ಪ್ರವಾಸಿಗರಿಗೂ ತಟ್ಟಿದ ಬಿಸಿಲತಾಪ!

| Published : Apr 19 2025, 12:42 AM IST

ಸಾರಾಂಶ

ಏಪ್ರಿಲ್‌ ಮೊದಲ ವಾರದಲ್ಲೇ ರಣಬಿಸಿಲು ಪ್ರವಾಸಿಗರನ್ನು ಬಸವಳಿಯುವಂತೆ ಮಾಡಿದೆ. ಬೆಳಗ್ಗೆ 10 ಗಂಟೆಯಾದರೆ ಸಾಕು ಬಿಸಿಲು ನೆತ್ತಿ ಸುಡಲಾರಂಭಿಸುತ್ತದೆ.

ಆರ್‌.ನರಸಿಂಹಮೂರ್ತಿ

ಕನ್ನಡಪ್ರಭ ವಾರ್ತೆ ಅಮೀನಗಡ

ಸಾಲು ಸಾಲು ಸರ್ಕಾರಿ ರಜೆಗಳು... ಜೊತೆಗೆ ಶಾಲೆಗಳಿಗೆ ಬೇಸಿಗೆ ರಜೆ ಬೇರೆ...ಇಂತಹ ಅಪರೂಪದ ದಿನಗಳಲ್ಲಿ ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಸ್ಥಳಗಳು ಈ ವರ್ಷ ಜನರಿಲ್ಲದೆ ಬಿಕೋ ಎನ್ನುತ್ತಿವೆ. ಹೌದು, ಸರ್ಕಾರಿ ರಜೆಗಳು ಬಂದರೆ ಸಾಕು ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಐಹೊಳೆ, ಬದಾಮಿ, ಪಟ್ಟದಕಲ್ಲು, ಕೂಡಲಸಂಗಮ, ಆಲಮಟ್ಟಿಗಳಲ್ಲಿ ದೇಶಿ ಹಾಗೂ ವಿದೇಶಿ ಪ್ರವಾಸಿಗರ ದಂಡೇ ಕಂಡುಬರುತ್ತಿತ್ತು. ಆದರೆ, ಈ ಬಾರಿ ರಣಬಿಸಿಲಿಗೆ ಬೆಚ್ಚಿದ ಜನತೆ ಹೊರಹೋಗಲು ಹಿಂದೇಟು ಹಾಕುತ್ತಿರುವುದರಿಂದ ಜನರಿಲ್ಲದೆ ಬೋರು ಹೊಡೆಯುತ್ತಿವೆ.

ಸಾಮಾನ್ಯವಾಗಿ ಏಪ್ರಿಲ್ ಎರಡು ವಾರಗಳು ಪ್ರವಾಸಿಗರ ಸಂಖ್ಯೆ ಸಾಮಾನ್ಯವಾಗಿದ್ದು, ಅಕ್ಟೋಬರ್‌ನಿಂದ ಫೆಬ್ರುವರಿ ಅಂತ್ಯದವರೆಗೂ ದೇಶೀಯ, ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಆದರೆ, ಈ ಬಾರಿ ಶೇ.5ರಷ್ಟು ಪ್ರವಾಸಿಗರ ಕೊರತೆಯಾಗಿ ಐಹೊಳೆ ಬೋರಿಡುತ್ತಿದೆ. ಇದಕ್ಕೆ ಕಾರಣ ಏಪ್ರಿಲ್ ತಿಂಗಳು ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಬ್ಯುಸಿಯಾದರೆ, ಮಧ್ಯಮ ವರ್ಗದ ಜನತೆ ಬೆಲೆ ಏರಿಕೆಯಿಂದ ಪ್ರವಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಈ ಬಾರಿ ಬಿಸಿಲಿನ ತಾಪ ದಾಖಲೆಮಟ್ಟದಲ್ಲಿ ಏರಿಕೆ ಆಗಿರುವುದು ಪ್ರವಾಸಿಗರ ಸಂಖ್ಯೆ ಇಳಿಮುಖವಾಗೋದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಸ್ಥಳೀಯ ಪ್ರವಾಸಿ ಮಾರ್ಗದರ್ಶಿಗಳು.

