ಸಾರಾಂಶ
ವಿಶೇಷ ವರದಿ
ಹೊನ್ನಾವರ: ಪ್ರಕೃತಿ ಸೌಂದರ್ಯದಿಂದ ತನ್ನತ್ತ ಸೆಳೆಯುವ ತಾಲೂಕಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಹೀಗಾಗಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ತಾಲೂಕಿನಲ್ಲಿ ತಿರುವುಗಳಿಂದ ಕೂಡಿದ ಹೊನ್ನಾವರ- ಬೆಂಗಳೂರು ಹೆದ್ದಾರಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.ಸರಿಯಾದ ಸೂಚನಾ ಫಲಕಗಳೂ ಇಲ್ಲದಿರುವುದು ವಾಹನ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿದೆ. ಮುಖ್ಯವಾಗಿ ಹೊನ್ನಾವರ ತಾಲೂಕಿನಿಂದ ಬೆಂಗಳೂರಿಗೆ ಸಾಗುವ ಎನ್ಎಚ್ ೬೯ ಹೆದ್ದಾರಿಯಲ್ಲಿ ಸೂಚನಾ ಫಲಕಗಳಿರದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಹೊನ್ನಾವರದಿಂದ ಬೆಂಗಳೂರಿಗೆ ತೆರಳುವ ಹೆದ್ದಾರಿಯಲ್ಲಿ ಬಿಡುವಿಲ್ಲದೆ ಹಗಲು- ರಾತ್ರಿ ವಾಹನಗಳು ಸಂಚರಿಸುತ್ತಿವೆ.
ಈ ರಸ್ತೆ ಹಾಳಾಗಿ ಮತ್ತೆ ತೇಪೆ ಹಾಕುವ ಕೆಲಸವನ್ನು ಮಾಡಲಾಗಿದೆ. ಹೊನ್ನಾವರದಿಂದ ಗೇರುಸೊಪ್ಪದವರೆಗೆ ರಸ್ತೆ ಹೆಚ್ಚಿನ ತಿರುವುಗಳನ್ನು ಹೊಂದಿದೆ. ಇವು ಬಹಳ ಅಪಾಯಕಾರಿಯಾಗಿವೆ. ಆದರೆ ರಾಜ್ಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ವಾಹನ ಸವಾರರಿಗೆ ಕಾಣುವ ಸೂಚನಾ ಫಲಕಗಳು ಸರಿಯಾಗಿ ಇಲ್ಲ.ಇತ್ತೀಚಿನ ದಿನಗಳಲ್ಲಿ ಹೊನ್ನಾವರ ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಾಲಯಕ್ಕೆ ಸಮೀಪವಿರುವ ಬಾಳೆಗದ್ದೆ ಬಳಿ ಇರುವ ಅಪಾಯಕಾರಿ ತಿರುವಿನಲ್ಲಿ ಬಸ್, ಲಾರಿ, ರೀಕ್ಷಾ, ಬೈಕ್ ಹೀಗೆ ವಾಹನಗಳು ಅಪಘಾತಗಳಾಗಿ ಸಾವು- ನೋವುಗಳು ಸಂಭವಿಸುತ್ತಿವೆ. ಆದರೆ ಇಲ್ಲಿ ಒಂದೇ ಒಂದು ಸೂಚನಾ ಫಲಕಗಳಿಲ್ಲ.