ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸುವುದಿಲ್ಲ: ತಂಗಡಗಿ

| Published : Apr 02 2024, 01:02 AM IST

ಸಾರಾಂಶ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಸಚಿವರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಕಾರಟಗಿರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಹಾಗೂ ಎಲ್ಲ ವರ್ಗದ ಜನರಿಗೆ ನಮ್ಮ ಸರ್ಕಾರ ಈ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಅವರು ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎನ್ನುವುದು ಬಿಜೆಪಿಯವರು ಹರಡಿಸುತ್ತಿರುವ ಸುಳ್ಳು ಸುದ್ದಿ. ಆದರೆ, ಈ ಐದು ಯೋಜನೆಗಳನ್ನು ಸಮಿತಿಯವರು ಎಲ್ಲ ಜನರಿಗೆ ಮುಟ್ಟಿರುವ ಮತ್ತು ತಲುಪುತ್ತಿರುವ ಕುರಿತು ಮತ್ತು ನಿಗಾ ವಹಿಸಬೇಕಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳು ಎಲ್ಲ ಬಡವರ ಪರ ಯೋಜನೆಗಳು, ಈ ಯೋಜನೆಗಳು ಜನಪ್ರಿಯತೆ ಗಳಿಸುತ್ತಿದ್ದಂತೆಲ್ಲ ಬಿಜೆಪಿಯವರಿಗೆ ನಡುಕ ಹುಟ್ಟಿಕೊಂಡಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ಕಾಂಗ್ರೆಸ್ ಸರ್ಕಾರದ ಮುಖ್ಯ ಧ್ಯೇಯ. ನಾವು ಜನರ ಪರ ಆಡಳಿತ ಮಾಡುತ್ತೇವೆಯೇ ಹೊರತು ಜನ -ಜನರ ನಡುವೆ ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡುವುದಿಲ್ಲ ಎಂದರು.

ದೀನ ದಲಿತರ ಶೋಷಿತರ ಪರವಾಗಿ ಈ ಯೋಜನೆಗಳು ಇದ್ದು ಅನುಷ್ಠಾನ ಸಮಿತಿ ಜಿಲ್ಲೆಯಲ್ಲಿ ಈ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುತ್ತಿದೆಯೋ ಎನ್ನುವುದನ್ನು ಕಾಲಕಾಲಕ್ಕೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ತಂಗಡಗಿ ಸೂಚಿಸಿದರು.

ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಲೂಕುವಾರು ಮತ್ತು ಒಂದು ಜಿಲ್ಲಾ ಮಟ್ಟದ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಈ ಸಮಿತಿಗೆ ನೇಮಕವಾದ ಸದಸ್ಯರೆಲ್ಲ ಪಾದರಸದಂತೆ ಕೆಲಸ ಮಾಡಿ ಜನರಿಗೆ ತಲುಪುವ ಹಾಗೆ ಮಾಡಬೇಕು ಎಂದರು.

ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಮಾತನಾಡಿ, ನಮ್ಮ ಸಮಿತಿ ದಿನದ ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಫಲಾನುಭವಿಗಳಿಗೆ ಯೋಜನೆ ವಂಚಿತರಾಗದಂತೆ, ಪ್ರತಿಯೊಬ್ಬರಿಗೂ ಈ ಗ್ಯಾರಂಟಿ ಯೋಜನೆಗಳು ಸುಲಭವಾಗಿ ತಲುಪುವ ಹಾಗೆ ಕೆಲಸ ಮಾಡುತ್ತೇವೆ ಎಂದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾ ಮತ್ತು ತಾಲೂಕು ಸಮಿತಿ ಸದಸ್ಯರು ಸಚಿವ ಶಿವರಾಜ್ ತಂಗಡಗಿ ಅವರನ್ನು ಗೌರವಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಗ್ಯಾರಂಟಿ ಯೋಜನೆ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾಗರಾಜ್ ಅರಳಿ, ಸದಸ್ಯ ಸೋಮನಾಥ ಮರ್ಲಾನಹಳ್ಳಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ದೇವರಾಜ್, ಕರ್ಟೂರಿ ಲಕ್ಷ್ಮೀ, ನಾಗಮ್ಮ ಗಂಗಾವತಿ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಜನಗಂಡೆಪ್ಪ ಸಿದ್ದಾಪುರ, ಉದ್ಯಮಿ ಮೊನ್ನೆ ಕೃಷ್ಣಮೂರ್ತಿ, ರೆಡ್ಡಿ ವೀರರಾಜ್, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಶರಣಬಸವರಾಜ್ ರೆಡ್ಡಿ, ಶರಣಪ್ಪ ಪರಕಿ, ಈ. ಉದಯಕುಮಾರ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.