ಬಾದಾಮಿಗೆ ಬನಶಂಕರಿ ವರದಾನ:

ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದರೂ ಬಾದಾಮಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ. ಇದಕ್ಕೆ ಬಾದಾಮಿಗೆ ತಾಯಿ ಬನಶಂಕರಿ ದೇವಿಯ ಕೃಪೆ. ಆದರೆ ಈ ಬಾರಿ ಐತಿಹಾಸಿಕ ತಾಣ ಬಾದಾಮಿಗೆ ಬರುವ ಪ್ರವಾಸಿಗರು ಮುಂದಿನ ತಾಣಗಳ ವೀಕ್ಷಣೆಗೆ ತೆರಳದೇ ವಾಪಸ್‌ ಹೋಗುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಪಟ್ಟದಕಲ್ಲು, ಐಹೊಳೆಗಳು ಕೇವಲ ಶಿಲ್ಪ ಚಾತುರ್ಯ ನೋಡಬಹುದು. ಆದರೆ ಬಾದಾಮಿ ಶಿಲ್ಪ ಚಾತುರ್ಯದ ಜೊತೆಗೆ ತಾಯಿ ಬನಶಂಕರಿದೇವಿ ತಾಣವಾಗಿರುವ ಬಾದಾಮಿಯಲ್ಲಿ ಪ್ರವಾಸಿಗರ ಜೊತೆಗೆ ಧಾರ್ಮಿಕತೆಯಲ್ಲಿ ಆಸಕ್ತಿ ಹೊಂದಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಈ ಭಾಗದಲ್ಲಿ ಜಲಕ್ರೀಡೆ, ಮಕ್ಕಳ- ಹಿರಿಯರ ಮನರಂಜನಾ ಕೇಂದ್ರಗಳು ಇಲ್ಲದಿರುವುದು ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದೆ ಎನ್ನುತ್ತಾರೆ ಪ್ರವಾಸಿ ಮಾರ್ಗದರ್ಶಿಗಳಾದ ಕೊಟ್ರೇಶ್ ಸಾರಂಗಮಠ, ವೀರೇಶ ಅಂಗಡಿ, ಪರಶುರಾಮ ಗೋಡಿ ಮುಂತಾದವರು.

ಬಿಸಿಲಿನ ತಾಪಕ್ಕೆ ಜನರು ಹೈರಾಣ:

ಏಪ್ರಿಲ್‌ ಮೊದಲ ವಾರದಲ್ಲೇ ರಣಬಿಸಿಲು ಪ್ರವಾಸಿಗರನ್ನು ಬಸವಳಿಯುವಂತೆ ಮಾಡಿದೆ. ಬೆಳಗ್ಗೆ 10 ಗಂಟೆಯಾದರೆ ಸಾಕು ಬಿಸಿಲು ನೆತ್ತಿ ಸುಡಲಾರಂಭಿಸುತ್ತದೆ. ಅದರಲ್ಲೂ ವಾಹನಗಳು ಬಿಸಿಲಿಗೆ ಕಾದು ಕಬ್ಬಲಿಯಂತಾಗುವುದರಿಂದ ಮಕ್ಕಳು, ಮಹಿಳೆಯರು, ವಯಸ್ಸಾದವರು ವಿಲ ವಿಲ ಎನ್ನುತ್ತಿದ್ದಾರೆ. ಎಷ್ಟೇ ತಂಪು ಪಾನೀಯ ಕುಡಿದರೂ ತೀರುತ್ತಿಲ್ಲ. ಮೊದಲೆ ಇಲ್ಲಿನ ಬಹುತೇಕ ಐತಿಹಾಸಿಕ ತಾಣಗಳು ಕಲ್ಲಿನ ಹಾಸುಗಳಲ್ಲೇ ಇರುವುದರಿಂದ ಬಿಸಿಲು ಮತ್ತಷ್ಟು ಪ್ರಖರವಾಗಿರುತ್ತದೆ. ಈ ವರ್ಷ ಏಪ್ರಿಲ್‌ ತಿಂಗಳಲ್ಲೇ ತಾಪಮಾನ 37 ಸೆಲ್ಸಿಯಸ್‌ ದಾಟಿರುವುದರಿಂದ ಜನರು ಮನೆಗಳಿಂದ ಹೊರಬರುಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಲು ಪ್ರಮುಖ ಕಾರಣವಾಗಿದೆ.