ಬೇಗೂರು-ಹಿರೀಕಾಟಿ ಗಡಿ ತನಕ ಹೆದ್ದಾರಿ ಧೂಳುಮಯ

| Published : Oct 07 2024, 01:34 AM IST

ಸಾರಾಂಶ

ಗುಂಡ್ಲುಪೇಟೆ: ಮೈಸೂರು-ಊಟಿ ಹೆದ್ದಾರಿಯ ತಾಲೂಕಿನ ಬೇಗೂರು ಬಳಿ ಮರಳಿಹಳ್ಳದ ಬಳಿಯಿಂದ ಹಿರೀಕಾಟಿ ಗಡಿ ತನಕದ ಮೈಸೂರು-ಊಟಿ ಹೆದ್ದಾರಿಯಲ್ಲಿ ಧೂಳಿನ ಭಾಗ್ಯ ಹೆದ್ದಾರಿಯಲ್ಲಿ ಸಂಚರಿಸುವ ಸವಾರರಿಗೆ ಉಚಿತವಾಗಿ ಸಿಗುತ್ತಿದೆ.

ಗುಂಡ್ಲುಪೇಟೆ: ಮೈಸೂರು-ಊಟಿ ಹೆದ್ದಾರಿಯ ತಾಲೂಕಿನ ಬೇಗೂರು ಬಳಿ ಮರಳಿಹಳ್ಳದ ಬಳಿಯಿಂದ ಹಿರೀಕಾಟಿ ಗಡಿ ತನಕದ ಮೈಸೂರು-ಊಟಿ ಹೆದ್ದಾರಿಯಲ್ಲಿ ಧೂಳಿನ ಭಾಗ್ಯ ಹೆದ್ದಾರಿಯಲ್ಲಿ ಸಂಚರಿಸುವ ಸವಾರರಿಗೆ ಉಚಿತವಾಗಿ ಸಿಗುತ್ತಿದೆ.

ಮೈಸೂರು-ಊಟಿ ಹೆದ್ದಾರಿಯಲ್ಲಿ ಗುಂಡ್ಲುಪೇಟೆ ಕಡೆಯಿಂದ ಕ್ವಾರಿಯ ಬಿಳಿ ಕಲ್ಲು ಹಾಗೂ ಕ್ರಷರ್‌ನ ಉಪ ಖನಿಜಗಳು ತುಂಬಿದ ಟಿಪ್ಪರ್‌ಗಳ ಸಂಚಾರ ಹಾಗೂ ಕ್ವಾರಿಯಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬಳಿ ಮಣ್ಣಿನ ಧೂಳು ಜನರಿಗೆ ಮೆತ್ತಿಕೊಳ್ಳುತ್ತಿದೆ. ಈ ಉಚಿತ ಧೂಳು ಐಷಾರಾಮಿ ಕಾರುಗಳಲ್ಲಿ ತೆರಳುವ ಜನರಿಗೆ ಗೊತ್ತಾಗುತ್ತಿಲ್ಲ. ಬೈಕ್, ಸೈಕಲ್, ಎತ್ತಿನಗಾಡಿ, ಗೂಡ್ಸ್ ಆಟೋ ಎಸಿ ಇಲ್ಲದ ಕಾರು, ಬಸ್, ಲಾರಿ, ಟೆಂಪೋ ಹಾಗೂ ಪಾದಚಾರಿಗಳಿಗೆ ಧೂಳು ಮೆತ್ತಿಕೊಳ್ಳುತ್ತಿದೆ.

