ಐತಿಹಾಸಿಕ ರಾವುತರಾಯ ಮಲ್ಲಯ್ಯ ಜಾತ್ರೆ ಸಂಪನ್ನ

| Published : Oct 09 2025, 02:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಐದು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆದ ಪಟ್ಟಣದ ಆರಾಧ್ಯ ದೈವ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು. ಜಾತ್ರೆಯ ಕೊನೆಯ ದಿನ ಸಂಜೆ ರಾವುತರಾಯನ ಬಂಡಿ ಪುರಪ್ರವೇಶ ಮಾಡಿದ್ದು, ಸುಮಂಗಲಿಯರು ಉತ್ಸವಕ್ಕೆ ನೀರು ಎರೆದು ಅದ್ಧೂರಿಯಾಗಿ ಸ್ವಾಗತಿಸಿದರು. ಪಟ್ಟಣದ ಚಾವಡಿಯಲ್ಲಿ ಬುಧವಾರ ಬೆಳಿಗ್ಗೆ 4ಗಂಟೆಗೆ ಸಂಪ್ರದಾಯದಂತೆ ಊರಿನ ಗೌಡ್ರು, ನಾಡಗೌಡ್ರು ಹಾಗೂ ದೇಶಪಾಂಡೆ ಅವರಾದಿಯಾಗಿ ರಾವುತರಾಯ ತಂಗಿರುವ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳಿ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳನ್ನು ನಡೆಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಐದು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆದ ಪಟ್ಟಣದ ಆರಾಧ್ಯ ದೈವ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು. ಜಾತ್ರೆಯ ಕೊನೆಯ ದಿನ ಸಂಜೆ ರಾವುತರಾಯನ ಬಂಡಿ ಪುರಪ್ರವೇಶ ಮಾಡಿದ್ದು, ಸುಮಂಗಲಿಯರು ಉತ್ಸವಕ್ಕೆ ನೀರು ಎರೆದು ಅದ್ಧೂರಿಯಾಗಿ ಸ್ವಾಗತಿಸಿದರು. ಪಟ್ಟಣದ ಚಾವಡಿಯಲ್ಲಿ ಬುಧವಾರ ಬೆಳಿಗ್ಗೆ 4ಗಂಟೆಗೆ ಸಂಪ್ರದಾಯದಂತೆ ಊರಿನ ಗೌಡ್ರು, ನಾಡಗೌಡ್ರು ಹಾಗೂ ದೇಶಪಾಂಡೆ ಅವರಾದಿಯಾಗಿ ರಾವುತರಾಯ ತಂಗಿರುವ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳಿ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳನ್ನು ನಡೆಸಿದರು. ನಂತರ ಶ್ರೀರಾವುತರಾಯನನ್ನು ಅಶ್ವರೂಢದಲ್ಲಿ ವಿರಾಜಮಾನನ್ನಾಗಿಸಿ ತೆರೆದ ಬಂಡಿಯಲ್ಲಿ ವಾದ್ಯಗಳು, ಜಯಘೋಷದೊಂದಿಗೆ ಲಕ್ಷಾಂತರ ಭಕ್ತರು ಮಲ್ಲಯ್ಯನನ್ನು ಮೂಲ ದೇವಸ್ಥಾನಕ್ಕೆ ಕರೆತಂದು ಜಾತ್ರೆ ಸಂಪನೆಗೊಳಿಸಲಾಯಿತು.ಕರ್ನಾಟಕ ಸೇರಿ ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ವಿವಿಧ ಪೂಜೆಗಳನ್ನು ನಡೆಸುವ ಮೂಲಕ ಆರಾಧ್ಯ ದೈವ ರಾವುತರಾಯನ ಕೃಪೆಗೆ ಪಾತ್ರವಾದರು. ಬೆಳಗ್ಗೆಯಿಂದಲೇ ಪ್ರಾರಂಭವಾದ ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಅಲ್ಲದೇ, ಭಂಡಾರ ಎಸೆದು ಏಳುಕೋಟಿ, ಏಳುಕೋಟಿ, ಏಳುಕೋಟಿ ಎಂಬ ಜೈಕಾರಗಳನ್ನು ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು.ಅದ್ಧೂರಿ ಬಂಡಿ ಉತ್ಸವ:

ಭಾವೈಕ್ಯತೆಯ ಭಗವಂತ ಎಂದು ಪ್ರಸಿದ್ಧಿ ಹೊಂದಿರುವ ರಾವುತರಾಯನ ಬಂಡಿ ಉತ್ಸವ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ದಾರಿಯುದ್ದಕ್ಕೂ ಡೊಳ್ಳು ಕುಣಿತ, ವಗ್ಗೈಯ್ಯಗಳ ಕುಣಿತ, ಬಿಂದಿಗೆ ನೀರು ಸುರಿದುಕೊಂಡು ಭಂಡಾರವೆರಚಿಕೊಂಡು ಬಂಡಿ ಎಳೆಯುವ ದೃಶ್ಯ ಮನಮೋಹಕವಾಗಿತ್ತು. ಉತ್ಸವ ವೇಳ ಬಂಡಿ ಮೇಲೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು. ವಿವಿಧ ರಾಜ್ಯಗಳಿಂದ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿದರು. ಮಕ್ಕಳ ಮನರಂಜನೆಯ ಆಟಗಳು ಜಾತ್ರೆಯಲ್ಲಿ ವಿಶೇಷವಾಗಿದ್ದವು. ಚಟುವಟಿಕೆಗಳು ರಾವುತರಾಯ ಮೂಲಸ್ಥಾನ ಸೇರುವುದರೊಂದಿಗೆ ಜಾತ್ರೆ ಸಂಪನ್ನಗೊಂಡಿತು.

