದೇವಾನಂದ ಗಿರಿ ಮಹಾರಾಜ, ದಾವಣಗೆರೆಯ ಶಿವಾನಂದ ಸ್ವಾಮಿಗಳು, ನಾಗರಾಳ ಪರಮಯೋಗಾನಂದ ಆಶ್ರಮದ ಅನಂತಾನಂದ ಸ್ವಾಮೀಜಿ, ಮಹಾರಾಷ್ಟ್ರ, ಸಿನ್ನೂರದ ಜಗದೀಶ್ವರಾನಂದ ಸ್ವಾಮೀಜಿ, ಜಮಖಂಡಿಯ ಕೃಷ್ಣಾನಂದ ಅವಧೂತರು ಆಶೀರ್ವಚನ ನೀಡಿದರು.

ವಿಶ್ವ ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಸ್ವಾಗತಿಸಿದರು. ಗಣೇಶಾನಂದ ಮಹರಾಜರು ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್, ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ, ಹುಬ್ಬಳ್ಳಿ ಕಾರ್ಮಿಕ ನ್ಯಾಯಾಧೀಶ ರಾಜಕುಮಾರ ಅಮ್ಮಿನಭಾವಿ, ಹೈಕೋರ್ಟ್ ವಕೀಲ ಕುಮಾರ ಅವರನ್ನು ಸನ್ಮಾನಿಸಲಾಯಿತು.

ಪರಿಷತ್ ಸ್ವಾಗತ ಸಮಿತಿ ಗೌರಾಧ್ಯಕ್ಷ ಡಿ.ಆರ್. ಪಾಟೀಲ, ಕಾರ್ಯಾಧ್ಯಕ್ಷ ಕೆ.ಎಲ್. ಪಾಟೀಲ, ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಚೆನ್ನವೀರ ಮುಂಗರವಾಡಿ, ಉದಯಕುಮಾರ ನಾಯ್ಕ, ರಮೇಶ ಬೆಳಗಾವಿ, ವಿನಾಯಕ ಘೋಡಕೆ, ಗೀತಾ ಕಲಬುರ್ಗಿ ಸೇರಿದಂತೆ ಹಲವರಿದ್ದರು. ಸರ್ವರೂ ಒಂದು ಎಂಬ ಭಾವನೆಯೇ ಪ್ರಸಿದ್ಧಿಗೆ ಕಾರಣ: ಸಚಿವ ಪಾಟೀಲ

ಹುಬ್ಬಳ್ಳಿ: ಯಾವ ಜಾತಿ, ಪಂಥ, ಭಾಷೆ, ಪ್ರಾಂತ್ಯಗಳ ಭೇದವಿಲ್ಲದೇ ಸರ್ವ ಭಕ್ತರನ್ನು ಅನುಗ್ರಹಿಸುವ ಪರಂಪರೆಯೇ ದೇಶಾದ್ಯತ ಶ್ರೀ ಸಿದ್ಧಾರೂಢ ಮಠದ ಪ್ರಸಿದ್ಧಿಗೆ ಕಾರಣ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶಿವರಾತ್ರಿ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಲಾಗಿರುವ ವಿಶ್ವಶಾಂತಿಗಾಗಿ ವಿಶ್ವವೇದಾಂತ ಪರಿಷತ್ತಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಸಿದ್ಧಾರೂಢ ಭಾರತಿ ಕಲ್ಪಧ್ರುಮ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಸರ್ವರೂ ಒಂದು ಎಂಬ ಆದರ್ಶವೇ ಮಠವು ಉತ್ತುಂಗಕ್ಕೆ ಏರಲು ಕಾರಣವಾಗಿದೆ. ನಾವೆಲ್ಲ ಮೈಕ್ ಮುಂದೆ ನಿಂತಾಗ ಮಾತ್ರ ಆದರ್ಶ ಮಾತಾಡುತ್ತೇವೆ. ವೇದಿಕೆ ಬಿಟ್ಟು ಕೆಳಿಗಿಳಿದಾಕ್ಷಣ ನೀನು ಯಾವ ಪೈಕಿ, ಆತ ಯಾವ ಜನಾಂಗ ಎಂದು ಜಾತಿಗಳ ತೊಳಲಾಟದಲ್ಲಿ ಮುಳುಗುತ್ತೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ವರೂ ಒಂದೇ ಎಂಬ ಸಿದ್ಧಾರೂಡರ ತತ್ವಗಳನ್ನು ಸಾಧು ಸಂತರು ನಿತ್ಯ ಪ್ರಚಾರ ಮಾಡುತ್ತಾರೆ. ಅದರೂ ಭಾರತೀಯ ಸಮಾಜದಲ್ಲಿ ಇನ್ನೂ ತಾರತಮ್ಯ ಅಳಿದಿಲ್ಲ. ಸಂದೇಹ ಅನುಮಾನಗಳು ಇನ್ನೂ ಉಳಿದೇ ಇವೆ. ಸಿದ್ಧಾರೂಠ ಮಠಕ್ಕೆ ಶ್ರೀಗಳ ದರ್ಶನಕ್ಕೆ ಬಂದಾಗ ಮನಸ್ಸು ನಿರಾಳವಾಗುತ್ತದೆ. ಬಾಹ್ಯ ಪ್ರಪಂಚ ಮರೆತುಹೋಗುತ್ತದೆ. ಸಿದ್ಧಾರೂಢ ಮಠಕ್ಕೆ ಬಂದರೆ ಸಹೋದರತ್ವ ಭಾವನೆ ಜಾಗ್ರತವಾಗುವುದು. ಅದನ್ನು ಗಟ್ಟಿಗೊಳಿಸುವ ಮನಸ್ಸು ಬರುವುದು ಎಂದರು.

ಪ್ರಪಂಚದಲ್ಲಿ ಇಂದು ಅತಿಕ್ರಮಣ, ಯುದ್ಧಗಳಿಂದ ಅಶಾಂತಿ ಅರಾಜಕತೆಯುಂಟಾಗಿದೆ. ಯಾವ ದೇಶ ಉಳಿಯುವುದೋ, ಜಗತ್ತೇ ನಿರ್ಮಾಮವಾಗುವುದೋ ಎಂಬ ಅನುಮಾನ ಬಂದಿದೆ. ಅಂಥ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ಅಧ್ಯಾತ್ಮ ಚಿಂತನೆ ಮಾಡುವ ವೇದಾಂತ ಪರಿಷತ್ ಸಂಘಟನೆ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.