ಮಾನಸಿಕ ಆರೋಗ್ಯದಿಂದ ಮಾತ್ರ ಸಮಾಜದ ಸ್ವಾಸ್ಥ್ಯ ಸಾಧ್ಯ

| Published : Apr 05 2025, 12:47 AM IST

ಮಾನಸಿಕ ಆರೋಗ್ಯದಿಂದ ಮಾತ್ರ ಸಮಾಜದ ಸ್ವಾಸ್ಥ್ಯ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಸಿಕ ಆರೋಗ್ಯದಿಂದ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿದ್ದು, ಇದರಿಂದ ಅಪರಾಧ ಮುಕ್ತ ಪರಿಸರ ನಿರ್ಮಾಣ ಮಾಡಬಹುದು ಎಂದು ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿ ತಿಳಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಬಾಬಣ್ಣರವರು ಮಾತನಾಡಿ, ಉತ್ತಮ ಹವ್ಯಾಸಗಳಿಂದ ನಮ್ಮಲ್ಲಿರುವ ಕಲ್ಮಶಗಳನ್ನು ತೊಡೆಯಲು ಸಾಧ್ಯವಿದೆ. ನಮ್ಮ ಮಾನಸಿಕ ಸ್ಥಿಮಿತತೆಯಿಂದ ಕೆಟ್ಟ ಆಲೋಚನೆಗಳನ್ನು ನಿಯಂತ್ರಿಸಬಹುದು. ಯೋಗಾಭ್ಯಾಸವು ನಿರಂತರ ಪ್ರಕ್ರಿಯೆಯಾಗಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಾನಸಿಕ ಆರೋಗ್ಯದಿಂದ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿದ್ದು, ಇದರಿಂದ ಅಪರಾಧ ಮುಕ್ತ ಪರಿಸರ ನಿರ್ಮಾಣ ಮಾಡಬಹುದು ಎಂದು ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೋ ಸನ್ನಿವೇಶದಲ್ಲಿ ಆಕಸ್ಮಿಕವಾಗಿ ಆದ ಘಟನೆಗಳಿಂದ ಅಪರಾಧಿಗಳಾಗಿ ಬಂಧಿಖಾನೆಯಲ್ಲಿದ್ದು, ತಮ್ಮನ್ನು ಸುಧಾರಣೆ ಮಾಡಿಕೊಳ್ಳುವುದು ಮುಖ್ಯ. ಬಂಧಿಖಾನೆಗಳು ಶಿಕ್ಷಾ ಕೇಂದ್ರಗಳಲ್ಲ ಅವು ಪರಿವರ್ತನಾ ಮತ್ತು ಸುಧಾರಣಾ ಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳುವಲ್ಲಿ ನಮ್ಮ ಆಲೋಚನೆಗಳನ್ನು ಹವ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಗುಣ ನಡತೆಗಳಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ ಅದಕ್ಕೆ ಪೂರಕವಾಗಿ ಧ್ಯಾನ, ಯೋಗಾಭ್ಯಾಸ ಉತ್ತಮ ಮಾರ್ಗಗಳಾಗಿವೆ ಎಂದು ತಿಳಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಬಾಬಣ್ಣರವರು ಮಾತನಾಡಿ, ಉತ್ತಮ ಹವ್ಯಾಸಗಳಿಂದ ನಮ್ಮಲ್ಲಿರುವ ಕಲ್ಮಶಗಳನ್ನು ತೊಡೆಯಲು ಸಾಧ್ಯವಿದೆ. ನಮ್ಮ ಮಾನಸಿಕ ಸ್ಥಿಮಿತತೆಯಿಂದ ಕೆಟ್ಟ ಆಲೋಚನೆಗಳನ್ನು ನಿಯಂತ್ರಿಸಬಹುದು. ಯೋಗಾಭ್ಯಾಸವು ನಿರಂತರ ಪ್ರಕ್ರಿಯೆಯಾಗಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಬಿ.ಕೆ. ಮೀನಾ ಮಾತನಾಡಿ, ಪರಮಾತ್ಮ ನಿರಾಕಾರ ಸುಗುಣ ನಮ್ಮ ಮನಸ್ಸು ದೇವಾಲಯವಿದ್ದಂತೆ. ಹಾಗಾಗಿ ಮನಸ್ಸು ನಿರ್ಮಲವಾಗಿರಬೇಕು, ಉತ್ತಮ ಆಲೋಚನೆಯಿಂದ ಹವ್ಯಾಸಗಳಿಂದ ಅದು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ, ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಎಚ್.ಎ. ಪರಮೇಶ್, ಪ್ಯಾನಲ್ ವಕೀಲರಾದ ರಾಮು ಹಾಗೂ ಇತರರು ಉಪಸ್ಥಿತರಿದ್ದರು.