ಜಾತ್ರೆಯಲ್ಲಿ ವಿಶೇಷವಾಗಿ ವಗ್ಗೈಯ್ಯಗಳು ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು ಹಣೆ ತುಂಬ ಭಂಡಾರ ಬಡಿದುಕೊಂಡು ರಾವುತರಾಯನ ಬಂಡಿ ಮುಂದೆ ಕುಣಿಯುತ್ತ ಜನರ ಗಮನ ಸೆಳೆದರು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಐದು ದಿನಗಳ ಕಾಲ ಪೂಜಾ ಕಾರ್ಯ, ರಸಮಂಜರಿ, ಕುಸ್ತಿ ಪಂದ್ಯಾವಳಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾತ್ರೋತ್ಸವಕ್ಕೆ ಮೆರುಗು ತಂದರು. ಜಾತ್ರೋತ್ಸವಕ್ಕೆ ತಹಸಿಲ್ದಾರ್ ಪ್ರಕಾಶ ಸಿಂದಗಿ, ಪಪಂ ಅಧಿಕಾರಿಗಳು, ಮಲ್ಲಯ್ಯ ರಾವುತರಾಯ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪಿಎಸ್ಐ ಸಚಿನ್ ಆಲಮೇಲಕರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು. ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಬಿ.ಕೆ.ಪಾಟೀಲ, ಪ್ರಮೋದ ನಾಡಗೌಡ, ಪುನೀತಗೌಡ ಪಾಟೀಲ, ಗೊಲ್ಲಾಳಗೌಡ ಹಾಗೂ ಇತರರು ಪಾಲ್ಗೊಂಡಿದ್ದರು.

ಸುಮಾರು 5 ದಿನಗಳ ಕಾಲ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಸೇರಿ ರಾಜಕೀಯ ಮುಖಂಡರು, ಪಪಂ ಅಧ್ಯಕ್ಷೆ ಬೋರಮ್ಮ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಿಬಿನಾಳ ಹಾಗೂ ಸದಸ್ಯರು ಮತ್ತು ವಿವಿಧ ಸಂಘಟನೆಗಳು ಮುಖಂಡರು ಆಶೀರ್ವಾದ ಪಡೆದು ದೇವರ ಕೃಪೆಗೆ ಪಾತ್ರರಾದರು.ಬಾಕ್ಸ್ ಮಲ್ಲಯ್ಯನ ಕಾರ್ಣಿಕ ನುಡಿಯೇನು..?

ಮಳೆ ಚಿತ್ತ, ಸ್ವಾತಿ, ವಿಶಾಖ ಒಂದು ಸರ್ವ ಕೊಡುತ್ತೇನೆ. ಬಿಳಿ ಕಾಳ ಕಟ್ಟಿಗೆ ಹೊಕ್ಕಳು ಆಯಿತು. ಗೋಧಿ, ಕಡಲೆ,ಅಗಸಿ, ಕುಸುಬಿ ಜೋಳದ ಹತ್ತಿದವು. ಧರ್ಮ ಕಮ್ಮಾಯ್ತು, ಕರ್ಮ ಹೆಚ್ಚಾಯ್ತು. ನಾಲ್ಕು ಮೂಲಿ ಸೋಶಿ ನೋಡುದರಾಗ ಧರ್ಮ ಎಲ್ಲೂ ಉಳಿಯಲಿಲ್ಲ. ಬಂಡಿ ಎಳೆಯುವವರು ಎಚ್ಚರ, ಇದಿಮಾಯಿ ರಂಡಿ ಎದುರಿಗೆ ನಿಂತಾಳ ಜೋಕೆ. ಕಾಲ ಬಾಳ ಕಠಿಣ ಬಂತು, ಯಾವ ಧರ್ಮ ಹಿಡಿದು ನಡಕೋತಾನ ಅವರಿಗೆ ಬೇಕಾದ ಕಷ್ಟ ಬಂದ್ರೂ ಬಯಲು ಮಾಡುತ್ತೇನೆ. ಯಾರು ಬಸವಣ್ಣನ ಕಾಯ್ತಾರ ನಾನು ಅವರನ್ನು ಕಾಯ್ತಿನಿ. ಬಸವಣ್ಣ ಇಲ್ಲಾರದವರ ಮನ್ಯಾಗ ರಾಕ್ಷಸ ಹೊಗಸ್ತೀನಿ. ವರ್ಷ ಇದೇ ತರ ಒಂದೊಂದು ಮೆಟ್ಟಲ ಹೆಚ್ಚು ಮಾಡ್ಕೋತಾ ಹೋದ್ರ ಊರಾಗ ಬಂಗಾರ ಹಾಗೆ ಹಾಯಿಸ್ತೀನಿ. ಛಟ್ಟಿ ಜಾತ್ರಿಗಿ ನನ್ನ ಕುದರೆ ತಗೊಂಡು ಕುಣಕೋತ ಬರ್ತೀನಿ, ನನ್ನ ಕುದರಿಗೆ ಯಾರು ಕೈ ಹಚ್ಚಿಬ್ಯಾಡ್ರಿ, ನನ್ನ ಸಿಂಹಾಸನ ಎಲ್ಲರೂ ಮುಟಬ್ಯಾಡ್ರಿ ಬಾಳ ಜೋಕೆ ಎಂದು ಮಲ್ಲಯ್ಯ ಕಾರ್ಣಿಕ ನುಡಿಯಿತು.ಫೋಟೋ ೮ಡಿಎಚಪಿ