ಸಾರಾಂಶ
ಹುಬ್ಬಳ್ಳಿ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನ ವಾರಂಟ್ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ. ಕಾಂಗ್ರೆಸ್ಸಿನವರೇ ಇದಕ್ಕೆಲ್ಲ ಪ್ರಮುಖ ಸೂತ್ರದಾರರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದೇ ನೋಟಿಸ್ ನೀಡಿ ಯಡಿಯೂರಪ್ಪರ ಬಂಧನಕ್ಕೆ ವಾರಂಟ್ ನೀಡಲಾಗಿತ್ತು, ಇದರ ಹಿಂದೆ ರಾಜ್ಯ ಸರ್ಕಾರದ ಷಡ್ಯಂತ್ರ ಅಡಗಿತ್ತು. ಜಾಮೀನುರಹಿತ ವಾರಂಟ್ ಹೊರಡಿಸಿರುವುದೇ ತಪ್ಪು ಎಂದು ಕೋರ್ಟ್ ಹೇಳಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರ ನಿರ್ದೇಶನದ ಮೇಲೆ ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಈ ರೀತಿಯಾಗಿ ಸೇಡಿನ ರಾಜಕೀಯಕ್ಕೆ ಮುಂದಾಗಿದ್ದಾರೆ. ನ್ಯಾಯಾಲಯ ತಕ್ಕ ಉತ್ತರ ನೀಡಿದ್ದು, ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದರು.
ಮತಾಂದರಿಗೆ ಭಯವೇ ಇಲ್ಲ:ಧಾರವಾಡದಲ್ಲಿ ಬಜರಂಗದಳದ ಸೋಮಶೇಖರ್ ಮೇಲೆ ಅನ್ಯಕೋಮಿನ ಗುಂಪು ಹಲ್ಲೆ ವಿಚಾರವಾಗಿ ಉತ್ತರಿಸಿದ ಜೋಶಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದ್ದು, ಹಿಂದೂಪರ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿವೆ. ಧಾರವಾಡದ ಬಜರಂಗದಳದ ಕಾರ್ಯಕರ್ತ ಸೋಮಶೇಖರ ಅಕ್ರಮ ಗೋ ಸಾಗಾಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಕೆಲ ಮುಸ್ಲಿಂ ಮತಾಂದರು ಅವನ ಮೇಲೆ ಹಲ್ಲೆ ಮಾಡಿದ್ದಾರೆ. ಇವರಿಗೆ ರಾಜ್ಯ ಸರ್ಕಾರ, ಪೊಲೀಸರ ಮೇಲೆ ಭಯವೇ ಇಲ್ಲದಂತಾಗಿದೆ ಎಂದರು.
ಆರೋಪಿಗಳನ್ನು ಬಂಧಿಸಿ:ಈ ಪ್ರಕರಣ ಕುರಿತಂತೆ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಈ ಕೂಡಲೇ ಹಲ್ಲೆ ಮಾಡಿದ ಆರೋಪಿಗಳ ಬಂಧನ ಮಾಡಲು ಆಗ್ರಹಿಸುತ್ತೇನೆ. ಇಲ್ಲವಾದರೆ ಉಗ್ರವಾದ ಹೋರಾಟಕ್ಕೆ ನಾವು ಸಿದ್ಧರಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜನಜಾಗೃತಿಗೆ ಸೂಚನೆ:ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯಲ್ಲಿ ಡೆಂಘೀ ಪ್ರಕರಣ ಹೆಚ್ಚಾದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿ, ಕಳೆದ ದಿನವೇ ಜಿಲ್ಲೆಯ ಡೆಂಘೀ ವಿಚಾರವಾಗಿ ಅಧಿಕಾರಿಗಳ ಸಭೆ ಮಾಡಲಾಗಿದ್ದು, ಈ ಕುರಿತು ಜನಜಾಗೃತಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ, ಪ್ರತಿ ತಾಲೂಕಿಗೆ ಜಿಲ್ಲಾಮಟ್ಟದ ನೋಡಲ್ ಅಧಿಕಾರಿ ನೇಮಿಸಬೇಕು. ಮಕ್ಕಳು ಸೇರಿ ಮಹಿಳೆಯರಿಗೆ ಡೆಂಘೀ ಜಾಗೃತಿಗೆ ಸೂಚಿಸಲಾಗಿದ್ದು, ಜಿಲ್ಲೆಯಲ್ಲಿ ಫಾಗಿಂಗ್ ಕಾರ್ಯ ನಡೆಸಲು ತಿಳಿಸಲಾಗಿದೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಪರಿಣಾಮಕಾರಿ ಜಾಗೃತಿಗೆ ಒತ್ತು ನೀಡಲು ಹೇಳಲಾಗಿದೆ. ರಾಜ್ಯ ಸರ್ಕಾರ ಇಲಾಖೆಗೆ ಅಗತ್ಯ ಸಿಬ್ಬಂದಿ ನಿಯೋಜನೆಗೆ ಒತ್ತು ನೀಡಬೇಕು ಎಂದರು.
ಒಂದೇ ರೀತಿಯಾಗಿ ನೋಡಬೇಡಿ:ಕೃಷಿ ರಾಯಭಾರಿಯಾಗಿದ್ದ ನಟ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದು, ಚಿತ್ರನಟರನ್ನು ಕೃಷಿ ರಾಯಭಾರಿಯಾಗಿ ನೇಮಕಗೊಳಿಸಬೇಡಿ ಎಂಬ ಕೂಗು ಕೇಳಿ ಬಂದಿರುವ ವಿಚಾರಕ್ಕೆ ಉತ್ತರಿಸಿದ ಜೋಶಿ, ಯಾರೋ ಇಬ್ಬರು ತಪ್ಪು ಮಾಡಿದರೆ ಎಲ್ಲರನ್ನೂ ಗುರಿಯಾಗಿಸುವುದು ಸರಿಯಲ್ಲ, ಅಭಿಮಾನಿಗಳ ಅತಿರೇಕದ ವರ್ತನೆಯನ್ನು ನಟರು ನಿಯಂತ್ರಿಸಬೇಕು. ಎಲ್ಲರನ್ನೂ ಒಂದೇ ರೀತಿಯಾಗಿ ನೋಡಬಾರದು. ಯಾವುದೇ ಸರ್ಕಾರವಾಗಲಿ ಒಳ್ಳೆಯವರನ್ನು ಕೃಷಿ ರಾಯಭಾರಿಯಾಗಿ ಬಳಸಿಕೊಳ್ಳಬೇಕು ಎಂದರು.