ಹೆಚ್ಚುತ್ತಿರುವ ದ್ವೇಷದ ರಾಜಕಾರಣ: ಬಸವರಾಜ ಹೊರಟ್ಟಿ ವಿಷಾದ

| Published : Jul 06 2025, 11:48 PM IST

ಸಾರಾಂಶ

ಇಂದು ದ್ವೇಷದ ರಾಜಕಾರಣ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ.

ಎಂ.ಪಿ. ಪ್ರಕಾಶ್ ಸಂಸದೀಯ ಪ್ರಶಸ್ತಿ ಸ್ವೀಕರಿಸಿದ ಸಭಾಪತಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಈ ಹಿಂದೆ ರಾಜಕಾರಣಿಗಳಲ್ಲಿ ಪರಸ್ಪರ ಸೌಹಾರ್ದತೆಯ ಭಾವನೆ ಕಾಣುತ್ತಿದ್ದೆವು. ಆದರೆ ಇಂದಿನ ರಾಜಕಾರಣಿಗಳಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಇಂದು ದ್ವೇಷದ ರಾಜಕಾರಣ ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಟಿಎಂಎಇ ಸಂಸ್ಥೆಯ ಜ್ಞಾನ ಗಂಗೋತ್ರಿ ಆವರಣದಲ್ಲಿ ಭಾನುವಾರ ಕರ್ನಾಟಕ ರಾಜಕೀಯ ಅಕಾಡೆಮಿ ವತಿಯಿಂದ ಎಂ.ಪಿ. ಪ್ರಕಾಶ್ ಸಂಸದೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಅಂದಿನ ರಾಜಕಾರಣಿಗಳ ನೈತಿಕ ರಾಜಕಾರಣದ ಪ್ರಜ್ಞೆಯನ್ನು ಇಂದಿನ ಯುವ ರಾಜಕಾರಣಗಳು ಬೆಳೆಸಿಕೊಳ್ಳಬೇಕು. ಯಾವುದೇ ಕೆಲಸ ಕಾರ್ಯ ಇರಲಿ ಅವುಗಳನ್ನು ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೇಷ್ಠ ರಾಜಕಾರಣಿ ಎಂ.ಪಿ. ಪ್ರಕಾಶ್. ಅವರು ಇತರೆ ರಾಜಕಾರಣಿಗಳ ಹಾಗೆ ಸದನದಲ್ಲಿ ಕೂಗಾಡದೆ ಪ್ರಬುದ್ಧತೆ ಹಾಗೂ ಚಾಣಾಕ್ಷತೆಯಿಂದ ಉತ್ತರ ನೀಡುವುದರ ಮೂಲಕ ಸೌಮ್ಯ ಸ್ವಭಾವದ ರಾಜಕಾರಣಿಗಳಾಗಿದ್ದರು ಎಂದರು.ಅವರಂತೆಯೇ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸಂತಸದ ಸಂಗತಿ. ಇಂತಹವರನ್ನು ಜನಗಳು ಬಿಡದೆ ನಿರಂತರವಾಗಿ ಆರಿಸಿ ತರುವ ಕೆಲಸ ಮಾಡಿದರೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಸಂಸದೀಯ ಪಟು ಪ್ರಶಸ್ತಿಯು ಇದು ಕೇವಲ ಪದಕವಲ್ಲ, ಸಂಸತ್ತಿನಲ್ಲಿ ಪದಗಳ ಮೇಲೆ ನಡೆಯುವ ಜವಾಬ್ದಾರಿಯುತ ಪ್ರಶಸ್ತಿಯಾಗಿದೆ ಎಂದರು.ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮಾತನಾಡಿ, ರಾಜಕಾರಣದಲ್ಲಿ ರಾಜಕೀಯ ವ್ಯತ್ಯಾಸಗಳು, ಭಿನ್ನಾಭಿಪ್ರಾಯಗಳು ಸ್ವಾಭಾವಿಕ. ಆದರೆ ಒಬ್ಬ ರಾಜಕಾರಣಿಯಲ್ಲಿ ಉತ್ತಮ ಮನಸ್ಸುಳ್ಳ ಜನಪ್ರತಿನಿಧಿಯ ಗುಣಗಳು ಇರಬೇಕು. ಹಾಗಾದರೆ ಮಾತ್ರ ಅವನು ನಿಜವಾದ ರಾಜಕಾರಣಿಯಾಗಲು ಸಾಧ್ಯ. ಎಲ್ಲಾ ಪಕ್ಷಗಳು ಅವರದೇ ಆದ ಸಿದ್ದಾಂತಗಳನ್ನು ಹೊಂದಿವೆ. ಆದರೆ ಅನುಷ್ಠಾನವು ಉತ್ತಮ ಆಲೋಚನೆಯದ್ದಾಗಿರಬೇಕು. ರಾಜಕಾರಣಿಗೆ ದೂರದೃಷ್ಟಿ ಇರಬೇಕು ಎಂದು ನುಡಿದರು.ಮೇಲ್ಮನೆಯು ಚಿಂತಕರ ಚಾವಡಿಯಾಗಿದೆ. ಅಲ್ಲಿ ಬುದ್ಧಿಜೀವಿಗಳು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ. ಸದನವನ್ನು ಹೊರಟ್ಟಿಯವರು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ದಿನಕಳೆದಂತೆ ಸಾಮಾಜಿಕ ಮೌಲ್ಯಗಳು ಕುಸಿದು ಹೋಗುತ್ತಿರುವುದು ಬೇಸರದ ಸಂಗತಿ. ಸಮಾಜದಲ್ಲಿ ಸಾಮರಸ್ಯ, ಪ್ರೀತಿ, ವಿಶ್ವಾಸ ಹೊಂದಿರಬೇಕು, ಅವುಗಳು ಎಂ.ಪಿ. ಪ್ರಕಾಶ್ ಅವರಲ್ಲಿ ಇದ್ದವು ಎಂದರು.

ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿ, ಶಾಸಕಿ ಎಂ.ಪಿ. ಲತಾ ಮಲ್ಲಿಕಾಜುನ ಮಾತನಾಡಿದರು.

ಕರ್ನಾಟಕ ರಾಜಕೀಯ ಅಕಾಡೆಮಿ ಅಧ್ಯಕ್ಷರು ಎರ‍್ರಿಸ್ವಾಮಿ ಸಿರಿಗೆರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಅಬ್ದುಲ್‌ ರೆಹಮಾನ್, ಮೈದೂರು ರಾಮಣ್ಣ, ಜಿ.ನಂಜನ ಗೌಡ, ಆರುಂಡಿ ನಾಗರಾಜ, ಇಜಂತಕರ್ ಮಂಜುನಾಥ, ಟಿಎಂಎಇ ಸಂಸ್ಥೆಯ ಡೀನ್ ಟಿ.ಎಂ. ರಾಜಶೇಖರ್, ಪ್ರಾಚಾರ್ಯ ಸಿ.ಎಂ. ವೀರೇಶ್ ಹಾಗೂ ಇತರರಿದ್ದರು.