ಉದಯಗಿರಿ ಗಲಾಟೆ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ

| Published : Feb 26 2025, 01:05 AM IST

ಸಾರಾಂಶ

ಘಟನೆ ಪೂರ್ವ ನಿಯೋಜಿತ ಕೃತ್ಯ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪಾರ್ಟ್ 2 ಉದಯಗಿರಿ ಘಟನೆ ಎಂದು ಆರೋಪ

ಕನ್ನಡಪ್ರಭ ವಾರ್ತೆ ಮೈಸೂರು

ಉದಯಗಿರಿಯಲ್ಲಿ ನಡೆದ ಗಲಾಟೆ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಖಂಡಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರು ಅಸಹಾಯಕತೆಯಿಂದ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಉದಯಗಿರಿಯಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಕೃತ್ಯ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪಾರ್ಟ್ 2 ಉದಯಗಿರಿ ಘಟನೆ ಎಂದು ಆರೋಪಿಸಿದರು.

ಈ ಸರ್ಕಾರದಲ್ಲಿ ಅಧಿಕಾರಿಗಳು, ಜನ ಸಾಮಾನ್ಯರು, ಪೊಲೀಸರಿಗೂ ರಕ್ಷಣೆ ಇಲ್ಲ. ಈ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ನಾವು ಯೋಚನೆ ಮಾಡಬೇಕು ಎಂದರು.

ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಹಾಕೊಂಡಿದ್ದಾರೆ. ಮಾತೆತ್ತಿದರೆ ಎಸ್ಸಿ, ಎಸ್ಟಿ ಸಮುದಾಯದ ಜೊತೆ ಇದ್ದೇವೆ ಎನ್ನುತ್ತಾರೆ. ಈ ಸಮುದಾಯಗಳ ಜೊತೆ ಕಾಂಗ್ರೆಸ್ ನಿಂತಿದಿಯಾ ಎಂದು ಅರಿಯಬೇಕು.

ಕೇವಲ ಚುನಾವಣೆಯಲ್ಲಿ ವೋಟ್ ಬ್ಯಾಂಕ್ ಗೋಸ್ಕರ ಇದ್ದಾರಾ ಎಲ್ಲವನ್ನು ಯೋಚಿಸಬೇಕು. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಆರೋಪ ಮಾಡಿದ್ದರು. ಈಗಿನ ಸರ್ಕಾರದ ಕಮಿಷನ್ ಗೆ ಮಿತಿಯೇ ಇಲ್ಲ ಎಂದು ಅವರು ಆರೋಪಿಸಿದರು.

ಅಧಿಕಾರಿಗಳ ತಪ್ಪಿನ ಹಿಂದೆ ಯಾರು ಇದ್ದಾರೆ?

ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ಅಧಿಕಾರಿಗಳ ತಪ್ಪು ಎಂದು ಹೇಳಿದ್ದಾರೆ. ಅಧಿಕಾರಿಗಳ ತಪ್ಪಿನ ಹಿಂದೆ ಯಾರು ಇದ್ದಾರೆ? ಬೆನ್ನ ಹಿಂದೆಯಿದ್ದ ಬಲಿಷ್ಠರು ಯಾರು? ಲೋಕಾಯುಕ್ತ ಈ ಹಿಂದೆ ಹೇಗಿತ್ತು. ಸಂತೋಷ್ ಹೆಗ್ಡೆ ಅವರ ಕಾಲದಲ್ಲಿ ಹೇಗಿತ್ತು, ಈಗ ಹೇಗಿದೆ ಎಂದು ಪ್ರಶ್ನಿಸಿದರು.

ಇದೇ ಸಿದ್ದರಾಮಯ್ಯ ಈ ಹಿಂದೆ ಲೋಕಾಯುಕ್ತದ ಹಲ್ಲು ಕಿತ್ತು ಹಾಕಿದ್ದರು. ತಮ್ಮ ಹುಳುಕು ಮುಚ್ಚಿಕೊಳ್ಳಲು ಹಾಗೆಲ್ಲಾ ಮಾಡಿದರು. ರಾಜ್ಯದ ಸಿಎಂ ಎ1, ಅವರ ಪತ್ನಿ ಎ2, ಬಾಮೈದ ಎ3 ಆರೋಪಿ. ಲೋಕಾಯುಕ್ತರು ಸಿಎಂ ಕೈ ಕೆಳಗೆ ಇರೋದು. ಇನ್ನೇನು ನ್ಯಾಯ ಸಿಗತ್ತದೆ ಎಂದು ಅವರು ಕಿಡಿಕಾರಿದರು.

ಬೆಳಗಾವಿಯಲ್ಲಿ ಮರಾಠಿ ಪುಂಡರಿಂದ ಪುಂಡಾಟಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕನ್ನಡಿಗರು ಸ್ವಾಭಿಮಾನಿಗಳು. ನಾವು ಎದ್ದೇಳುವ ಮುನ್ನ ಸರ್ಕಾರಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

----

ಕೋಟ್...

ಬಿಡದಿಯ ಕೇತುಗಾನಹಳ್ಳಿ ಜಮೀನು ವಿಚಾರವನ್ನು 10 ವರ್ಷದ ಹಿಂದೆಯಿಂದಲೇ ಪ್ರಾರಂಭ ಮಾಡಿದ್ದರು. ನಾವು ಯಾರಿಗೂ ಮೋಸ ಮಾಡಿ, ಅಕ್ರಮ ಎಸಗಿ ಜಮೀನು ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ಅವರ ಹೆಸರಿನಲ್ಲಿ ಇರುವ ಒಂದೇ ಒಂದು ಆಸ್ತಿ ಅದು. ನನಗೂ ಕೃಷಿಕನಾಗಿ ಮುಂದುವರೆಬೇಕೆಂದು ಬುದ್ಧಿ ಹೇಳಿದ್ದಾರೆ. ನಾವ್ಯಾರು ಅಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ಕಟ್ಟಿ ಬಾಡಿಗೆ ತೆಗೆದುಕೊಳ್ಳುತ್ತಿಲ್ಲ. ನಾವು ಅಲ್ಲಿ ಕೃಷಿ ಮಾಡುತ್ತಿದ್ದೇವೆ.

- ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ, ಜೆಡಿಎಸ್ ಯುವ ಘಟಕ