ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ವೈಭವದ ತೆರೆ
KannadaprabhaNewsNetwork | Published : Oct 26 2023, 01:00 AM IST
ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ವೈಭವದ ತೆರೆ
ಸಾರಾಂಶ
ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ತಬ್ಧ ಚಿತ್ರ ಪ್ರದರ್ಶನ ಜನರನ್ನು ದೇವಲೋಕಕ್ಕೆ ಕರೆದೊಯ್ಯಿತು.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಬುಧವಾರ ಮುಂಜಾನೆ ವೈಭವದ ತೆರೆ ಬಿದ್ದಿದೆ. ಮಂಟಪಗಳ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದ ಎಲ್ಲೆಲ್ಲೂ ಜನಸ್ತೋಮ ಕಂಡುಬಂತು. ಮಂಟಪಗಳ ಸಮೀಪ ಯುವಕರು ಕುಣಿದು ಕುಪ್ಪಳಿಸಿದರು. ಮಂಟಪಗಳ ಶೋಭಾಯಾತ್ರೆ ಜನರ ಮನಸೂರೆಗೊಂಡಿತು. ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ತಬ್ಧ ಚಿತ್ರ ಪ್ರದರ್ಶನ ಜನರನ್ನು ದೇವಲೋಕಕ್ಕೆ ಕರೆದೊಯ್ಯಿತು. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ಮಂಟಪಗಳ ಪ್ರದರ್ಶನ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು. ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ಮಂಟಪಗಳ ಪ್ರದರ್ಶನ ಮೈನವಿರೇಳಿಸುವಂತಿತ್ತು. ದೇವಾನು ದೇವತೆಗಳ ಲೀಲೆಗಳನ್ನು ಬಿಂಬಿಸುವ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನ ಸೆಳೆಯಿತು. ಮಂಟಪಗಳಲ್ಲಿ ಬಳಕೆ ಮಾಡಿದ ಧ್ವನಿವರ್ಧಕ ಎದೆನಡುಗಿಸುವಂತಿತ್ತು. ಅದಕ್ಕೆ ತಕ್ಕಂತೆ ಬೆಳಕು. ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸುವ ದೇವರ ಮೂರ್ತಿಗಳೊಂದಿಗೆ ದಶಮಂಟಪಗಳ ಶೋಭಾಯತ್ರೆ ಎಲ್ಲರನ್ನೂ ಆಕರ್ಷಿಸಿತು. ರಾತ್ರಿ 10 ಗಂಟೆಗೆ ಶುರುವಾದ ದಶಮಂಟಪಗಳ ಶೋಭಾಯಾತ್ರೆ ಬೆಳಗ್ಗೆ 6 ಗಂಟೆಯವರೆಗೂ ನಡೆಯಿತು. ಪ್ರವಾಸಿಗರ ಸಂಖ್ಯೆ ಹೆಚ್ಚಳ: ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ರಾತ್ರಿಯಿಡೀ ಮಂಜಿನ ನಗರಿಯ ಪ್ರಮುಖ ರಸ್ತೆಗಳಲ್ಲಿ ಜನಪ್ರವಾಹವೇ ಹರಿಯುತ್ತಿತ್ತು. ಮಂಟಪಗಳು ಹಾಗೂ ನಾಲ್ಕು ಶಕ್ತಿ ದೇವತೆಗಳ ಕರಗಗಳು ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಬುಧವಾರ ಮುಂಜಾನೆ ಮಡಿಕೇರಿ ದಸರಾಗೆ ತೆರೆ ಎಳೆಯಲಾಯಿತು. -- ಕೋದಂಡ ರಾಮ ಮಂಟಪ ಪ್ರಥಮ: ಮಂಟಪಗಳ ಶೋಭಾಯಾತ್ರೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಟಪಗಳಿಗೆ ಮಡಿಕೇರಿ ನಗರ ದಸರಾ ಸಮಿತಿಯಿಂದ ಪ್ರಶಸ್ತಿ ವಿತರಿಸಲಾಯಿತು. ಮಣಿಕಂಠನಿಂದ ಮಹಿಷೆಯ ಶಾಪ ವಿಮೋಚನೆ ಕಥಾ ಸಾರಾಂಶವನ್ನು ಅಳವಡಿಸಿದ್ದ ಕೋದಂಡ ರಾಮ ಮಂಟಪಕ್ಕೆ ಪ್ರಥಮ ಬಹುಮಾನ ನೀಡಲಾಯಿತು. ದ್ವಿತೀಯ ಬಹುಮಾನವನ್ನು ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ಕಥಾ ಸಾರಾಂಶ ಪ್ರಸ್ತುತ ಪಡಿಸಿದ್ದ ಕೋಟೆ ಮಾರಿಯಮ್ಮ ಹಾಗೂ ಶತಮಾಹಿಷೆಯ ಸಂಹಾರ ಕಥಾ ಸಾರಾಂಶ ಮಾಡಿದ್ದ ಕೋಟೆ ಮಹಾ ಗಣಪತಿ ಮಂಟಪಕ್ಕೆ ಜಂಟಿಯಾಗಿ ಪ್ರಶಸ್ತಿ ನೀಡಲಾಯಿತು. ಉಗ್ರ ನರಸಿಂಹನಿಂದ ಹಿರಣ್ಯ ಕಶ್ಯಪು ವಧೆ ಕಥಾ ಸಾರಾಂಶ ಪ್ರದರ್ಶನ ಮಾಡಿದ್ದ ಕರವಲೆ ಭಗವತಿ ಮಹಿಷ ಮಧಿನಿ ಮಂಟಪ ತೃತೀಯ ಬಹುಮಾನ ಪಡೆಯಿತು. ತೀರ್ಪುಗಾರರಿಗೆ ಸಂದೀಪ್ ಸಾಥ್ ಮಡಿಕೇರಿ ದಸರಾದಲ್ಲಿ ದಶ ಮಂಟಪಗಳ ಶೋಭಾ ಯಾತ್ರೆ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ತೋರುವ ಮಂಟಪಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ. ಕಳೆದ ವರ್ಷ ತೀರ್ಪುಗಾರರಿಗೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಾರಿ ಈ ವ್ಯವಸ್ಥೆ ಇರಲಿಲ್ಲ. ಇದರಿಂದ ತೀರ್ಪುಗಾರಿಕೆಗೆ ಸಮಸ್ಯೆಯಾಯಿತು. ಭಾರಿ ಜನಸ್ತೋಮ ಹಿನ್ನೆಲೆಯಲ್ಲಿ ಮಂಟಪಗಳ ತೀರ್ಪುಗಾರಿಕೆಗೆ ತೆರಳುವುದು ಸಾಹಸ ಕೆಲಸವಾಗಿತ್ತು. ಪೊಲೀಸ್ ಇಲಾಖೆಯ ಸಂದೀಪ್ ಅವರು ಏಕಾಂಗಿಯೇ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಮಂಟಪಗಳ ಸಮೀಪ ತೀರ್ಪುಗಾರರಿಗೆ ಹಾಗೂ ಪತ್ರಕರ್ತರಿಗೆ ಸ್ಥಳಾವಕಾಶ ಮಾಡುವ ಕೆಲಸ ಮಾಡಿದರು. ಇದರಿಂದ ದಶಮಂಟಪ ಸಮಿತಿಯಿಂದ ಮೆಚ್ಚುಗೆಗೆ ಪಾತ್ರರಾದರು. ತಾಂತ್ರಿಕ ದೋಷ, ತಡವಾಗಿ ಪ್ರದರ್ಶನ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ದೇಚೂರು ಶ್ರೀ ರಾಮ ಮಂದಿರ ಹಾಗೂ ಕೋದಂಡ ರಾಮ ದೇವಾಲಯದ ಮಂಟಪಗಳು ನಿಗದಿತ ಸಮಯಕ್ಕಿಂತ ತಡವಾಗಿ ಪ್ರದರ್ಶನ ನೀಡಿದವು. ಶ್ರೀ ಪೇಟೆ ರಾಮ ಮಂದಿರ ದೇವಾಲಯ ಮಂಟಪವು 10 ಗಂಟೆಗೆ ಗಾಂಧಿ ಮೈದಾನದ ಬಳಿ ಪ್ರದರ್ಶನ ನೀಡಬೇಕಿತ್ತು. ಆದರೆ ನಿಗದಿತ ಸಮಯಕ್ಕಿಂತ ಮುಂಚೆಯೇ ಕೋಟೆ ಸಮೀಪದಲ್ಲಿ ಪ್ರದರ್ಶನ ನೀಡಿತು. ಮಂಗಳವಾರ ರಾತ್ರಿ 11 ಗಂಟೆಗೆ ಆಂಜನೇಯ ದೇವಾಲಯ ಮುಂಭಾಗ ದೇಚೂರು ಶ್ರೀ ರಾಮ ಮಂದಿರ ಮಂಟಪ ಪ್ರದರ್ಶನ ನೀಡಬೇಕಿತ್ತು. ಆದರೆ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಮುಂಜಾನೆ 6 ಗಂಟೆ ವೇಳೆ ಪ್ರದರ್ಶನ ನೀಡುವಂತಾಯಿತು. ರಾತ್ರಿ 1.45 ಗಂಟೆಗೆ ಮೆಟ್ರೋ ಫ್ರೆಷ್ ಮುಂಭಾಗ ಕೋದಂಡ ರಾಮ ದೇವಾಲಯ ಮಂಟಪ ಪ್ರದರ್ಶನ ನೀಡಬೇಕಾಗಿತ್ತಾದರೂ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಎರಡು ಬಾರಿ ಪ್ರದರ್ಶನ ಮುಂದೂಡುವಂತಾಯಿತು. ಬುಧವಾರ ಮುಂಜಾನೆ ವೇಳೆ ಪ್ರದರ್ಶನ ನೀಡಿತು. ಅಪಾರ ಜನಸ್ತೋಮ, ನೂಕುನುಗ್ಗಲು ಮಡಿಕೇರಿ ದಸರಾ ಮಂಟಪಗಳ ಶೋಭಾಯಾತ್ರೆ ವೇಳೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ರಸ್ತೆಯಲ್ಲಿ ಮಂಟಪಗಳು ಪ್ರದರ್ಶನ ನೀಡುವ ವೇಳೆಯಲ್ಲಿ ಸಾರ್ವಜನಿಕರು ಓಡಾಡಲು ಸ್ಥಳಾವಕಾಶ ಕೊರತೆಯುಂಟಾಯಿತು. ಇದರಿಂದ ಮಡಿಕೇರಿ ಪೊಲೀಸ್ ಠಾಣೆಯ ಮುಂಭಾಗ ನೂಕುನುಗ್ಗಲು ಉಂಟಾಗಿ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವೃದ್ಧರಿಗೆ ತೊಂದರೆಯುಂಟಾಯಿತು. ತೀರ್ಪುಗಾರಿಕೆ ವಿರುದ್ಧ ಅಸಮಾಧಾನ ಮಂಟಪಗಳ ಶೋಭಾಯಾತ್ರೆಯ ವಿಜೇತರ ಪ್ರಶಸ್ತಿ ವಿತರಣೆಯ ಮುಂಚೆಯೇ ಕೆಲವು ಮಂಟಪದವರಿಗೆ ವಿಜೇತರ ಮಾಹಿತಿ ದೊರಕಿತ್ತು. ವೇದಿಕೆಯಲ್ಲಿ ಬಹುಮಾನ ಘೋಷಣೆ ಮಾಡುತ್ತಿದ್ದ ವೇಳೆ ಕರವಲೆ ಭಗವತಿ ದೇವಾಲಯ ಸಮಿತಿಯ ಸದಸ್ಯರು ವೇದಿಕೆಯಲ್ಲಿ ತೃತೀಯ ಪ್ರಶಸ್ತಿ ಪಡೆದುಕೊಂಡು ತೀರ್ಪುಗಾರಿಕೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ತೀರ್ಪುಗಾರಿಕೆಯಲ್ಲಿ ಮೋಸ ಆಗಿದೆ ಎಂದು ಸಮಿತಿಯ ವಿರುದ್ಧ ವಾಗ್ವಾದಕ್ಕೆ ಇಳಿದರು. ಜಂಟಿಯಾಗಿ ದ್ವಿತೀಯ ಬಹುಮಾನ ಪಡೆದ ಕೋಟೆ ಮಹಾಗಣಪತಿ ದೇವಾಲಯ ಸದಸ್ಯರು ಕೂಡ ತಮ್ಮ ಅಸಮಾಧಾನ ಹೊರ ಹಾಕಿದರು. ನಿಲ್ಲದ ಡಿಜೆ, ಕುಣಿದು ಕುಪ್ಪಳಿಸಿದ ಜನತೆ! ಮಡಿಕೇರಿ ದಸರಾದಲ್ಲಿ ಈ ಬಾರಿ ಅಬ್ಬರದ ಡಿಜೆಯನ್ನು ನಿಯಂತ್ರಿಸಲಾಗುತ್ತದೆ ಎಂದು ಹೇಳಲಾಗಿತ್ತು. ವಕೀಲ ಅಮೃತೇಶ್ ಅವರು ದಸರಾದಲ್ಲಿ ಡಿಜೆ ಬಳಸದಂತೆ ನ್ಯಾಯಾಲಯದ ಮೊರೆ ಕೂಡ ಹೋಗಿದ್ದರು. ರಾತ್ರಿ ಹತ್ತು ಗಂಟೆಯ ನಂತರ ಡಿಜೆ ನಿರ್ಬಂಧಿಸುವ ಬಗ್ಗೆ ದಶಮಂಟಪ ಸಮಿತಿ ಕೂಡ ಸ್ಪಷ್ಟಪಡಿಸಿತ್ತು. ಆದರೆ ಬಹುತೇಕ ಮಂಟಪದಲ್ಲಿ ರಾತ್ರಿಯಿಡೀ ಡಿಜೆ ಅಬ್ಬರಿಸಿತು. ಡಿಜೆಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಕರಗಗಳ ಸಂಚಾರ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇವರ ಕರಗಗಳು ರಾತ್ರಿಯಿಡೀ ಸಂಚರಿಸಿತು. ಕರಗಗಳಿಗೆ ವಾದ್ಯಗೋಷ್ಠಿ ಇತ್ತು. 50ನೇ ವರ್ಷದ ಸಂಭ್ರಮಕ್ಕೆ ತಣ್ಣೀರು: ಸದಸ್ಯರ ಕಣ್ಣೀರು... ಮಡಿಕೇರಿಯ ಐತಿಹಾಸಿಕ ಹಿನ್ನೆಲೆಯೊಂದಿರುವ ಹಾಗೂ ಕರಗ ದೇವತೆಗಳಲ್ಲಿ ಹಿರಿಯ ದೇವತೆ ಎನಿಸಿರುವ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ದಸರಾ ಸಮಿತಿಯು 50ನೇ ವರ್ಷದ ಸಂಭ್ರಮದ ಆಚರಣೆಯಲ್ಲಿತ್ತು. ಇದರಿಂದಲೇ ಸುಮಾರು ರು.26 ಲಕ್ಷ ವೆಚ್ಚ ಮಾಡಿ ಶ್ರೀ ದುರ್ಗಾ ಸಪ್ತಪತಿ ಪುರಾಣದಿಂದ ಅಧ್ಯಾಯ 6ರಿಂದ 10ರ ವರೆಗಿನ ಕದಂಬ ಕೌಶಿಕೆ ಎಂಬ ಕಥಾ ಸಾರಾಂಶ ನೀಡಲು ಸಿದ್ಧಗೊಂಡಿತ್ತು. ಸಮಿತಿಯ ಸದಸ್ಯರು ಕೂಡ ಸಂಭ್ರಮದಲ್ಲಿದ್ದರು. ಆದರೆ ಮುಂಜಾನೆ 3.30ರ ವೇಳೆಗೆ ಮಂಟಪ ಮಗುಚಿಬಿದ್ದು ಅಪಾರ ಹಾನಿಯಾಗುವುದರೊಂದಿಗೆ ದೊಡ್ಡ ಅಪಾಯವೊಂದು ತಪ್ಪಿತು. ಈ ವೇಳೆ ಸಮಿತಿಯ ಸದಸ್ಯರು ಕಣ್ಣೀರು ಹಾಕಿದರು. ಸಿಡಿಮದ್ದು, ಲೇಸರ್ ಬಳಕೆ! ಮಂಟಪಗಳ ಪ್ರದರ್ಶನದಲ್ಲಿ ಸಿಡಿಮದ್ದು ಹಾಗೂ ಲೇಸರ್ ಬಳಸದಂತೆ ದಶಮಂಪಟ ಸಮಿತಿ ಸೂಚನೆ ನೀಡಿತ್ತು. ಆದರೆ ಕೆಲವೊಂದು ಮಂಟಪಗಳಲ್ಲಿ ಸಿಡಿಮದ್ದು ಪ್ರದರ್ಶನ ಕಂಡುಬಂತು. ಸಿಡಿಮದ್ದು ಕಾರಣ ಕೆಲವು ಮಂಟಪ ಪ್ರದರ್ಶನ ನೀಡಿದ ಸಂದರ್ಭ ಕಟ್ಟಡ ಮೇಲೆ ಕುಳಿತಿದ್ದವರಿಗೆ ಸಿಡಿಮದ್ದಿನ ಕಿಡಿ ಹಾರಿತು. ಲೇಸರ್ ಅನ್ನು ಕೂಡ ಮಂಟಪವೊಂದು ಬಳಸಿತ್ತು. ನವ ಮಂಟಪಗಳಿಂದ ಕಥಾಸಾರಾಂಶ ಪ್ರದರ್ಶನ ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಾರಥಿ ಎಂದೇ ಖ್ಯಾತಿ ಪಡೆದಿರುವ 150 ವರ್ಷಗಳ ಇತಿಹಾಸ ಹೊಂದಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಮಂಟಪದಲ್ಲಿ ವೈಕುಂಠ ದರ್ಶನ ಕಥಾ ಸಾರಾಂಶವನ್ನು ಪ್ರದರ್ಶಿಸಿತು. ಮಂಟಪಕ್ಕಾಗಿ ರು.8 ಲಕ್ಷ ವೆಚ್ಚ ಮಾಡಿತ್ತು. ಶ್ರೀ ಕೋಟೆ ಮಹಾಗಣಪತಿ 47ನೇ ವರ್ಷದ ದಸರಾ ಉತ್ಸವ ಆಚರಿಸಿದ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯಿಂದ ಈ ಬಾರಿ ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗಿತ್ತು. ಮಂಟಪಕ್ಕೆ ಸುಮಾರು 31.5 ಲಕ್ಷ ರುಪಾಯಿ ವೆಚ್ಚ ಮಾಡಲಾಗಿತ್ತು. ಈ ಬಾರಿ ದ್ವಿತೀಯ ಬಹುಮಾನ ಜಂಟಿಯಾಗಿ ಗಳಿಸಿತು. ದಂಡಿನ ಮಾರಿಯಮ್ಮ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಮಂಟಪ ಸಮಿತಿ ಈ ಬಾರಿ 93ನೇ ದಸರಾ ಉತ್ಸವದಲ್ಲಿ ಆಚರಿಸಲಾಯಿತು. ಪರಶಿವನಿಂದ ಜಲಂಧರ ಸಂಹಾರ ಕಥಾ ಸರಾಂಶವನ್ನು ಅಳವಡಿಸಲಾಗಿತ್ತು. ಮಂಟಪಕ್ಕೆ ರು.23 ಲಕ್ಷ ವೆಚ್ಚ ಮಾಡಲಾಗಿತ್ತು. ಚೌಡೇಶ್ವರಿ ಮಂಟಪ ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿಯಿಂದ 61ನೇ ವರ್ಷದ ದಸರಾ ಉತ್ಸವ ಆಚರಿಸಲಾಗಿದ್ದು, ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತು. ಮಂಟಪಕ್ಕೆ ರು.20 ಲಕ್ಷ ವೆಚ್ಚ ಮಾಡಲಾಗಿತ್ತು. ಮಂಟಪದಲ್ಲಿ ಡ್ರೋನ್ ಮೂಲಕ ವಿಶೇಷ ಎಫೆಕ್ಟ್ ನೀಡಲಾಗಿತ್ತು. ಕರವಲೆ ಭಗವತಿ ಶ್ರೀ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ದಸರಾ ಮಂಟಪ ಸಮಿತಿ 28ನೇ ವರ್ಷದ ಉತ್ಸವ ಆಚರಿಸಿದ್ದು, ಉಗ್ರನರಸಿಂಹನಿಂದ ಹಿರಣ್ಯಕಶ್ಯಪು ಸಂಹಾರ ಕಥಾ ಸಾರಾಂಶವನ್ನು ಪ್ರದರ್ಶಿಸಲಾಯಿತು. ರು.22 ಲಕ್ಷ ವೆಚ್ಚ ಮಾಡಲಾಯಿತು. ಅಪಾರ ಜನ ಮೆಚ್ಚುಗೆಯನ್ನು ಕೂಡ ಪಡೆಯಿತು. ಮಂಟಪ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿತು. ಕಂಚಿ ಕಾಮಾಕ್ಷಿ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿಕಾಮಾಕ್ಷಿ ಮುತ್ತು ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 60ನೇ ವರ್ಷದ ಉತ್ಸವ ಆಚರಿಸಲಾಗಿದ್ದು, ಈ ಬಾರಿ ಶಿವನಿಂದ ತ್ರಿಪುರಾಸುರರ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತು. ರು. 25 ಲಕ್ಷ ವೆಚ್ಚ ಮಾಡಲಾಗಿತ್ತು. ಕೋದಂಡ ರಾಮ ಕೋದಂಡ ರಾಮ ದಸರಾ ಮಂಟಪ ಸಮಿತಿ 49ನೇ ವರ್ಷದ ದಸರಾ ಉತ್ಸವ ಆಚರಿಸಿದ್ದು, ‘ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆ’ ಸಾರಾಂಶವನ್ನು ಮಂಟಪದಲ್ಲಿ ಹೊಂದಿಸಲಾಗಿತ್ತು. ಮಂಟಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿತ್ತು. ಮಂಟಪಕ್ಕೆ ರು. 20 ಲಕ್ಷ ವೆಚ್ಚ ಮಾಡಲಾಗಿತ್ತು. ದೇಚೂರು ರಾಮಮಂದಿರ ನಗರದ ದೇಚೂರು ಶ್ರೀ ರಾಮಮಂದಿರ ದೇವಾಲಯ ದಸರಾ ಮಂಟಪ ಸಮಿತಿ 105ನೇ ವರ್ಷದ ದಸರಾ ಉತ್ಸವ ಆಚರಿಸಲಾಗಿದ್ದು, ವಿಷ್ಣುವಿನಿಂದ ಮಧುಕೈಟಭರ ಸಂಹಾರ ಕಥಾ ಸಾರಾಂಶವನ್ನು ಈ ಬಾರಿ ಮಂಟಪದಲ್ಲಿ ಅಳವಡಿಸಲಾಗಿತ್ತು. ಆಂಜನೇಯ ದೇವಾಲಯದ ಬಳಿ ಪ್ರದರ್ಶನ ನೀಡಿತ್ತು. ರು.10 ಲಕ್ಷ ವೆಚ್ಚದಲ್ಲಿ ಮಂಟಪ ನಿರ್ಮಿಸಲಾಗಿತ್ತು. ಕೋಟೆ ಮಾರಿಯಮ್ಮ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ 48ನೇ ವರ್ಷದ ಉತ್ಸವ ಆಚರಿಸಲಾಯಿತು. ಈ ಬಾರಿ ರಾಮಾಯಣದಿಂದ ಆಯ್ದ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ವಧೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿತ್ತು. ಮಂಟಪ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಜಂಟಿಯಾಗಿ ಪಡೆಯಿತು.