ಅಪಘಾತ ವಲಯ ನಿಧಾನವಾಗಿ ಚಲಿಸಿ ಎಂಬ ಬೋರ್ಡ್ ಆಗಲಿ, ರಸ್ತೆ ತಿರುವಿನಿಂದ ಕೂಡಿದೆ ನಿಧಾನವಾಗಿ ಚಲಿಸಿ ಎಂಬಂಥ ಯಾವುದೇ ಫಲಕಗಳು ರಸ್ತೆಬದಿ ಇಲ್ಲ. ಅಲ್ಲದೆ ಹೀಗೆ ಮುಂದೆ ಹೋದರೆ ಕವಲಕ್ಕಿ, ಹಡಿನಬಾಳ, ಗೇರುಸೊಪ್ಪದ ಕೆಲವು ತಿರುವುಗಳಲ್ಲಿಯೂ ಸೂಚನಾ ಫಲಕಗಳಿಲ್ಲ. ಇದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಹಲವು ಅಪಘಾತಗಳು ಸಂಭವಿಸಿದರೂ ಇದರತ್ತ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿಲ್ಲ.ಬಸ್ ಪಲ್ಟಿಯಾಗುವುದೇ ಹೆಚ್ಚು: ಮುಗ್ವಾ ಸುಬ್ರಹ್ಮಣ್ಯದ ಸಮೀಪ ಸೂಚನಾ ಫಲಕದ ಬೋರ್ಡ್ ಹಾಕಬೇಕು. ಬೆಂಗಳೂರು ಕಡೆಯಿಂದ ಬರುವ ಚಾಲಕರಿಗೆ ಹಾಗೂ ಬಾಳೆಗದ್ದೆ ದೇವಾಲಯದ ಸಮೀಪ ಮುಂದೆ ತಿರುವಿದೆ ಎಂಬ ಬೋರ್ಡ್ ಹಾಕಿದರೆ ಹೊನ್ನಾವರದಿಂದ ಬೆಂಗಳೂರು ಕಡೆ ಹೋಗುವ ಚಾಲಕರಿಗೆ ಅನುಕೂಲವಾಗುತ್ತದೆ.
ಬಾಳೆಗದ್ದೆ ಅತ್ಯಂತ ಅಪಾಯಕಾರಿಯಾದ ಕ್ರಾಸ್. ಇಲ್ಲಿ ಒಂದೇ ಸಮನೆ ವೇಗವಾಗಿ ಗಾಡಿ ಚಲಿಸುತ್ತವೆ. ಹೀಗಾಗಿ ಪಲ್ಟಿ ಹೊಡೆಯುವ ಸಾಧ್ಯತೆ ಹೆಚ್ಚು. ಅಲ್ಲದೆ ಕೆಲವು ದೂರದ ಪ್ರದೇಶದಿಂದ ಬರುವ ವಾಹನ ಚಾಲಕರಿಗೆ ಕ್ರಾಸ್‌ನ ಬಗ್ಗೆ ಮಾಹಿತಿ ಇರುವುದಿಲ್ಲ. ರಸ್ತೆಯ ಪಕ್ಕ ಈ ಹಿಂದೆ ಕೆಲವು ಸೂಚನಾ ಫಲಕಗಳು ಇತ್ತು. ಆದರೆ ರಸ್ತೆ ಅಗಲೀಕರಣದ ಹೊತ್ತಿನಲ್ಲಿ ಮತ್ತು ಸರಿಯಾದ ನಿರ್ವಹಣೆಯಿಲ್ಲದೆ ನಾಶವಾಗಿದೆ.ಸೂಚನಾ ಫಲಕ: ಹೊನ್ನಾವರದಿಂದ ಬೆಂಗಳೂರಿಗೆ ತೆರಳುವ ಎನ್ಎಚ್ ೬೯ ಹೆದ್ದಾರಿಯ ಒಂದು ಪ್ರದೇಶದ ಕಥೆ ಇದಾಗಿರಬಹುದು. ಆದರೆ ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಹಲವು ಕ್ರಾಸ್‌ಗಳಲ್ಲಿ ಫಲಕಗಳು ಇರದೇ ಇದ್ದಿದ್ದು ಸಿಗಬಹುದು. ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಇದರ ಬಗ್ಗೆ ವಿಶೇಷ ಗಮನಹರಿಸಿ ಆದಷ್ಟು ಶೀಘ್ರದಲ್ಲಿ ಸೂಚನಾ ಫಲಕಗಳನ್ನು ಹಾಕಲು ಮುಂದಾಗಬೇಕು ಎಂದು ಬೈಕ್ ಸವಾರ ಮಂಜುನಾಥ್ ತಿಳಿಸಿದರು.