ಸೇಂಟ್ ಪಿಲೋಮಿನಾ ಚೆರ್ಚ್‌ನ ಪಾದ್ರಿಗಳಾದ ಮರಿಯಾರಾಜ್, ಅಂತೋಣಿಕುಮಾರ್ ಹಾಗೂ ಸಿಎಸ್‌ಐ ಚರ್ಚ್‌ನ ಪಾದ್ರಿ ಹ್ಯಾಡ್ರೋಜಾನ್ ಅವರು ಕ್ರಿಸ್‌ಮಸ್ ಸಂದೇಶ ಬೋಧಿಸಿದರು. ಜಗತ್ತಿನ ಎಲ್ಲ ಜನರೂ ಸಂಯಮ, ಸುಖ-ಸಮೃದ್ಧಿಯಿಂದ ಬದುಕುವಂತಾಲಿ. ಜನರು ಆರೋಗ್ಯವಂತರಾಗಿ ಶಾಂತಿ, ಸಹಬಾಳ್ವೆಯಿಂದ ಇರುವಂತಾಗಲಿ ಎಂದು ಶುಭ ಸಂದೇಶ.

ಕನ್ನಡಪ್ರಭ ವಾರ್ತೆ ಮಂಡ್ಯ

ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್‌ಮಸ್‌ ಅನ್ನು ಸಂಭ್ರಮ-ಸಡಗರದಿಂದ ಗುರುವಾರ ಆಚರಿಸಲಾಯಿತು.

ನಗರದ ಸಂತಜೋಸೆಫರ ಚರ್ಚ್ ಹಾಗೂ ಸಾಡೇ ಸ್ಮಾರಕ ದೇವಾಲಯ ಸೇರಿದಂತೆ ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರಿಶ್ಚಿಯನ್ನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಯಮ ಮಾಡಿಕೊಂಡರು.

ಕ್ರಿಸ್‌ಮಸ್ ಮುನ್ನಾ ದಿನ ಬುಧವಾರ ಮಧ್ಯರಾತ್ರಿ 12 ಗಂಟೆವರೆಗೆ ಕ್ರೈಸ್ತರು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಕುರಿತಂತೆ ಭಕ್ತಿಗೀತೆ ಹಾಡಿ ಪ್ರಾರ್ಥಿಸಿದರು. ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನಾ ಕಾರ್ಯಕ್ರಮ ಆರಂಭವಾಗಿ 10.30ರವರೆವಿಗೂ ನಡೆಯಿತು.

ಪಾದ್ರಿಗಳಿಂದ ಆಶೀರ್ವಚನ:

ಸೇಂಟ್ ಪಿಲೋಮಿನಾ ಚೆರ್ಚ್‌ನ ಪಾದ್ರಿಗಳಾದ ಮರಿಯಾರಾಜ್, ಅಂತೋಣಿಕುಮಾರ್ ಹಾಗೂ ಸಿಎಸ್‌ಐ ಚರ್ಚ್‌ನ ಪಾದ್ರಿ ಹ್ಯಾಡ್ರೋಜಾನ್ ಅವರು ಕ್ರಿಸ್‌ಮಸ್ ಸಂದೇಶ ಬೋಧಿಸಿದರು. ಜಗತ್ತಿನ ಎಲ್ಲ ಜನರೂ ಸಂಯಮ, ಸುಖ-ಸಮೃದ್ಧಿಯಿಂದ ಬದುಕುವಂತಾಲಿ. ಜನರು ಆರೋಗ್ಯವಂತರಾಗಿ ಶಾಂತಿ, ಸಹಬಾಳ್ವೆಯಿಂದ ಇರುವಂತಾಗಲಿ ಎಂದು ಶುಭ ಸಂದೇಶ ನೀಡಿದರು.

ಬೆತ್ಲೇಯೇಮ್ ಗೋದಲಿ:

ರಾಜ್ಯದಲ್ಲೇ ಎರಡನೇ ದೊಡ್ಡ ಚರ್ಚ್ ಎನಿಸಿರುವ ಸಂತ ಜೋಸೆಫರ ದೇವಾಲಯದಲ್ಲಿ ಯೇಸು ಸ್ವಾಮಿಯ ಬೆತ್ಲೇಯೇಮ್ ಗೋದಲಿ (ಧರ್ಮ ಕೊಟ್ಟಿಗೆ)ಯನ್ನು ಗುಡಿಸಲಿನ ಆಕಾರದಲ್ಲಿ ಅತ್ಯಾಕರ್ಷಕ ವಿದ್ಯುತ್ ದೀಪಗಳಿಂದ ನಿರ್ಮಿಸಲಾಗಿತ್ತು. ಅದರೊಳಗೆ ಬಾಲ ಯೇಸುವನ್ನುವ ಪ್ರತಿಷ್ಠಾಪಿಸಿ ಹೂವುಗಳಿಂದ ಅಲಂಕರಿಸಲಾಗಿತ್ತು.

