ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾದಕ ದ್ರವ್ಯ ಸಂಗ್ರಹಣೆ ಹಾಗೂ ಮಾರಾಟ ರಾಜ್ಯದ ಆರ್ಥಿಕತೆ ಹಾಗೂ ಸಮಾಜದ ವಿರುದ್ಧದ ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಎಂಡಿಎಂ ಮಾದಕ ದ್ರವ್ಯ ಹೊಂದಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇಬ್ಬರಿಗೆ ಜಾಮೀನು ನಿರಾಕರಿಸಿದೆ.
ಜಾಮೀನು ಕೋರಿ ರಾಜಸ್ಥಾನದ ಸುನೀಲ್ ಕುಮಾರ್ (28) ಮತ್ತು ಬೆಂಗಳೂರಿನ ಕೊಡಿಗೆಹಳ್ಳಿ ನಿವಾಸಿ ಅಶೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಪೀಠ ಆದೇಶಿಸಿದೆ.
ಪ್ರಕರಣದಲ್ಲಿ ದಾಖಲೆ ಪರಿಶೀಲಿಸಿದಾಗ ವಾಣಿಜ್ಯ ಪ್ರಮಾಣದಲ್ಲಿ ಮಾದಕ ದ್ರವ್ಯವಾದ ಎಂಡಿಎಂ ಅನ್ನು ಆರೋಪಿಗಳಿಂದ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಾದಕ ದ್ರವ್ಯ ಮಾರಾಟ ಸಮಾಜದ ಮತ್ತು ರಾಜ್ಯ ಆರ್ಥಿಕತೆ ವಿರುದ್ಧದ ಅಪರಾಧವಾಗಿದೆ.
ಮಾದಕ ದ್ರವ್ಯ ಮಾರಾಟಕ್ಕೆ ವಿಶೇಷವಾಗಿ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಜನಾಂಗವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಈ ಘಟನೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.
ಹಾಗಾಗಿ, ಜಾಮೀನು ಮಂಜೂರು ಮಾಡಲು ಅರ್ಹ ಪ್ರಕರಣ ಇದಾಗಿಲ್ಲ. ಪ್ರಕರಣದ ಸ್ವರೂಪ ಹಾಗೂ ಗಂಭೀರತೆ ಆಧರಿಸಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣದ ವಿವರ: ದಾವಣಗೆರೆ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ಮಯೂರ್ ಗ್ಲೋಬಲ್ ಶಾಲೆ ಸಮೀಪ ಕೆಲ ವ್ಯಕ್ತಿಗಳು ಅಕ್ರಮವಾಗಿ ಎಂಡಿಎಂ ಮಾದಕ ದ್ರವ್ಯ ಸಂಗ್ರಹಿಸಿಕೊಂಡು ಸೇವನೆ ಮಾಡುತ್ತಿದ್ದ ಬಗ್ಗೆ 2023ರ ನ.5ರಂದು ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಮಾಹಿತಿ ಲಭ್ಯವಾಗಿತ್ತು.
ಮೇಲಿನ ಅಧಿಕಾರಿಗಳ ಅನುಮತಿ ಪಡೆದು ಪೊಲೀಸರು ಕಾರೊಂದರಲ್ಲಿ ಅನುಮಾನಸ್ಪದವಾಗಿ ನಡೆದುಕೊಂಡಿದ್ದ ಐವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಬಂಧಿತರ ಪೈಕಿ ರಾಮ್ ರತನ್ ನೀಡಿದ್ದ ಮಾಹಿತಿ ಮೇರೆಗೆ ಬೆಂಗಳೂರಿನ ಬಸವೇಶ್ವರ ಬಡಾವಣೆಯಲ್ಲಿನ ಏಳನೇ ಆರೋಪಿಯಾದ ಸುನೀಲ್ ಕುಮಾರ್ ಮನೆಯ ಮೇಲೆ 2023ರ ಡಿ.3ರಂದು ಪೊಲೀಸರು ದಾಳಿ ನಡೆಸಿದ್ದರು.
ದಾಳಿ ವೇಳೆ ಸಿಕ್ಕಿಬಿದ್ದ ಎಂಟನೇ ಆರೋಪಿ ಅಶೋಕ್ ಕುಮಾರ್‌ನಿಂದ 27 ಗ್ರಾಂ ಎಂಡಿಎಂ ಮಾದಕ ದ್ರವ್ಯ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿತ್ತು. ವಿಚಾರಣಾ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದರಿಂದ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.