ಸಾರಾಂಶ
ಯಗಟಿ ಗ್ರಾಮದಲ್ಲಿ ತಾಲೂಕು ಪ್ರದೇಶ ಕುರುಬರ ಸಂಘದ 537ನೇ ಕನಕ ಜಯಂತ್ಯುತ್ಸವ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕಡೂರುಕನಕದಾಸರು, ಅಂಬೇಡ್ಕರ್ ಹಾಗೂ ಬಸವಣ್ಣ ಸೇರಿದಂತೆ ಸಾಧು ಸಂತ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತ ಗೊಳಿಸದೆ ಎಲ್ಲ ಸಮಾಜಗಳನ್ನು ಒಳಗೊಳ್ಳುವ ವೇದಿಕೆಗಳು ನಿರ್ಮಾಣವಾಗಬೇಕು ಎಂದು ಕಾರ್ಮಿಕ ಸಚಿವ ಎಸ್. ಸಂತೋಷ್ ಲಾಡ್ ಹೇಳಿದರು.
ಶನಿವಾರ ತಾಲೂಕಿನ ಯಗಟಿ ಗ್ರಾಮದಲ್ಲಿ ತಾಲೂಕು ಪ್ರದೇಶ ಕುರುಬರ ಸಂಘದಿಂದ ಆಯೋಜಿಸಿದ್ದ 537ನೇ ಕನಕ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಮಾನವ ಧರ್ಮ ಉದ್ಧಾರವಾಗಬೇಕೆಂಬ ಪರಿಕಲ್ಪನೆಯಲ್ಲಿ ಬಸವಾದಿ ಶರಣರು ಹಾಗೂ ದಾಸರ ಆಶಯ ಒಂದೇ ಆಗಿದ್ದವು. ಆದರೆ ಆಧುನಿಕ ಜೀವನದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಒಗ್ಗಿ ಕೊಂಡಿರುವುದು ವಿಪರ್ಯಾಸ ಮತ್ತು ಬೇಸರದ ಸಂಗತಿ ಎಂದರು. ಎಲ್ಲರ ಶ್ರೇಯೋಭಿವೃದ್ಧಿಗೆ ಚಿಂತನೆ ನಡೆಸುವ ಹಾಲುಮತ ಸಮಾಜಕ್ಕೆ ಇಂದಿನ ಶಕ್ತಿಯಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆಗಳು ಶೋಷಿತ ಸಮಾಜಗಳಿಗೂ ಬದುಕು ಕಟ್ಟಿಕೊಳ್ಳುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇಡೀ ದೇಶದಲ್ಲಿ ಎಲ್ಲೂ ನೀಡದಂತಹ ಯೋಜನೆಗಳನ್ನು ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಯಶಸ್ವಿಯಾಗಿ ಜಾರಿಗೊಳಿಸಿ ಬಡವರ ಬದುಕಿಗೆ ಆಶಾಕಿರಣವಾಗಿಸುವ ಜೊತೆಗೆ ಆರ್ಥಿಕತೆ ಜಿಡಿಪಿಯಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದೇವೆ ಎಂದರು.ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡಿದಾಗ ಉತ್ತಮ ಪ್ರತಿಫಲ ಸಾಧ್ಯವಾಗುತ್ತದೆ. ಮೇಲು ಕೀಳು ಎಂಬ ಅಸಮಾನತೆ ಗಳನ್ನು ತೊಡೆದು ಹಾಕಿ ಸಮ ಸಮಾಜದ ನಿರ್ಮಾಣ ಕನಕದಾಸರ ಮುಖ್ಯ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಯುವ ಪೀಳಿಗೆ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಟ್ಟಿಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ದಾಸ ಸಾಹಿತ್ಯ ತನ್ನ ಭಕ್ತಿ ಪಂಥದ ಮೂಲಕ ಸಮಾಜದ ಬದಲಾವಣೆಗೆ ಮತ್ತಷ್ಟು ಒತ್ತು ನೀಡಿದೆ. ಪ್ರತಿ ವರ್ಷ ನಗರ ಪ್ರದೇಶದಲ್ಲಿ ನಡೆಯುತ್ತಿದ್ದ ಕನಕ ಜಯಂತ್ಯುತ್ಸವ ಈ ಬಾರಿ ಗ್ರಾಮೀಣ ಭಾಗದಲ್ಲಿ ಅದ್ಧೂರಿ ಆಚರಣೆಯೊಂದಿಗೆ ಯಶಸ್ವಿ ಜಯಂತ್ಯುತ್ಸವ ನಡೆದಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಹೋಬಳಿಗಳ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಲಾಗುವುದು. ಯಗಟಿ ಭಾಗದಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಿದರೆ ಈ ವರ್ಷವೇ ₹50 ಲಕ್ಷ ಅನುದಾನ ನೀಡಲಾಗುವುದು ಎಂದರು.ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಸಮಾಜದ ಸಂಘಟಿತ ಕೆಲಸಗಳಿಗೆ ಯಾವುದೇ ಭಿನ್ನಾಪ್ರಾಯ ವ್ಯಕ್ತವಾಗದಂತೆ ಸಮಾಜದ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು. ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕನಕದಾಸರು ಹಾಕಿಕೊಟ್ಟ ಹಾದಿಯಲ್ಲಿಯೇ ಕ್ಷೇತ್ರದಲ್ಲಿ ಕುರುಬ ಸಮಾಜ ಇತರೆ ಎಲ್ಲ ವರ್ಗದ ಸಮಾಜಗಳೊಂದಿಗೆ ಬೆರೆತು ವಿಶ್ವಾಸಗಳಿಸಿ ಸಮಾನತೆ ಕಾಪಾಡಲಾಗಿದೆ. ಮುಖ್ಯ ವಾಗಿ ಪಟ್ಟಣದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಗೆ ನಿರ್ದಿಷ್ಟವಾದ ಕಚೇರಿ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ಕಾರ್ಮಿಕ ಸಚಿವರು ಕಚೇರಿಗೆ ಸ್ವಂತ ಕಟ್ಟಡದ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಿದರೆ ಈ ಭಾಗದ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಹೆಚ್ಚು ಸಹಕಾರಿ ಎಂದರು.ಈ ಸಂದರ್ಭದಲ್ಲಿ ಯಗಟಿ ಗ್ರಾಮದ ಶ್ರೀ ಕಳ್ಳಿ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದಿಂದ ಅಲಂಕೃತ ರಥದಲ್ಲಿ ಶ್ರೀಗಳೊಂದಿಗೆ ಸಮಾರಂಭದ ವೇದಿಕೆವರೆಗೆ ಮೆರವಣಿಗೆ ನಡೆಯಿತು. ಚಿತ್ರನಟ ಸಾಧುಕೋಕಿಲ ಮತ್ತು ಸಹ ಕಲಾವಿದರ ತಂಡ ವೇದಿಕೆಯಲ್ಲಿ ದಾಸರ ಪದಗಳನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು. ಕಾಗಿನೆಲೆಯ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಎಚ್.ಸಿ. ಲೋಕೇಶ್ ಉಪನ್ಯಾಸ ನೀಡಿದರು.ಸಂಸದ ಶ್ರೇಯಸ್ ಪಟೇಲ್, ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ, ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್, ಜಿಪಂ ಮಾಜಿ ಸದಸ್ಯರಾದ ಶರತ್ ಕೃಷ್ಣಮೂರ್ತಿ, ವನಮಾಲ ದೇವರಾಜ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಭೋಗಪ್ಪ, ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಡಿ.ಎಸ್. ಉಮೇಶ್, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್, ಸುಧಾ ಉಮೇಶ್,ಶಿವಮ್ಮ, ಕೆ.ಎಂ. ಮಹೇಶ್ವರಪ್ಪ, ಕರಿಬಡ್ಡೆ ಶ್ರೀನಿವಾಸ್, ಕೆ.ಜಿ.ಲೋಕೇಶ್ವರ್, ಗೋವಿಂದಪ್ಪ, ಯಶ್ವಂತ್ ಕುಮಾರ್, ದಾನಿ ಉಮೇಶ್, ಕಂಸಾಗರ ಸೋಮಶೇಖರ್, ಎಂ.ಬಿ.ಮಂಜುನಾಥ್, ಕಂಸಾಗರ ರೇವಣ್ಣ, ಕೆ.ಎಚ್. ಶಂಕರ್, ಕೆ.ಎಸ್ ತಿಪ್ಪೇಶ್, ಸಿಗೇಹಡ್ಲು ಹರೀಶ್, ಕೋಡಿಹಳ್ಳಿ ಸಿದ್ದಪ್ಪ, ಯರದಕೆರೆ ಓಂಕಾರ್ ಹಾಗು ಜನರು ಮತ್ತಿತರಿದ್ದರು. 4ಕೆಕೆಡಿಯು1.
ಕಡೂರು ತಾಲೂಕಿನ ಯಗಟಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ 537ನೇ ಕನಕದಾಸರ ಜಯಂತ್ಯುತ್ಸವವನ್ನು ಕಾರ್ಮಿಕ ಸಚಿವ ಎಸ್.ಸಂತೋಷ್ ಲಾಡ್ ಉದ್ಘಾಟಿಸಿದರು.