ಯೇಸು ಹುಟ್ಟಿದ ಸಂದೇಶ ಮೊದಲು ಕುರುಬರಿಗೆ ರವಾನೆಯಾಗುತ್ತದೆ. ಅದನ್ನು ಕೇಳಿ ಧೂತರು ಗ್ಲೋರಿಗಳನ್ನು ಹಾಡುವ ರೀತಿಯಲ್ಲಿ ಬೆತ್ಲೇಯೇಮ್ ಗೋದಲಿಯನ್ನು ನಿರ್ಮಿಸಿ ಅಲ್ಲಲ್ಲಿ ಕುರಿಗಳು, ಹುಲ್ಲಿನ ಮೈದಾನವನ್ನು ನಿರ್ಮಿಸಲಾಗಿತ್ತು. ಬೆತ್ಲೇಯೇಮ್ ಗೋದಲಿಯ ಗುಡಿಸಲಿಗೆ ಸ್ಟಾರ್‌ಗಳನ್ನು ಕಟ್ಟಿ ಅದಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪುಟ್ಟ ಪುಟ್ಟ ವಿದ್ಯುತ್ ದೀಪಗಳಲ್ಲಿ ಮಿನುಗುತ್ತಿದ್ದ ಗೋದಲಿ ವಿಶೇಷ ಆಕರ್ಷಣೆಯಾಗಿತ್ತು.

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್ ಹಾಗೂ ಚರ್ಚ್‌ನ ಆವರಣವನ್ನು ಅಲಂಕಾರಿಕ ದೀಪಗಳು ಮತ್ತು ಆಕರ್ಷಕ ಬಟ್ಟೆಗಳಿಂದ ಸಿಂಗರಿಸಲಾಗಿತ್ತು. ಕ್ರಿಸ್‌ಮಸ್ ಟ್ರೀಗೂ ದೀಪಾಲಂಕಾರ ಮಾಡಲಾಗಿತ್ತು.

ನಗರದ ಕ್ರಿಶ್ಚಿಯನ್ ಕಾಲೋನಿಯ ಸಾಡೇ ಸ್ಮಾರಕ ದೇವಾಲಯದಲ್ಲೂ ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಪೂಜೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಚರ್ಚ್ ಆವರಣವನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಬೃಹತ್ ವಿದ್ಯುತ್ ದೀಪಗಳನ್ನು ಅಳವಡಿಸಿದ್ದ ನಕ್ಷತ್ರ ಹಾಗೂ ಸಾಂಟಾಕ್ಲಾಸ್‌ನ್ನು ಅಳವಡಿಸಿ ನಗರದ ಕ್ರಿಶ್ಚಿಯನ್ ಕಾಲೋನಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿತ್ತು. ಬಹುತೇಕ ಕ್ರಿಶ್ಚಿಯನ್ ಮನೆಗಳ ಎದುರು ಕ್ರಿಸ್‌ಮಸ್ ಶುಭಾಶಯ ಕೋರುವ ಸ್ಟಾರ್‌ಗಳನ್ನು ಕಟ್ಟಿ ಅದಕ್ಕೆ ವಿದ್ಯುತ್ ದೀಪ ಅಳವಡಿಸಿ ಬಣ್ಣದ ರಂಗು ತುಂಬಿದ್ದರು.

ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದಲೂ ಮನೆ ಮನೆಗೆ ತೆರಳಿ ಏಸು ಕ್ರಿಸ್ತನ ಭಕ್ತಿಗೀತೆಗಳನ್ನು ಹಾಡುವುದರೊಂದಿಗೆ ಎಲ್ಲರೂ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪ್ರೇರೇಪಿಸುತ್ತಿದ್ದುದು ಕಂಡುಬಂದಿತ್ತು.

ಲಕ್ಷ್ಮೀಪುರ, ಕೋಡಿಮಾರನಹಳ್ಳಿಗಳಲ್ಲಿ ಕ್ರಿಸ್ ಮಸ್ ಸಡಗರದಿಂದ ಆಚರಣೆ

ಕಿಕ್ಕೇರಿ:

ಶಾಂತಿ ಸಂದೇಶ ಸಾರಿದ ಏಸು ಪುಣ್ಯ ದಿನ ಕ್ರಿಸ್ ಮಸ್ ಅವನ್ನು ಲಕ್ಷ್ಮೀಪುರ ಹಾಗೂ ಕೋಡಿಮಾರನಹಳ್ಳಿ ಗ್ರಾಮಗಳ ಕ್ರೈಸ್ತಾಲಯಗಳಲ್ಲಿ ಕ್ರೈಸ್ತರು ಸಡಗರದಿಂದ ಆಚರಿಸಿದರು.

ಗುರುವಾರ ಮುಂಜಾನೆಯಿಂದಲೇ ಉಪವಾಸ ವ್ರತಾಚರಣೆ ನಡೆಸಿ ಏಸುಕ್ರಿಸ್ತನನ್ನು ಸ್ಮರಿಸಲಾಯಿತು. ಆಲಯದ ಮುಂದೆ ಏಸು ಹುಟ್ಟಿದ ಕೊಟ್ಟಿಗೆಯ ಆಕೃತಿಯ ಗೋದಲಿ, ದೇವಕನ್ನಿಕೆಯರು, ನಕ್ಷತ್ರ, ಸಂತಕ್ರುಸ್, ಕ್ರಿಸ್‌ಮಸ್‌ಟ್ರಿ, ಕುರಿಯ ಗೊಂಬೆಗಳಿಂದ ಶೃಂಗರಿಸಲಾಗಿತ್ತು.

ಚೈತನ್ಯಾಲಯದ ಧರ್ಮಗುರು ಫಾದರ್‌ ಸಿ.ಅಜೆಶ್‌ ಮಾತನಾಡಿ, ಏಸು ಅಹಿಂಸೆಯ ದ್ಯೋತಕವಾಗಿದ್ದು, ಅಹಿಂಸಾ ಮಂತ್ರವನ್ನು ಜಗತ್ತಿಗೆ ಸಾರಿದವರಾಗಿದ್ದಾರೆ. ಏಸುವಿನ ಬದುಕು, ಮಾನವೀಯತೆ ತ್ಯಾಗ ಜೀವನ ಪರಿಪಾಲನೆ ಮಾಡಿ ಜಾತಿ ಸಂಘರ್ಷ ಬಿಟ್ಟು ಮಾನವರಾಗಿ ಬದುಕುವುದನ್ನು ಕಲಿಯಬೇಕಿದೆ ಎಂದರು.

ಹುಟ್ಟು ಸಾವಿನ ನಡುವೆ ಪ್ರೀತಿಯೊಂದೇ ಶಾಶ್ವತ ಹಾಗೂ ಶ್ರೇಷ್ಟವಾಗಿದೆ. ಮಾನವೀಯ ಮೌಲ್ಯ ಉಳಿಸಿಕೊಂಡು ಬದುಕಲು ಮುಂದಾಗಬೇಕಿದೆ. ಪ್ರಕೃತಿ ಮುನಿದರೆ ಎಲ್ಲವೂ ನಾಶವಾಗಲಿದ್ದು, ಪ್ರಕೃತಿಯನ್ನು ಪ್ರೀತಿಸಿ ಉಳಿಸುವ ಕೆಲಸವಾಗಬೇಕಿದೆ ಎಂದರು.

ಹೋಬಳಿಯಾದ್ಯಂತ ಹಿರಿಯರು, ಮಕ್ಕಳು ಕ್ರೈಸ್ತಾಲಯಕ್ಕೆ ಭೇಟಿ ನೀಡಿ ಬಾಲ ಏಸು, ಏಸು ಶಿಲುಬೆಗೆ ನಮಿಸಿದರು. ಧರ್ಮಗುರುಗಳು ಕ್ರೈಸ್ತಾಲಯಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಕೇಕ್, ಕಡಲೆಪುರಿ, ಸಿಹಿ ತಿಂಡಿ ವಿತರಿಸಿ ಶುಭಾಶಯ ಕೋರಿದರು. ಕ್ರೈಸ್ತಾಲಯದ ವಿಜಯ ಮೇರಿ, ವಿಜಯಶ್ರೀ, ಜೋಸ್ಮಿನ್, ಮಾತೆಯರು ಇದ್ದರು.