ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಶ್ರೀಕಾಶಿ ಮಠಾಧೀಶರ ಪವಿತ್ರ ಸ್ನಾನ

| Published : Feb 28 2025, 12:52 AM IST

ಸಾರಾಂಶ

ಕಾಶಿ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ೪೦೦ಕ್ಕೂ ಅಧಿಕ ಭಕ್ತರು ಸ್ವಾಮೀಜಿ ಜೊತೆಗಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭದ ಪರ್ವಕಾಲದಲ್ಲಿ ಪ್ರಯಾಗರಾಜ್‌ಗೆ ಆಗಮಿಸಿದ ಕಾಶಿ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ದಂಡದೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ನಾಲ್ಕು ನೂರಕ್ಕೂ ಅಧಿಕ ಭಕ್ತರು ಸ್ವಾಮೀಜಿಯವರ ಜೊತೆಗಿದ್ದರು.

ದೆಹಲಿಯಿಂದ ಪ್ರಯಾಗರಾಜ್ ಶಾಖಾ ಮಠಕ್ಕೆ ಆಗಮಿಸಿದ ಶ್ರೀಗಳನ್ನು ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ ಭಕ್ತರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸ್ವಾಗತಿಸಿದರು. ಕಾಶೀಮಠದ ಆರಾಧ್ಯ ದೇವರುಗಳಾದ ಶ್ರೀ ವ್ಯಾಸ ರಘುಪತಿ ನರಸಿಂಹ ದೇವರನ್ನು ಪೂಜಿಸಿ ಸ್ವಾಮೀಜಿಯವರು ಭಕ್ತರನ್ನು ಆಶೀರ್ವದಿಸಿದರು.ಪ್ರಯಾಗರಾಜ್‌ನಲ್ಲಿ ಕಾಶೀಮಠದ ಶಾಖಾ ಮಠದ ಹೊಸ ಮತ್ತು ನವೀಕರಣಗೊಂಡಿರುವ ಹಳೆ ಕಟ್ಟಡದಲ್ಲಿ ಈ ಮಹಾಕುಂಭದ ಒಂದೂವರೆ ತಿಂಗಳು ದೇಶ, ವಿದೇಶದಿಂದ ಆಗಮಿಸಿದ ಸಾವಿರಾರು ಭಕ್ತರು ನೆಲೆಸಿ, ಪವಿತ್ರ ಸ್ನಾನ ಮಾಡಿ ಧನ್ಯರಾಗಿದ್ದಾರೆ. ಸ್ವಾಮೀಜಿಯವರ ಸೂಚನೆಯಂತೆ ಮಠಕ್ಕೆ ಆಗಮಿಸಿದ ಎಲ್ಲ ಭಕ್ತರಿಗೆ ಸೂಕ್ತ ಆದರಾತಿಥ್ಯದ ವ್ಯವಸ್ಥೆ ಮಾಡಲಾಗಿತ್ತು. ಪವಿತ್ರ ಸ್ನಾನದ ಸಂದರ್ಭದಲ್ಲಿ ಸ್ವಾಮೀಜಿಯವರೊಂದಿಗೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಸಂಸ್ಕೃತ ಭಾರತಿಯ ಪ್ರಮುಖರಾದ ದಿನೇಶ್ ಕಾಮತ್, ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಳದ ಟ್ರಸ್ಟಿ ಸಿಎ ಜಗನ್ನಾಥ ಕಾಮತ್, ಮುಂಬೈ ಜಿಎಸ್‌ಬಿ ಸೇವಾ ಮಂಡಲದ ಅಧ್ಯಕ್ಷ ಅಮಿತ್ ಪೈ, ಮಂಡಲದ ಪ್ರಮುಖರಾದ ದೀಪಕ್ ಶೆಣೈ, ಆರ್. ಜಿ. ಭಟ್, ಯಶವಂತ್ ಕಾಮತ್, ಏರ್ನಾಕುಲಂ ಟಿಟಿಡಿ ಟ್ರಸ್ಟಿ ನವೀನ್ ರಾಧಾಕೃಷ್ಣ ಕಾಮತ್, ಪುತ್ತೂರಿನ ಭಾಮಿ ಅಶೋಕ್ ಶೆಣೈ, ಯೂತ್ ಆಫ್ ಜಿಎಸ್‌ಬಿ ವಾಹಿನಿಯ ಚೇತನ್ ಕಾಮತ್, ನರೇಶ್ ಪ್ರಭು ಮತ್ತಿತರರಿದ್ದರು.