ಸಾರಾಂಶ
ಮಹಿಳೆಯರಿಲ್ಲದ ಕ್ಷೇತ್ರವೇ ಪ್ರಸ್ತುತ ಇಲ್ಲವಾಗಿರುವುದು ಮಹಿಳೆಯರ ಸಾಮರ್ಥ್ಯಕ್ಕೆ ನಿದರ್ಶನವೇ ಸರಿ ಎಂದು ಪೇಪರ್ ಟೌನ್ ಠಾಣಾ ನಿರೀಕ್ಷಕಿ ಕೆ.ನಾಗಮ್ಮ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದೇ ಸಾಕ್ಷಿ. ಮಹಿಳೆಯರಿಲ್ಲದ ಕ್ಷೇತ್ರವೇ ಇಲ್ಲವಾಗಿರುವುದು ಮಹಿಳೆಯರ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದು ಪೇಪರ್ ಟೌನ್ ಠಾಣಾ ನಿರೀಕ್ಷಕಿ ಕೆ.ನಾಗಮ್ಮ ಹೇಳಿದರು.ಹಳೇ ನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದ ಸಭಾಂಗಣದಲ್ಲಿ ಅಪರಂಜಿ ಅಭಿನಯ ಶಾಲೆ ಹಾಗೂ ಮಹಿಳಾ ಸೇವಾ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷರು ಮತ್ತು ಮಹಿಳೆಯರು ಪರಸ್ಪರ ಗೌರವದಿಂದ ನಡೆದಾಗ ಮಾತ್ರ ಸಾಮರಸ್ಯ ನೆಲೆಸುತ್ತದೆ. ಮಹಿಳಾ ಸೌಲಭ್ಯಗಳು ಏಳಿಗೆಗೆ ಕಾರಣವಾಗಬೇಕೇ ಹೊರತು, ಸ್ವೇಚ್ಛಾ ಚಾರಕ್ಕೆ ಕಾರಣವಾಗಬಾರದು. ಮಹಿಳೆಯರನ್ನು ಒಗ್ಗೂಡಿಸುವುದು ಕಷ್ಟದ ಕೆಲಸ ಎಂದರು.ಮಹಿಳೆಯರಿಗೆ ಕಾನೂನು ತಿಳಿವಳಿಕೆ ಮತ್ತು ಸ್ವರಕ್ಷಣೆ ವಿದ್ಯೆಗಳ ಕಲಿಕೆ ಮುಖ್ಯ. ಮಹಿಳೆಯರು ಸಂಘಟಿತರಾದರೆ ನಿಯಮಗಳ ಅರಿವು ಮೂಡಿಸಲು ಆರಕ್ಷಕ ಇಲಾಖೆ ನೆರವು ನೀಡುವುದಾಗಿ ತಿಳಿಸಿದರು.
ಆಶಯ ನುಡಿಗಳನ್ನಾಡಿದ ಅಪರಂಜಿ ಅಭಿನಯ ಶಾಲೆ ಅಧ್ಯಕ್ಷ ಶಿವರಾಜ್, ಹೆಣ್ಣುಮಕ್ಕಳು ಸುಖ, ಸಂತೋಷದಿಂದ ಇದ್ದರೆ ಅಂತಹ ಕುಟುಂಬವೂ ನೆಮ್ಮದಿಯಿಂದ ಇರುತ್ತದೆ. ಹೆಣ್ಣು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೊಂದು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್, ಪ್ರಧಾನ ಕಾರ್ಯದರ್ಶಿ ಶೋಭಾ ಗಂಗರಾಜ್, ಖಜಾಂಚಿ ಜಯಂತಿ ನಾಗರಾಜ ಶೇಟ್, ಅಪರಂಜಿ ಅಭಿನಯ ಶಾಲೆಯ ಉಪಾಧ್ಯಕ್ಷೆ ಅನುಸೂಯ ಎಂ., ಪ್ರಧಾನ ಕಾರ್ಯದರ್ಶಿ ಪುಷ್ಪಲತಾ ಸಿ.ಎಚ್. ಸೇರಿದಂತೆ ಹಲವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕಮಲಕುಮಾರಿ, ಶೋಭಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಅನಂತರ ಹಲವು ಮಹಿಳಾ ತಂಡಗಳಿಂದ ಗಾಯನ ಹಾಗೂ ನೃತ್ಯ ಪ್ರದರ್ಶನ ನಡೆಯಿತು.