ಮಳೆ ರಭಸಕ್ಕೆ ಕಿತ್ತು ಹೋದ ಹೆದ್ದಾರಿ

| Published : Aug 24 2024, 01:19 AM IST

ಸಾರಾಂಶ

ಎಕ್ಕುಂಬಿ-ಮೊಣಕಾಲ್ಮೂರು ಒಟ್ಟು 201 ಕಿ.ಮೀ. ರಸ್ತೆ ತಾಲೂಕಿನಲ್ಲಿ ಹಾಯ್ದು ಹೋಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆ ಮತ್ತು ಗ್ರಾಮೀಣ ಭಾಗದ ರಸ್ತೆಗಳು ಕಿತ್ತು ಹೋಗಿದ್ದು, ವಾಹನ ಸವಾರರು ಸರ್ಕಸ್‌ ಮಾಡುತ್ತಾ ಸಂಚರಿಸುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ರಸ್ತೆ ಅಪಘಾತವಾಗಿರುವ ಪ್ರಕರಣಗಳಿವೆ.

ಹೌದು, ತಾಲೂಕಿನಲ್ಲಿ ಮೈಲಾರ-ತೋರಣಗಲ್ಲು, ಮಂಡ್ಯ-ಹೂವಿನಹಡಗಲಿ, ಅರಭಾವಿ ಚಳ್ಳಕೆರೆ, ಹೊಸಪೇಟೆ-ಮಂಗಳೂರು, ಎಕ್ಕುಂಬಿ-ಮೊಣಕಾಲ್ಮೂರು ಒಟ್ಟು 201 ಕಿ.ಮೀ. ರಸ್ತೆ ತಾಲೂಕಿನಲ್ಲಿ ಹಾಯ್ದು ಹೋಗಿದೆ. ಇದರಲ್ಲಿ 193 ಕಿ.ಮೀ/ ದುರಸ್ತಿಗೆ ಕೇವಲ ₹1 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆದೇಶ ನೀಡುವುದು ಬಾಕಿ ಇದೆ.

ಅರೆಕಾಸಿನ ಮಜ್ಜಿಗೆ:

ರಾಜ್ಯ ಹೆದ್ದಾರಿ ತುಂಬೆಲ್ಲ ದೊಡ್ಡ ಪ್ರಮಾಣದ ತಗ್ಗು-ಗುಂಡಿ ಬಿದ್ದಿವೆ. ಅಲ್ಪ ಅನುದಾನದಲ್ಲಿ ರಾಜ್ಯ ಹೆದ್ದಾರಿಗಳನ್ನು, ನಿರ್ವಹಣೆ ಮಾಡುವುದು ಲೋಕೋಪಯೋಗಿ ಇಲಾಖೆಗೆ ಸವಾಲಾಗಿದೆ. ಈ ಅಲ್ಪ ಅನುದಾನ ಭಕಾಸುರನ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆಯಂತಿದೆ.

ಸಾರಿಗೆ ಇಲಾಖೆಯ ಬಸ್‌ಗಳು ತಗ್ಗು-ಗುಂಡಿ ಬಿದ್ದಿರುವ ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವಾಗ ಗ್ಲಾಸ್‌, ಕಬ್ಬಿಣದ ಬಾರ್‌ ಮತ್ತಿತರ ಉಪಕರಣ ಕಿತ್ತು ಬೀಳುವುದು ಸಾಮಾನ್ಯವಾಗಿದೆ. ಇನ್ನು ಖಾಸಗಿ ವಾಹನ ಸವಾರರು ಮೈಯೆಲ್ಲ ಕಣ್ಣಾಗಿ ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.

ಜಿಲ್ಲಾ ಮುಖ್ಯ ರಸ್ತೆ:

ತಾಲೂಕಿನ ವಿವಿಧ ಕಡೆಗಳಲ್ಲಿ 272 ಕಿ.ಮೀ. ಉದ್ದ ಜಿಲ್ಲಾ ಮುಖ್ಯ ರಸ್ತೆಗಳಿವೆ. ಇದರಲ್ಲಿ 198 ಕಿ.ಮೀ. ಉದ್ದ ರಸ್ತೆ ನಿರ್ವಹಣೆಗೆ ಕೇವಲ ₹1 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿ ಟೆಂಡರ್‌ ಮುಗಿದು, ಕಾಮಗಾರಿ ಆದೇಶ ಬಾಕಿ ಉಳಿದಿದೆ. ಇಲ್ಲಿಯೂ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದರೂ ಈವರೆಗೆ ತಗ್ಗು-ಗುಂಡಿಗಳಿಗೆ ಹಿಡಿ ಮಣ್ಣು ಹಾಕಲು ಸರ್ಕಾರದಿಂದ ಅನುದಾನ ಬಂದಿರಲಿಲ್ಲ. ಈಗ ಬಂದ ಅಲ್ಪ ಅನುದಾನದಲ್ಲೇ ರಸ್ತೆ ಆವರಿಸಿರುವ ಬಳ್ಳಾರಿ ಜಾಲಿ ಮುಳ್ಳು ತೆರವು ಹಾಗೂ ತಗ್ಗು-ಗುಂಡಿ ಮುಚ್ಚುವುದು ಅಸಾಧ್ಯವಾಗಿದೆ. ರಸ್ತೆ ಅಭಿವೃದ್ಧಿಗೆ ಕಳೆದ 3 ವರ್ಷಗಳಲ್ಲಿ ಅನುದಾನವೇ ಬಂದಿಲ್ಲ. ಇದರಿಂದ ರಸ್ತೆಯ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

3 ವರ್ಷದಿಂದ ಕಾಮಗಾರಿಯ ಹಣ ನೀಡದ ಸರ್ಕಾರ:

ಈ ಹಿಂದೆ ಗುತ್ತಿಗೆದಾರರು ರಸ್ತೆ ನಿರ್ವಹಣೆಗೆ ನಾ ಮುಂದು, ತಾ ಮುಂದು ಎನ್ನುವ ಸ್ಥಿತಿ ಇತ್ತು. ಆದರೆ ಈಗ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುತ್ತಿರುವ ಹಿನ್ನೆಲೆಯಲ್ಲಿ ಕಳೆದ 3 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಕಾಮಗಾರಿಗಳ ಹಣ ಇನ್ನು ಬಂದಿಲ್ಲ. ಇದರಿಂದ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸುವವರ ಸಂಖ್ಯೆಯೇ ಕ್ಷೀಣಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಹೂವಿನಹಡಗಲಿ ತಾಲೂಕಿನ 193 ಕಿ.ಮೀ. ಉದ್ದ ರಾಜ್ಯ ಹೆದ್ದಾರಿ, 198 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆಗೆ ತಲಾ ₹1 ಕೋಟಿ ಅನುದಾನ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ಆದೇಶ ಬಾಕಿ ಇದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಪ್ರಭಾರ ಎಇಇ ಪುರುಷೋತ್ತಮ.

ರಸ್ತೆಗಳ ನಿರಂತರ ನಿರ್ವಹಣೆಗೆ ಸರ್ಕಾರ ಸಕಾಲದಲ್ಲಿ ಅನುದಾನ ನೀಡುತ್ತಿಲ್ಲ. ಇದರಿಂದ ರಸ್ತೆಗಳು ತುಂಬ ಹಾಳಾಗಿವೆ. ಪ್ರಯಾಣಿಕರು ಸರ್ಕಸ್‌ ಮಾಡುತ್ತಾ, ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ಬಂದಿದೆ ಎನ್ನುತ್ತಾರೆ ಪುಟ್ಟಪ್ಪ ತಂಬೂರಿ ಮೈಲಾರ.