ಸಾರಾಂಶ
ರಾಣಿಬೆನ್ನೂರು: ರಾಜ್ಯದ ಇತಿಹಾಸದಲ್ಲಿಯೇ ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಭಾನುವಾರ ಜೆಡಿಎಸ್ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಲೋಕಸಭೆ ಅಧಿವೇಶನ ಮುಗಿದ ನಂತರ, ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಸಂಘಟನೆ ಹೆಚ್ವು ನೀಡಬೇಕು. ಈ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬಡವರನ್ನು ಆರ್ಥಿಕ ಸಬಲ ಮಾಡುತ್ತೇವೆಂದು ಹೇಳುತ್ತಾರೆ, ಮತ್ತೊಂದು ಕಡೆ ಬಸ್ ದರ ಏರಿಕೆ, ವಿದ್ಯುತ್ ಬಿಲ್ ಏರಿಕೆ, ಮೆಟ್ರೋ ದರ ಏರಿಕೆ ಹಾಗೂ ಅಗತ್ಯ ಬೆಲೆ ಏರಿಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ, ಕಾಂಗ್ರೆಸ್ ಶಾಸಕರೇ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳಿಂದ ಸೇರಿ ಜನಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿನ ವಾತಾವರಣದಲ್ಲಿ ಜನರು ಬುದ್ಧಿವಂತರಾಗಬೇಕಿದೆ, ಕರ್ನಾಟಕದಲ್ಲಿ ಕಳೆದ 3 ತಿಂಗಳಲ್ಲಿ ಬಾಣಂತಿಯರು ಪ್ರತಿದಿನ ಅಸು ನೀಗುತ್ತಿದ್ದಾರೆ. ಇಂತಹ ಕೆಟ್ಟ ಸರ್ಕಾರ ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲ ಎಂದರು.ಮೈಕ್ರೋ ಫೈನಾನ್ಸ್ ಸಾಲ ಮಾಡಿದ ಮಹಿಳೆಯರು ಧೈರ್ಯವಾಗಿ ಎದುರಿಸಬೇಕು, ಸರ್ಕಾರ ಸಾಲ ಮಾಡಿ ಏನು ಆಗಿಲ್ಲ ಅಂತ ತಿರುಗಾಡುತ್ತಿದ್ದಾರೆ. ಆದರೆ, ನೀವು ಆತ್ಮಹತ್ಯೆ ದಾರಿ ಹಿಡಿಯಬೇಡಿ ಎಂದು ಜನರಿಗೆ ಧೈರ್ಯ ತುಂಬಿದರು.
ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಬಗ್ಗೆ ಅಪ ಪ್ರಚಾರ ಮಾಡಿದರು. ನಾನೊಬ್ಬ ರೈತನ ಮಗ, ಯಾವುದೇ ಗುತ್ತಿಗೆದಾರ, ಯಾವುದೇ ರಾಜಕಿಯ ಲಾಭ ಪಡೆದಿಲ್ಲ, ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಿದ್ದೇನೆ ಎಂದರು.ಕಾರ್ಯಕ್ರಮದ ನಂತರ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ಪಕ್ಷದ ಮುಖಂಡರಾದ ರಮೇಶ ಮಾಕನೂರು, ಗಣೇಶ ಮಾಯಾಚಾರ್ಯ, ಶಿವು ಕಡೂರು, ಸಿದ್ದಣ್ಣ ಗುಡಿಮುಂದಳರ, ಉಜ್ಜಪ್ಪ ಕುರುವತ್ತಿ, ರಾಜಣ್ಣ ಗಡ್ಡದಗೂಳಿ, ಚಂದ್ರಣ್ಣ ಮಾಕನೂರು, ನವಲೇಶ ಕಮ್ಮಾರ, ಚಿದಾನಂದ ಬಡಿಗೇರ, ಜೆಡಿಎಸ್ ಪಕ್ಷ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸಿದ್ದಬಸಪ್ಪ ಯಾದವ ಸೇರಿದಂತೆ ಇತರರಿದ್ದರು.