ಸಾರಾಂಶ
ನಾಗನಹಳ್ಳಿ ದೇಗುಲದಲ್ಲಿ 2025ರ ಕ್ಯಾಲೆಂಡರ್ ಬಿಡುಗಡೆ । ಗ್ರಾಮ ದೇವತೆಗಳಿಗೆ ಅಭಿಷೇಕ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣರಾಜ್ಯ ಸರ್ಕಾರವು ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವವರೆಗೂ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಮಾಜಿ ಶಾಸಕ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ತಾಲೂಕಿನ ಹಿರೀಸಾವೆ ಹೋಬಳಿಯ ನಾಗನಹಳ್ಳಿ ಗ್ರಾಮದ ಶ್ರೀ ಈಶ್ವರ ದೇಗುಲದಲ್ಲಿ ೨೦೨೫ರ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಇರುವವರೆಗೂ ಬಡವ-ಬಲ್ಲಿದರು, ಶೋಷಿತರು ಹಾಗೂ ರೈತರು ಹೆದರುವ ಅಗತ್ಯವಿಲ್ಲ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದಾ ರಾಜ್ಯದ ಜನತೆಯ ಹಿತ ಹಾಗೂ ಅಭಿವೃದ್ಧಿ ಪರ ಚಿಂತನೆ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ಯಾರಂಟಿ ಕಾರ್ಯಕ್ರಮಗಳನ್ನು ತರಲಿದ್ದಾರೆ ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳ ಗೆಲುವಿಗೆ ಇದು ದಿಕ್ಕೂಚಿ ಎಂದರು.ಇತ್ತೀಚಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವುದೇ ಗಿಮಿಕ್ ಆಗಲಿ ಅಥವಾ ಆಮಿಷಗಳಾಗಲಿ ಇರಲಿಲ್ಲ. ಈಗಾಗಲೇ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, ಕಾಂಗ್ರೆಸ್ ಪಕ್ಷದ ಮೇಲೆ ರಾಜ್ಯದ ಜನತೆ ಹೆಚ್ಚಿನ ನಂಬಿಕೆ ಇಟ್ಟಿರುವುದು ಸಾಬೀತಾಗಿದೆ ಅಷ್ಟೆ ಎಂದು ಟೀಕೆ, ಟಿಪ್ಪಣಿ ಮಾಡುವವರಿಗೆ ತಿರುಗೇಟು ನೀಡಿದರು.
ಯಾವುದೇ ಚುನಾವಣೆಗಳು ಬರಲಿ-ಹೋಗಲಿ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಿಗೂ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಕಾರ್ಯಕ್ರಮಗಳಿಗೂ ಯಾವುದೇ ಸಂಬಂಧವಿಲ್ಲ. ಚುನಾವಣೆಗಳು ಮುಗಿದ ಮೇಲೆ ಒಂದೊಂದೇ ಗ್ಯಾರಂಟಿ ಯೋಜನೆಗಳು ನಿಲ್ಲಲಿವೆ ಎಂಬ ವದಂತಿಗೆ ಕಿವಿಗೊಡಬೇಡಿ. ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಸಿಎಂ ಹಾಗೂ ಡಿಸಿಎಂ ಈ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.ಇದಕ್ಕೂ ಮೊದಲು ಎಂ.ಎ.ಗೋಪಾಲಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಮಂಜೇಗೌಡ ಅವರು ಗ್ರಾಮ ದೇವತೆಗಳಿಗೆ ಅಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿ ಬಳಿಕ ಹೊಸ ವರ್ಷದ ಕ್ಯಾಲೆಂಡರ್‌ಗಳನ್ನು ಬಿಡುಗಡೆ ಮಾಡಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಿ.ಎನ್.ಮಂಜುನಾಥ್, ಗ್ರಾಪಂ ಸದಸ್ಯರಾದ ರವಿ, ಬಾಲಕೃಷ್ಣ, ಪ್ರಮುಖರಾದ ಕಬ್ಬಳಿ ಪಟೇಲ್ ವೆಂಕಟೇಶ್, ಹೊಸಹಳ್ಳಿ ಅಣ್ಣಯ್ಯ, ಕಿಶೋರ್, ಪವನ್ ಹಾಗೂ ಇತರರು ಇದ್ದರು.