ಅಲ್ಲದೆ ಗುಂಡ್ಲುಪೇಟೆ ಕಡೆಯಿಂದ ಬರುವ ಬಿಳಿ ಕಲ್ಲು ಹಾಗೂ ಕ್ರಸರ್‌ನ ಉಪ ಖನಿಜ ತುಂಬಿದ ಟಿಪ್ಪರ್‌ಗಳಲ್ಲಿ ಹೊದಿಕೆ ಮತ್ತು ನೀರನ್ನು ಬಹುತೇಕರು ಹಾಕುವುದಿಲ್ಲ ಜೊತೆಗೆ ಮಿತಿ ಮೀರಿದ ಭಾರದದೊಂದಿಗೆ ಅತೀ ವೇಗವಾಗಿ ಸಂಚರಿಸುವ ಕಾರಣ ಧೂಳು ಬರುತ್ತಿದೆ. ಕ್ರಸರ್‌ನ ಉಪ ಖನಿಜಗಳು ಟಿಪ್ಪರ್‌ಗಳಲ್ಲಿ ಓವರ್ ಲೋಡ್ ತುಂಬಿ ಸಾಗುವಾವ ರಸ್ತೆ ಡುಬ್ಬ, ಹಳ್ಳ ಕೊಳ್ಳಕ್ಕೆ ಬಿದ್ದಾಗ ಹಿಂದೆ ಬರುವ ಜನರ ಕಣ್ಣಿಗೆ ಧೂಳು ತುಂಬುತ್ತದೆ. ಅಲ್ಲದೆ ಟಿಪ್ಪರ್‌ಗಳಲ್ಲಿ ಎಂ.ಸ್ಯಾಂಡ್‌ ಟಿಪ್ಪರ್ ಹೋಗುವ ವೇಗಕ್ಕೆ ಹಿಂಬದಿ ಸವಾರರಿಗೆ ಧೂಳು ತಲೆ ನೋವಾಗಿದೆ. ಮೈಸೂರು-ಊಟಿ ಹೆದ್ದಾರಿಯ ಕ್ರಾಸ್‌ಗಳಲ್ಲಿ ಪಟ್ಟಣದ ರಸ್ತೆ ಡುಬ್ಬ, ಕ್ವಾರಿಯಿಂದ ಹೆದ್ದಾರಿಗೆ ಬರುವಾಗ ಓವರ್ ಲೋಡ್ ಇರುವ ಕಾರಣ ಎಂ.ಸ್ಯಾಂಡ್, ಜಲ್ಲಿ, ಚಿಪ್ಸು ಹೆದ್ದಾರಿಗೆ ಉದುರಿ ಬೀಳುವ ಕಾರಣ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಪ್ರಾದೇಶಿಕ ಸಾರಿಗೆ ಇಲಾಖೆ ನಿರ್ಲಕ್ಷ್ಯ:ಮಿತಿ ಮೀರಿದ ಭಾರ ಹಾಗೂ ಹೊದಿಕೆ ಇಲ್ಲದೆ ನೀರು ಹಾಕದೆ ಹೆದ್ದಾರಿಯಲ್ಲಿ ಸಂಚರಿಸುವ ಟಿಪ್ಪರ್‌ಗಳ ತಡೆದು ಪರಿಶೀಲನೆ ನಡೆಸುವ ಕೆಲಸವನ್ನೂ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸರು, ಪರಿಸರ ಇಲಾಖೆ ಅಧಿಕಾರಿಗಳು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪತ್ರಿಕೆಗಳಲ್ಲಿ ಅಥವಾ ಸಾರ್ವಜನಿಕರ ದೂರು ಬಂದಾಗ ಪ್ರಾದೇಶಿಕ ಸಾರಿಗೆ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸರು ತಪಾಸಣೆ ನಡೆಸಿ ಕೈ ತೊಳೆದುಕೊಳ್ಳುತ್ತಾರೆ ಎಂದು ಸಾರ್ವಜನಿಕರು ದೂರಿದ್ದು ಟಿಪ್ಪರ್‌ಗಳ ಮೇಲಿನಹೊದಿಕೆ, ನೀರು ಹಾಕಿ ಸಂಚರಿಸುವಂತೆ ಅಧಿಕಾರಿಗಳು ಹೇಳುತ್ತಿಲ್ಲ. ಅಲ್ಲದೆ ಕ್ವಾರಿಯಿಂದ ಮೈಸೂರು-ಊಟಿ ಹೆದ್ದಾರಿಗೆ ಬರುವ ರಸ್ತೆಗಳ ತಿರುವಿನಲ್ಲೂ ಟಿಪ್ಪರ್‌ ಬಂದಾಗ ಮಣ್ಣು ಹೆದ್ದಾರಿಗೆ ರಾಚುತ್ತಿರುವದರಿಂದ ಬೈಕ್‌ ಸವಾರರ ಕಣ್ಣಿಗೆ ಬಿದ್ದು ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಿದೆ.

ಪ್ರವಾಸಿಗರ ಅಸಮಾಧಾನ:

ಇದೀಗ ದಸರಾ ಸಮಯ. ಮೈಸೂರು-ಊಟಿ ಹೆದ್ದಾರಿಯಲ್ಲಿ ಸಂಚರಿಸುವ ನೆರೆ ರಾಜ್ಯಗಳ ಪ್ರವಾಸಿಗರು ಬಂದು ಹೋಗುವ ಹೆದ್ದಾರಿಯಲ್ಲಿ ಧೂಳಿನ ಸಿಂಚನ ಕಂಡು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ತಮಿಳುನಾಡಿನ ಸೆಂದಿಲ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ವಿಶ್ವ ವಿಖ್ಯಾತ ದಸರಾಗೆ ಸಹಸ್ರಾರು ಪ್ರವಾಸಿಗರು ಬರುವ ಹೆದ್ದಾರಿಯಲ್ಲಿ ಈ ರೀತಿಯಲ್ಲಿ ಧೂಳು ಬರುತ್ತಿದೆ ಇದನ್ನು ನಿಲ್ಲಿಸುವ ಕೆಲಸ ತಾಲೂಕು ಆಡಳಿತ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಬೇಗೂರು ಸಮೀಪದ ಮರಳಿ ಹಳ್ಳದ ಬಳಿಯಿಂದ ಹಿರೀಕಾಟಿ ಗಡಿ ತನಕ ವಾಹನ ಸಂಚರಿಸುವಾಗ ಧೂಳು ಬರುತ್ತದೆ ಎಂಬ ದೂರಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸರಿಗೆ ಪತ್ರ ಬರೆದು ಧೂಳು ತಡೆಯಲು ಸೂಚಿಸುತ್ತೇನೆ.

ಟಿ.ರಮೇಶ್‌ ಬಾಬು, ತಹಸೀಲ್ದಾರ್‌

ಬೇಗೂರು ಬಳಿ ಮರಳಿ ಹಳ್ಳದಿಂದ ಹಿರೀಕಾಟಿ ಗಡಿಯ ತನಕ ಬೈಕ್‌ನಲ್ಲಿ ತೆರಳಲು ಆಗುತ್ತಿಲ್ಲ. ಟಿಪ್ಪರ್‌ಗಳ ಉಪ ಖನಿಜಗಳ ಧೂಳಿನಿಂದ ಸವಾರರಿಗೆ ತೊಂದರೆಯಾಗುತ್ತಿದೆ. ಕ್ವಾರಿಯಿಂದ ಹೆದ್ದಾರಿಗೆ ಬರುವ ಕ್ರಾಸ್‌ನಲ್ಲೂ ಮಣ್ಣಿನ ಮೇಲೆ ಬೈಕ್ ಬಿಟ್ಟಾಗ ಕೆಲವು ಸವಾರರು ಬಿದ್ದು ಗಾಯಗೊಂಡಿದ್ದಾರೆ.

-ಮಹೇಶ್‌, ಬೈಕ್ ಸವಾರ