ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅಮೆರಿಕಾ ಹಾಗೂ ಇಸ್ರೇಲ್, ಇರಾನ್ ದೇಶಗಳ ಯುದ್ಧದಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ‌ ಸಿಲುಕಿದ್ದು, ಬೆಳೆದ ಕಾಫಿ ಗೋದಾಮಿನಲ್ಲಿ ಕೊಳೆಯುವಂತಾಗಿದೆ. ರಫ್ತಿಗೆ ಮುಂದಾಗಿದ್ದ ವ್ಯಾಪಾರಿಗಳ ಸರಕು ಸಮುದ್ರದ ಮಧ್ಯ ಸಿಲುಕಿಕೊಂಡಿದೆ.

ಭಾರತ ಅದರಲ್ಲೂ ಪಶ್ವಿಮಘಟ್ಟದಲ್ಲಿ ಬೆಳೆಯುವ ಉತ್ತಮ ಗಣಮಟ್ಟದ ಕಾಫಿಗೆ ಯುರೋಪ್ ಹಾಗೂ ಅರಬ್ ದೇಶಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಭಾರತದಲ್ಲಿ ಎಷ್ಟು ಕಾಫಿ ಉತ್ಪಾದನೆಯಾಗುತ್ತದೋ ಅದೆಲ್ಲ ಕೆಲವೇ ತಿಂಗಳಲ್ಲಿ ರಫ್ತಾಗುತ್ತಿತ್ತು.

ಮಂಗಳೂರು ಹಾಗೂ ಕೊಚ್ಚಿನ್ ಬಂದರ್‌ ಮೂಲಕ ಪ್ರತಿವರ್ಷ 2.50 ಲಕ್ಷ ಟನ್ ಕಾಫಿ ವಿಶ್ವದ 130ಕ್ಕೂ ಅಧಿಕ ದೇಶಗಳಿಗೆ ರಫ್ತಾಗುತ್ತದೆ. ಭಾರತದ ಕಾಫಿ ಜನವರಿಯಲ್ಲೇ ಕೊಯ್ಲು ಮುಗಿದು ಮಾರುಕಟ್ಟೆಗೆ ಬರುತ್ತದೆ. ಹೀಗೆ ಖರೀದಿಸಿದ ಕಾಫಿಯನ್ನು ಮಾರ್ಚ್ ನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಈ ವರ್ಷದ ಆರಂಭದಲ್ಲಿ ಕಾಫಿ ರಫ್ತು ಉತ್ತಮವಾಗಿತ್ತು. ಆದರೆ ವಿದೇಶಗಳಿಂದ ಭಾರತೀಯ ಕಾಫಿಗೆ ಹೆಚ್ಚಿನ ಬೇಡಿಕೆ ಬಂದ ಸಮಯದಲ್ಲೇ ಯುದ್ಧ ಆರಂಭಗೊಂಡಿತ್ತು. ಹೀಗಾಗಿ, ಹಡಗು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

ಯುದ್ಧ ಆರಂಭವಾದ ಎರಡೇ ದಿನಕ್ಕೆ ಮಂಗಳೂರಿನಿಂದ ಅರಬ್ ರಾಷ್ಟ್ರಗಳಿಗೆ ತೆರಳಬೇಕಿದ್ದ ಎಲ್ಲ ಹಡಗುಗಳು, ಅರಬ್ ರಾಷ್ಟ್ರ ಗಳಿಂದ ಮಂಗಳೂರಿಗೆ ಬರಬೇಕಿದ್ದ ಹಡಗುಗಳು ಬಂದರಿನಲ್ಲೇ ಉಳಿದಿವೆ. ಒಂದು ಸಾವಿರ ಕೋಟಿ ರು.ವ್ಯವಹಾರ: ಕಾಫಿ ರಫ್ತಿನಿಂದ ವಾರ್ಷಿಕ ಸುಮಾರು ಒಂದು ಸಾವಿರ ಕೋಟಿ ವಹಿವಾಟು ನಡೆಯುತ್ತಿತ್ತು. ಆದರೆ ಇದೀಗ ಯುದ್ಧದಿಂದ ಕಾಫಿ ಮಾರಾಟವಾಗುತ್ತಿಲ್ಲ. ರಾಜ್ಯದಲ್ಲಿ ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು, ಹಾಸನ ಇತರೆ ಜಿಲ್ಲೆಗಳಲ್ಲಿ ರಫ್ತಿಗೆ ಸಿದ್ಧವಾಗಿರುವ ಲಕ್ಷಾಂತರ ಟನ್ ಕಾಫಿ ಈಗ ಗೋಡಾನ್‌ನಲ್ಲೇ ಉಳಿದಿದೆ. ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಕಾಫಿಗೆ ಹೆಚ್ಚಿನ ಬೇಡಿಕೆ:


ರಫ್ತಾಗುವ ಒಟ್ಟು ಕಾಫಿ ಪೈಕಿ ಶೇ.35 ರಷ್ಟು ಕಾಫಿ ಗಲ್ಫ್ ರಾಷ್ಟ್ರಗಳಿಗೆ, ಉಳಿದದ್ದು ಯೂರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತದೆ. ಉತ್ತಮ ಗುಣಮಟ್ಟದ ಹೆಚ್ಚು ಮೌಲ್ಯದ ಕಾಫಿ ಪೂರ್ಣ ಪ್ರಮಾಣದಲ್ಲಿ ಅರಬ್ ರಾಷ್ಟ್ರಗಳಿಗೆ ರಫ್ತಾಗುತ್ತದೆ.

