ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಐಎಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಅವರ ಕನಿಷ್ಠ ಸೇವಾವಧಿ ನಿಗದಿಪಡಿಸುವ ಜವಾಬ್ದಾರಿ ನಿರ್ವಹಿಸುವ ‘ನಾಗರಿಕ ಸೇವಾ ಮಂಡಳಿ’ (ಸಿಎಸ್‌ಬಿ) ರಚನೆ ಮಾಡದ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಸಿಎಸ್‌ಬಿ ರಚನೆ ಮಾಡಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂದು ಆಕ್ಷೇಪಿಸಿ ಸಾಮಾಜಿಕ ಕಾರ್ಯಕರ್ತ ರಿಷಬ್ ಟ್ರಾಕ್ರೂ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶಿಸಿದೆ. .
ಸಿಎಸ್‌ಬಿ ರಚನೆಗೆ 2013ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದ್ದು, 2014ರಲ್ಲಿ ರಾಜ್ಯದಲ್ಲಿ ಮಂಡಳಿ ರಚನೆ ಮಾಡಿದ್ದ ಸರ್ಕಾರ ನಂತರ ಅದನ್ನು ರದ್ದುಪಡಿಸಿದೆ. 2021ರಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಆದೇಶ ನೀಡಿದ್ದರೂ ಸರ್ಕಾರ ಸಿಎಸ್‌ಬಿ ರಚಿಸಿಲ್ಲ. ಸರ್ಕಾರದ ಈ ಕ್ರಮ ನ್ಯಾಯಾಂಗ ನಿಂದನೆಗೆ ಸಮ ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಐಎಎಸ್ ಅಧಿಕಾರಿಗಳು ಮೌಖಿಕ ಸೂಚನೆ, ಆದೇಶ, ಅಭಿಪ್ರಾಯ ಅಥವಾ ಪ್ರಸ್ತಾವನೆ ಆಧರಿಸಿ ಸೇವೆ ಸಲ್ಲಿಸುವಂತಾಗಬಾರದು. ಐಎಎಸ್ ಅಧಿಕಾರಿಗಳನ್ನು ಆಡಳಿತಾತ್ಮಕ ಮೇಲಾಧಿಕಾರಿಗಳು, ರಾಜಕಾರಣಿಗಳು ಹಾಗೂ ಇತರರ ನ್ಯಾಯಬಾಹಿರ ಹಾಗೂ ನಿರಂಕುಶ ಒತ್ತಡದಿಂದ ರಕ್ಷಿಸಬೇಕು. ಈ ನಿಟ್ಟಿನಲ್ಲಿ ನಾಗರಿಕ ಸೇವಕ ಅಧಿಕಾರಿಗಳಿಗೆ ಕನಿಷ್ಠ ಸೇವಾವಧಿಗೆ ಮಾರ್ಗಸೂಚಿ ನಿಗದಿಪಡಿಸಲು ಸಿಎಸ್‌ಬಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ 2013ರಲ್ಲಿ ಕೇಂದ್ರ, ರಾಜ್ಯ ಸರ್ಕಾರ ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿತ್ತು. ದೇಶದ 20 ರಾಜ್ಯಗಳಲ್ಲಿ ಈಗಾಗಲೇ ಸಿಎಸ್‌ಬಿ ರಚನೆಯಾಗಿದೆ. ಆದರೆ, ಕರ್ನಾಟಕದಲ್ಲಿ 2014ರಲ್ಲಿ ಮಂಡಳಿ ರಚಿಸಿದ್ದರೂ, ನಂತರ ಅದನ್ನು ರದ್ದುಪಡಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.