ಸಾರಾಂಶ
ಕುಕನೂರು ತಾಲೂಕಿನ ಚಿಕೇನಕೊಪ್ಪ ಗ್ರಾಮದ ಶ್ರೀ ಚೆನ್ನವೀರ ಶರಣರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಗುರುವಂದನಾ ಸಮಾರಂಭ ನಡೆಯಿತು.
ಕುಕನೂರು: ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕಭಾವ ಮೂಡುತ್ತದೆ ಎಂದು ನಿವೃತ್ತ ಶಿಕ್ಷಕ ಶರಣಪ್ಪ ಕೊಪ್ಪದ ಹೇಳಿದರು.
ತಾಲೂಕಿನ ಚಿಕೇನಕೊಪ್ಪ ಗ್ರಾಮದ ಶ್ರೀ ಚೆನ್ನವೀರ ಶರಣರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಜರುಗಿದ ಗುರುವಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚಿಕೇನಕೊಪ್ಪ ಪುಣ್ಯಪುರುಷರ ತಾಣ, ಚೆನ್ನವೀರ ಶರಣರ ಗ್ರಾಮ. ಈ ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದು ನಮ್ಮ ಭಾಗ್ಯ. ನನ್ನ ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳುತ್ತಿರುವುದು ಖುಷಿ ತಂದಿದೆ. ಮೌಲ್ಯಯುತ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ವ್ಯಕ್ತಿಯ ಜೀವನದಲ್ಲಿ ಮಹತ್ವವಾದುದು. ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು, ಇದನ್ನು ಪ್ರತಿಯೊಬ್ಬ ಶಿಕ್ಷಕ ಅರಿತುಕೊಳ್ಳಬೇಕು. ಬೋಧನೆಯಲ್ಲಿ ಸಿಗುವ ನೆಮ್ಮದಿ ಹಾಗೂ ಸಂತೋಷ ಬೇರೆ ಎಲ್ಲೂ ಸಿಗುವುದಿಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಮಹಾಂತೇಶ ಅಂಗಡಿ ಮಾತನಾಡಿ, ವೃತ್ತಿಗಳಲ್ಲಿ ಶ್ರೇಷ್ಠವಾದ ವೃತ್ತಿ ಶಿಕ್ಷಕ ವೃತ್ತಿ. ಇದನ್ನು ಪ್ರತಿಯೊಬ್ಬ ಶಿಕ್ಷಕರು ಅರಿತು ತಮ್ಮ ಕರ್ತವ್ಯವನ್ನು ನಿರ್ವಹಿಸಿದಾಗ ಪ್ರತಿಯೊಬ್ಬರಿಂದ ಗೌರವ ಪಡೆಯಲು ಸಾಧ್ಯ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಿ, ಸಮಾಜದಲ್ಲಿ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುವಂತಹ ಶಕ್ತಿ ಶಿಕ್ಷಕನಿಗೆ ಮಾತ್ರ ಇದ್ದು, ಗುರುವಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಇದೆ, ಹಾಗಾಗಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಕರಿಂದ ಪಾಠ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಂಡ ವಿದ್ಯಾರ್ಥಿಗಳು ಕೂಡ ವಿದ್ಯೆ ಕಲಿಸಿದ ಗುರುವನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಂಡು ಗೌರವಿಸುವಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಶಿಕ್ಷಕರಾದ ಸಂಗಯ್ಯ ಭೂಸನೂರಮಠ, ಸಿದ್ದಪ್ಪ ಸಜ್ಜನರ, ಬಿ.ಎಂ. ಗಾಣಿಗೇರ, ಶಾಖಾಂಬರಿ, ಬಸಯ್ಯ ಮೂಗಂಡಮಠ, ಸಿ.ವಿ. ಅಂಗಡಿ ಮಾತನಾಡಿದರು. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ ಕಟ್ಟಿಮನಿ, ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಡಶಾಲೆಯ ಶಿಕ್ಷಕರು, ಗ್ರಾಮದ ಗುರು-ಹಿರಿಯರು, ಯುವಕರು, ಹಳೆಯ ವಿದ್ಯಾರ್ಥಿಗಳು ಇದ್ದರು. ನಿವೃತ್ತ ಸಹ ಶಿಕ್ಷಕರು ಶಾಲೆಗೆ ದೇಣಿಗೆ ನೀಡಿದರು.