ಮಧ್ಯ ಪ್ರಾಚ್ಯದ ಜೋರ್ಡಾನ್, ಸೌದಿ ಅರೇಬಿಯಾ, ಯುಎಇ, ಕುವೈತ್, ಈಜಿಪ್ಟ್, ಓಮಾನ್, ಸಿರಿಯಾ, ಇಸ್ರೇಲ್‌ನಂತಹ ದೇಶಗಳೆಲ್ಲವೂ ಭಾರತದ ಕಾಫಿ ಖರೀದಿದಾರರೇ ಆಗಿದ್ದಾರೆ. ಯುದ್ಧದ ಪರಿಸ್ಥಿತಿಯಿಂದ ಕಳೆದ 10 ದಿನದಿಂದ ರಫ್ತು ಸ್ಥಗಿತ ಗೊಂಡಿದೆ. ಇನ್ನಷ್ಟು ದಿನ ಈ ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆ ಉದ್ಯಮ ನಷ್ಟ ಅನುಭವಿಸುವಂತಾಗಿದೆ ಎಂದು ರಫ್ತುದಾರರು ಹೇಳುತ್ತಾರೆ.

ರೈತರಿಂದ ಖರೀದಿ ಸ್ಥಗಿತ: ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಈಗ ಕಾಫಿಗೆ ಉತ್ತಮ ಬೆಲೆ ಇದೆ. ಆದರೆ ಸದ್ಯ ವ್ಯವಸ್ಥೆ ಅಸ್ತವ್ಯಸ್ಥ ಗೊಂಡಿರುವುದರಿಂದ ವ್ಯಾಪಾರಸ್ಥರು ರೈತರಿಂದ ಕಾಫಿ ಖರೀದಿಗೆ ಮುಂದಾಗುತ್ತಿಲ್ಲ. ಇದು ಪರೋಕ್ಷವಾಗಿ ಬೆಳೆಗಾರಿಗೆ ನಷ್ಟವಾಗುತ್ತಿದೆ.-- ಬಾಕ್ಸ್.....

ಬ್ರೆಜಿಲ್ ಕಾಫಿ ಜೂನ್‌ಗೆ ಮಾರುಕಟ್ಟೆಗೆ

ವಿಶ್ವದಲ್ಲೇ ಅತಿ ಹೆಚ್ಚು ಕಾಫಿ ಬೆಳೆಯುವ ಬ್ರೆಜಿಲ್‌ನ ಕಾಫಿ ಮೇ- ಜೂನ್‌ಗೆ ಮಾರುಕಟ್ಟೆಗೆ ಬರಲಿದೆ. ಆದರೆ ಬ್ರಿಜಿಲ್ ಕಾಫಿ ಗಿಂತಲೂ ಭಾರತೀಯ ಕಾಫಿ ಗುಣಮಟ್ಟ ಚೆನ್ನಾಗಿ ರುವ ಹಿನ್ನೆಲೆಯಲ್ಲಿ ಕಾಫಿ ಬ್ಲೆಂಡಿಂಗ್‌ಗೆ ಭಾರತೀಯ ಕಾಫಿ ಅನಿವಾರ್ಯ. ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಬ್ರಿಜಿಲ್ ಕಾಫಿ ಎಷ್ಟೇ ಬಂದರೂ ಅದರ ಬ್ಲೆಂಡಿಂಗ್‌ಗೆ ಭಾರತೀಯ ಕಾಫಿ ಬೇಕೇ ಬೇಕು. ಹೀಗಾಗಿಯೇ ಕಾಫಿ ಉದ್ಯಮಿಗಳು ಭಾರತೀಯ ಕಾಫಿ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಈ ಯುದ್ಧದಿಂದ ಬೆಳೆಗಾರ ರಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ನಷ್ಟ ಅನುಭವಿಸುವಂತಾಗಿದೆ.-- ಕೋಟ್......

ಯುದ್ಧದಿಂದ ಹಡಗುಗಳ ಸಂಚಾರ ಬಂದ್ ಹಿನ್ನೆಲೆ ಕಾಫಿ ರಫ್ತು ಸಾಧ್ಯವಾಗುತ್ತಿಲ್ಲ. ವರ್ತಕರು ಬೆಳೆಗಾರರ ಬಳಿ ಕಾಫಿ ಖರೀದಿಗೆ ಬರುತ್ತಿಲ್ಲ. ಇದರಿಂದ ಬೆಳೆಗಾರರಿಗೂ ನಷ್ಟ. ಇನ್ನು ಕಾಫಿ ರಫ್ತು ಮಾಡುವವರು ಕೋಟ್ಯಂತರ ರು. ಬಂಡವಾಳ ಹೂಡಿದ್ದಾರೆ. ಆದರೆ ಕಾಫಿಯನ್ನು ವಿದೇಶಗಳಿಗೆ ಕಳುಹಿಸಲು ಸಾಧ್ಯವಾಗದಿರುವುದರಿಂದ ಅವರೂ ನಷ್ಟ ಅನುಭವಿಸುತ್ತಿದ್ದಾರೆ.

ದೇವವೃಂದ ದಿನೇಶ್, ಅಧ್ಯಕ್ಷ, ಭಾರತೀಯ ಕಾಫಿ ಮಂಡಳಿ--

ಫೋಟೋ

ಚಿಕ್ಕಮಗಳೂರಿನ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿರುವ ಸಾವಿರಾರು ಚೀಲ ಕಾಫಿ.