ಸಾರಾಂಶ
ಇಲ್ಲಿನ ನಂದಿಕೂರಿನಲ್ಲಿ ಕೋಟಿ - ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ನಡೆದ 32ನೇ ವರ್ಷದ ಹೊನಲು ಬೆಳಕಿನ ಕೋಟಿ - ಚೆನ್ನಯ ಕಂಬಳೋತ್ಸವಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪತ್ನಿ ಸಮೇತರಾಗಿ ಆಗಮಿಸಿ ಕಂಬಳ ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಕಾಪು
ಕಂಬಳ ಕರಾವಳಿಯಲ್ಲಿ ಪರಂಪರಾಗತವಾಗಿ ನಡೆದು ಬಂದ ಕ್ರೀಡೆ. ಈ ಪರಂಪರೆಯನ್ನು ಉಳಿಸುವುದು ಬಹಳ ಮುಖ್ಯ. ಬೆಂಗಳೂರು ಭಾಗದಲ್ಲಿ ಜಾತ್ರೆಗಳು ನಡೆಯುತ್ತದೆ. ಕಂಬಳವೆಂದರೆ ಬೆಂಗಳೂರಿಗರಿಗೆ ಗೊತ್ತಿಲ್ಲ, ಅಲ್ಲಿ ಸಂಬಳ ಗೊತ್ತು. ಕಂಬಳವು ಬಹಳ ಶ್ರಮ, ಶ್ರದ್ಧೆಯಿಂದ ನಡೆಯುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.ಅವರು ಇಲ್ಲಿನ ನಂದಿಕೂರಿನಲ್ಲಿ ಕೋಟಿ - ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ನಡೆದ 32ನೇ ವರ್ಷದ ಹೊನಲು ಬೆಳಕಿನ ಕೋಟಿ - ಚೆನ್ನಯ ಕಂಬಳೋತ್ಸವಕ್ಕೆ ಪತ್ನಿ ಸಮೇತರಾಗಿ ಆಗಮಿಸಿ ಕಂಬಳ ವೀಕ್ಷಿಸಿದರು.
ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು. ಕಂಬಳ ಸಮಿತಿ ವತಿಯಿಂದ ಛಲವಾದಿ ನಾರಾಯಣ ಸ್ವಾಮಿ ದಂಪತಿಯನ್ನು ಸನ್ಮಾನಿಸಲಾಯಿತು.ಬಂಜಾರ ಗ್ರೂಪ್ ಸಿ.ಎಂ.ಡಿ. ಪ್ರಕಾಶ್ ಶೆಟ್ಟಿ, ಉದ್ಯಮಿ ರವಿ ಸುಂದರ್ ಶೆಟ್ಟಿ, ಅಡ್ವೆ- ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಅಧ್ಯಕ್ಷ ಅಡ್ವೆ ಮೂಡ್ರಗುತ್ತು ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನಚಂದ್ರ ಸುವರ್ಣ ಅಡ್ವೆ, ನವೀನ್ ಚಂದ್ರ ಜೆ. ಶೆಟ್ಟಿ, ಮಿಥುನ್ ಹೆಗ್ಡೆ, ದಿನಕರ ಬಾಬು ಮತ್ತಿತರರು ಉಪಸ್ಥಿತರಿದ್ದರು. ಸಾಯಿನಾಥ್ ನಿರೂಪಿಸಿದರು.