ಸಾರಾಂಶ
ಎಚ್‌ಎಎಲ್‌ನಲ್ಲಿ ಇತ್ತೀಚೆಗೆ ನಡೆದ ನಿಶ್ಚಿತ ಅವಧಿಯ (ಟಿನ್ಯೂರ್ ಬೇಸಿಸ್) ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಉತ್ತರ ಭಾರತೀಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘವು ಕುವೆಂಪು ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಚ್‌ಎಎಲ್‌ನಲ್ಲಿ ಇತ್ತೀಚೆಗೆ ನಡೆದ ನಿಶ್ಚಿತ ಅವಧಿಯ (ಟಿನ್ಯೂರ್ ಬೇಸಿಸ್) ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಉತ್ತರ ಭಾರತೀಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘವು ಕುವೆಂಪು ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಿದೆ.ಸುಮಾರು 2000ಕ್ಕೂ ಹೆಚ್ಚು ಮಂದಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಎಚ್‌ಎಎಲ್ ವಿರುದ್ಧ ಘೋಷಣೆ ಕೂಗಿದರು. 4 ವರ್ಷದ ನಿಶ್ಚಿತ ಅವಧಿಗಾಗಿ ಅಖಿಲ ಭಾರತ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿದ್ದರಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ. ನೇಮಕಾತಿಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ರಾಜೇಶ್ ಡಿ. ಮಾತನಾಡಿ, ಟಿನ್ಯೂರ್ ಬೇಸಿಸ್ ಆಧಾರದಲ್ಲಿ ಎಲ್‌ಸಿಎ ತೇಜಸ್, ಎಂಆರ್‌ಒ ವಿಭಾಗ, ದುರಸ್ತಿ ವಿಭಾಗ, ಏರ್‌ಕ್ರಾಫ್ಟ್ ಹಾಗೂ ಎಆರ್‌ಡಿಸಿ ವಿಭಾಗ ಸೇರಿ ಒಟ್ಟಾರೆ ಐದು ವಿಭಾಗಕ್ಕೆ 561 ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ 350ಕ್ಕೂ ಹೆಚ್ಚಿನವರು ಹೊರರಾಜ್ಯದವರೇ ಇದ್ದಾರೆ. ಎಲ್‌ಸಿಎ ತೇಜಸ್ ವಿಭಾಗಕ್ಕೆ ಕರೆದಿದ್ದ 169 ಹುದ್ದೆಗಳಲ್ಲಿ 130ಕ್ಕೂ ಹೆಚ್ಚು ಉತ್ತರ ಭಾರತೀಯರ ಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೇಮಕವಾದ ನೌಕರರ ಮಾಹಿತಿಯನ್ನು ನೀಡುವಂತೆ ಹಲವು ಬಾರಿ ಆಡಳಿತ ವರ್ಗಕ್ಕೆ ಪತ್ರ ಬರೆದಿದ್ದರೂ ಸಂಸ್ಥೆ ಮಾಹಿತಿ ನೀಡಿಲ್ಲ. ನೇಮಕಾತಿಗೆ ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಹಿಂದಿ-ಇಂಗ್ಲೀಷ್ ಭಾಷೆಯಲ್ಲಿ ನೀಡುವ ಮೂಲಕ ಉತ್ತರ ಭಾರತದವರು ಆಯ್ಕೆಯಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಅನ್ಯಾಯವಾಗಿದೆ ಎಂದು ದೂರಿದರು.
ಎಲ್‌ಸಿಎ ತೇಜಸ್ ವಿಭಾಗದಲ್ಲಿ ಈಗ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೊಸದಾಗಿ ಬೆಂಗಳೂರು ಸೇರಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಎಚ್‌ಎಎಲ್ ತಾಂತ್ರಿಕ ತರಬೇತಿ ಇಲಾಖೆಯ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲೂ ನೀಡಬೇಕು ಎಂದು ಒತ್ತಾಯಿಸಿದರು.