ಮದ್ಯಪಾನ, ಗುಟ್ಕಾ ಪಾನ್‌ಬೀಡಾ ಅಡ್ಡೆಯಾದ ಭವನ !

| Published : Apr 08 2025, 12:30 AM IST

ಸಾರಾಂಶ

ಬೆಲ್ಲದ ನಾಡು, ಕಲೆಗಳ ಬೀಡು, ಕಲಾವಿದರ ತವರು ಎನಿಸಿದ ಮಹಾಲಿಂಗಪುರದಲ್ಲಿ ದಶಕದ ಹಿಂದೆ (೧೩ ವರ್ಷಗಳ ಹಿಂದೆ) ನಿರ್ಮಾಣವಾದ ರಂಗಮಂದಿರ ಪಾಳು ಬಿದ್ದಿದೆ.

ರಾಜೇಂದ್ರ ನಾವಿ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬೆಲ್ಲದ ನಾಡು, ಕಲೆಗಳ ಬೀಡು, ಕಲಾವಿದರ ತವರು ಎನಿಸಿದ ಮಹಾಲಿಂಗಪುರದಲ್ಲಿ ದಶಕದ ಹಿಂದೆ (೧೩ ವರ್ಷಗಳ ಹಿಂದೆ) ನಿರ್ಮಾಣವಾದ ರಂಗಮಂದಿರ ಪಾಳು ಬಿದ್ದಿದೆ. ಕಲಾವಿದರ ಕಲೆಗೆ ಆಸರೆಯಾಗಬೇಕಿದ್ದ ರಂಗಮಂದಿರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿದೆ.

ಖ್ಯಾತ ಕಲಾವಿದೆ, ಕ್ಷೇತ್ರದ ಶಾಸಕಿ ಉಮಾಶ್ರೀ ಅವರ ಕಾಳಜಿಯಿಂದ ₹3.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು 2022ರ ಮಾರ್ಚ್‌ 12ರಂದು ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಆಗಿದ್ದ ಉಮಾಶ್ರೀಯವರೇ ಉದ್ಘಾಟಿಸಿದ್ದರು. ಸುವ್ಯವಸ್ಥಿತವಾದ 110 ಆಸನ ಹೊಂದಿದ್ದು, ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ ಹೆಸರಿನಲ್ಲಿ ತಲೆ ಎತ್ತಿದ್ದ ಈ ರಂಗ ಮಂದಿರದ ಸ್ಥಿತಿ ನೋಡಿ ಕಲಾವಿದರು ತಲೆ ತಗ್ಗಿಸುವಂತಾಗಿದೆ.

ಅವ್ಯವಸ್ಥೆಗಳ ಆಗರ:

ಕಟ್ಟಡಕ್ಕೆ ಕಾಂಪೌಂಡ್ ಹಾಗೂ ಸಿಬ್ಬಂದಿಯ ಕಾವಲು ಇಲ್ಲದೆ ಬೇಕಾಬಿಟ್ಟಿ ಬಳಕೆಯಾಗಿ ಹಾಳಾಗುತ್ತಿದೆ. ರಾತ್ರಿ ಕುಡುಕರ ಅಡ್ಡೆಯಾಗಿದ್ದು, ಎಲ್ಲಿ ನೋಡಿದರಲ್ಲಿ ಸಾರಾಯಿ ಬಾಟಲ್‌, ಪೌಚ್‌ಗಳು ಕಂಡುಬರುತ್ತವೆ. ಗುಟ್ಕಾ ಚೀಟಿ ತಿಂದು ಉಗುಳಿ ಜೊತೆಗೆ ಎಸೆದು ಹೋಗಿದ್ದಾರೆ. ಆವರಣದಲ್ಲಿ ಗಿಡಗಂಟಿಗಳು ಬೆಳೆದು ಶೌಚಕ್ಕೆ ಹೇಳಿಮಾಡಿಸಿದ ಸ್ಥಳವಾಗಿದೆ. ಕಿಡಿಗೇಡಿಗಳು ಕಿಟಕಿಯ ಗಾಜು ಒಡೆದು ಹಾಕಿದ್ದಾರೆ. ನಾಮಫಲಕದ ಅಕ್ಷರಗಳು ಉದುರಿ ಬಿದ್ದಿವೆ. ಹೀಗೆಯೇ ಬಿಟ್ಟರೆ ಕಟ್ಟಡವೇ ಉದುರಿ ಬೀಳುವ ಸ್ಥಿತಿ ತಲುಪುವುದರಲ್ಲಿ ಸಂದೇಹವಿಲ್ಲ.

ಕಲಾವಿದರ ಬೇಡಿಕೆ:

ಜಿಲ್ಲಾದ್ಯಂತ ಅತಿ ದೊಡ್ಡದಾದ ರಂಗಮಂದಿರ ನಮ್ಮಲ್ಲಿದೆ. ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಅನುಕೂಲ ಕಲ್ಪಿಸಿಕೊಟ್ಟರೆ ಕಲಾವಿದರಿಗೆ ಸಹಾಯವಾಗುತ್ತದೆ. ಜೊತೆಗೆ ಕೌಜಲಗಿ ನಿಂಗಮ್ಮ ಟ್ರಸ್ಟ್ ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಕಲಾವಿದರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.ರಂಗಮಂದಿರವನ್ನು ಸ್ಥಳೀಯ ಸಂಸ್ಥೆಯ ಬದಲಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನಿರ್ವಹಣೆ ಮಾಡಬೇಕು. ಇದರಿಂದ ಸ್ಥಳೀಯ ಮತ್ತು ಬೇರೆ ಊರಿನ ಕಲಾವಿದರಿಗೆ ಅನುಕೂಲವಾಗುತ್ತದೆ.

-ರಂಗನಾಥ್ ಡಿ.ಕೆ. ಸ್ಥಳೀಯ ಕಲಾವಿದರು ಮಹಾಲಿಂಗಪುರಈಗಾಗಲೇ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದೇವೆ. ಜೊತೆಗೆ ರಂಗಮಂದಿರ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಿ ನಿರ್ವಹಣೆಗೆ ಸಿಬ್ಬಂದಿ ವ್ಯವಸ್ಥೆ ಕಲ್ಪಿಸುತ್ತೇವೆ.

-ಈರಣ್ಣ ಎಸ್ ದಡ್ಡಿ. ಪುರಸಭೆ ಮುಖ್ಯಾಧಿಕಾರಿ

ಸಿಬ್ಬಂದಿ ಕೊರತೆಯಿಂದ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ರಂಗ ಮಂದಿರದ ನಿರ್ವಹಣೆ ಬಗ್ಗೆ ನಮಗೆ ಪತ್ರದ ಮೂಲಕ ಗಮನಕ್ಕೆ ತಂದರೆ ಪೂರಕ ಸೌಲಭ್ಯ ಕಲ್ಪಿಸಿ ಕೊಡುತ್ತೇವೆ.

-ಕರ್ಣ ಕುಮಾರ. ಸಹಾಯಕ ನಿರ್ದೇಶಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