ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತೆರೆದ ತಂತ್ರಾಂಶದ ಮೂಲಕ ಎಂಥಹ ಉನ್ನತ ಅಧ್ಯಯನವನ್ನು ಪಡೆಯಬಹುದಾದ ಈ ಹೊತ್ತಿನಲಿ, ನಾವು ನೀಡುತ್ತಿರುವ ಶಿಕ್ಷಣದ ಸಮಗ್ರ ದೃಷ್ಟಿಕೋನ ಬದಲಾಗಬೇಕಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ ಅಭಿಪ್ರಾಯಪಟ್ಟರು.ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಿಮ ವರ್ಷದ ಎಂಬಿಎ, ಎಂಸಿಎ ಮತ್ತು ಎಂಟೆಕ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಸಮೂಹವು, ದೇಶದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಿದ್ದಾರೆ ಎಂದು, ಭರವಸೆಯಿಂದ ಸಮಾಜ ನೋಡುತ್ತಿದೆ. ಅಂತಹ ಭರವಸೆಯ ಈಡೇರಿಕೆಗೆ ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು, ಸರಿಯಾದ ಶಿಕ್ಷಣದ ಮಾರ್ಗವನ್ನು ಯುವ ಸಮೂಹಕ್ಕೆ ತಿಳಿ ಹೇಳಬೇಕಿದೆ. ಹಳೆಯ ಶಿಕ್ಷಣ ಪದ್ಧತಿಗಳು ವಾಸ್ತವತೆಯ ಅವಶ್ಯಕತೆಗೆ ತಕ್ಕಂತೆ ಬದಲಾಗಬೇಕಿದೆ ಎಂದರು.
ಬಿಗ್ ಡೇಟಾ ಅನಾಲಿಸಿಸ್, ಕೃತಕ ಬುದ್ಧಿಮತ್ತೆ ಯಂತಹ ತಂತ್ರಜ್ಞಾನಗಳು ಪ್ರಪಂಚವನ್ನು ಆಳಲಿದೆ. ಆಧುನಿಕ ಆವಿಷ್ಕಾರಗಳ ಮೂಲಕ ಭಾರತ ಉದ್ಯೋಗ ಆಧಾರಿತ ಬೆಳವಣಿಗೆಯಲ್ಲಿ ಮುನ್ನಡೆಯಬಹುದು. ಯುವ ಸಮೂಹದಿಂದ ಹೊರಹೊಮ್ಮುವ ನಾವೀನ್ಯಯುತ ಚಿಂತನೆಗಳು ಅದ್ಭುತ ಬದಲಾವಣೆಗಳನ್ನು ಮಾಡಲಿದೆ ಎಂದು ಹೇಳಿದರು.ಪದವಿ ಪಡೆದ ಮಾತ್ರಕ್ಕೆ ಕಲಿಕೆ ಇಲ್ಲಿಗೆ ಮುಗಿಯಿತು ಎಂಬ ಭ್ರಮೆ ಬೇಡ. ಕಲಿಕೆ ಒಂದು ನಿರಂತರ ಪ್ರಕ್ರಿಯೆ. ಏಕೆಂದರೆ ಸರ್ವತೋಮುಖ ಬೆಳವಣಿಗೆಗೆ ಹಾಗೂ ಯಶಸ್ಸಿನ ಉನ್ನತೀಕರಣಕ್ಕೆ ನಿರಂತರ ಕಲಿಕೆ ಅನಿವಾರ್ಯ ಎಂಬ ಸತ್ಯವನ್ನು ಅರಿಯಿರಿ.
ನಾವೀನ್ಯತೆ ಮೂಲಕ ಸವಾಲುಗಳನ್ನು ಎದುರಿಸುವ ಕೌಶಲ್ಯತೆ, ಭಾವನಾತ್ಮಕ ಬುದ್ಧಿವಂತಿಕೆಯಂತಹ ಸೂಕ್ಷ್ಮತೆಗಳನ್ನು ಅಳವಡಿಸಿಕೊಳ್ಳಿ. ಅವಕಾಶಗಳ ಬಾಗಿಲುಗಳನ್ನು ತಟ್ಟದೆ, ಬದುಕಿನ ಉನ್ನತೀಕರಣಕ್ಕಾಗಿ ನಿಮ್ಮದೆ ಹೊಸ ಮಾರ್ಗಗಳನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ತಂದೆ ತಾಯಿಯ ಋಣ ತೀರಿಸುವ ಕಾರ್ಯವನ್ನು ಮರೆಯಬಾರದು. ಹಾಗೆಯೇ ಈ ನಾಡಿನ, ದೇಶದ, ಸಮಾಜದ ಋಣವನ್ನು ತೀರಿಸುವ ಕಾರ್ಯವನ್ನು ಮಾಡಬೇಕು. ಆತ್ಮ ಸ್ಥೈರ್ಯ ಯಾವ ಶಕ್ತಿಯನ್ನು ಬೇಕಾದರೂ ಸೋಲಿಸಬಹುದು. ದೃಷ್ಟಿ ಸರಿಯಿದ್ದರೆ ಮಾತ್ರ ಸೃಷ್ಟಿ ಸರಿ ಇರುತ್ತದೆ. ಭರವಸೆ ಹುಟ್ಟಿಸುವಂತ ದೇಶದ ಪ್ರಜೆಗಳಾಗಿ ಬಾಳಿ ಎಂದು ಆಶಿಸಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ದೇಶದ ಸುಭದ್ರತೆಗೆ ಶಿಕ್ಷಣದ ಮಹತ್ವ ಅರಿತ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಸ್ಥಾಪಿಸಿದ ಎನ್ಇಎಸ್ ಸಂಸ್ಥೆಯು ಉತ್ಕೃಷ್ಟ ಶಿಕ್ಷಣ ನೀಡುತ್ತಿದೆ ಎಂದು ವಿವರಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂಬಿಎ ಮುಖ್ಯಸ್ಥ ಡಾ.ಶ್ರೀಕಾಂತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಜಲೇಶ್ ಕುಮಾರ್, ಎಂಸಿಎ ವಿಭಾಗದ ಮುಖ್ಯಸ್ಥ ಡಾ.ಹೇಮಂತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ವಿಟಿಯು ರ‍್ಯಾಂಕ್ ವಿಜೇತ ಎಂಬಿಎ ವಿದ್ಯಾರ್ಥಿಗಳಾದ ಮೇಘ.ಪಿ ಹಾಗೂ ಅಮೃತ ಶ್ರೀಕಾಂತ್, ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಅಲಿಯಾ ವಾಸಿಂ ಮತ್ತು ಸ್ನೇಹ.ಎಸ್ ಅವರನ್ನು ಸನ್ಮಾನಿಸಲಾಯಿತು.--------------------
ಪೊಟೋ: 19ಎಸ್‌ಎಂಜಿಕೆಪಿ01ಶಿವಮೊಗ್ಗದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಿಂದ ಆಯೋಜಿಸಿದ್ದ ಅಂತಿಮ ವರ್ಷದ ಎಂಬಿಎ, ಎಂಸಿಎ ಮತ್ತು ಎಂಟೆಕ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭದಲ್ಲಿ 2023-24ನೇ ಸಾಲಿನಲ್ಲಿ ವಿಟಿಯು ರ‍್ಯಾಂಕ್ ಪಡೆದ ಎಂಬಿಎ ಮತ್ತು ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))