ಪರಿಹಾರ ನೀಡದೇ ರಾಷ್ಟ್ರೀಯ ಹೆದ್ದಾರಿಗಾಗಿ ಮನೆ ತೆರವುಗೊಳಿಸಲು ಬಿಡಲ್ಲ

| Published : Mar 29 2024, 12:52 AM IST

ಪರಿಹಾರ ನೀಡದೇ ರಾಷ್ಟ್ರೀಯ ಹೆದ್ದಾರಿಗಾಗಿ ಮನೆ ತೆರವುಗೊಳಿಸಲು ಬಿಡಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿಗೆ ವಶಪಡಿಸಿಕೊಂಡಿರುವ ಜಾಗವನ್ನು ತೆರವುಗೊಳಿಸಲು ಹೋದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗ್ರಾಮಸ್ಥರ ವಿರೋಧದಿಂದ ಜಾಗ ತೆರವುಗೊಳಿಸದೇ ವಾಪಸ್ ಬಂದ ಘಟನೆ ತಾಲೂಕಿನ ಕರಡಿ ಗ್ರಾಮದ ಬಳಿ ಗುರುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ರಾಷ್ಟ್ರೀಯ ಹೆದ್ದಾರಿಗೆ ವಶಪಡಿಸಿಕೊಂಡಿರುವ ಜಾಗವನ್ನು ತೆರವುಗೊಳಿಸಲು ಹೋದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗ್ರಾಮಸ್ಥರ ವಿರೋಧದಿಂದ ಜಾಗ ತೆರವುಗೊಳಿಸದೇ ವಾಪಸ್ ಬಂದ ಘಟನೆ ತಾಲೂಕಿನ ಕರಡಿ ಗ್ರಾಮದ ಬಳಿ ಗುರುವಾರ ನಡೆಯಿತು.

ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಂತೆ ಕರಡಿ ಗ್ರಾಮದ ಸುಮಾರು 20 ಮನೆಗಳಿದ್ದು, ರಸ್ತೆ ಅಗಲೀಕರಣಕ್ಕೆ ಈ ಮನೆಗಳಿರುವ ಜಾಗವನ್ನು ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿತ್ತು. ಅದರಂತೆ ಗುರುವಾರ ಅಧಿಕಾರಿಗಳು ಹಾಗೂ ಪೊಲೀಸರ ತಂಡ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿದ್ದ ಮನೆಗಳನ್ನು ತೆರವುಗೊಳಿಸಲು ಹೋದಾಗ ಗ್ರಾಮಸ್ಥರು ತೀವ್ರವಾಗಿ ವಿರೋಧಿಸಿದರು. ನಾವು ಈ ಮನೆಗಳಲ್ಲಿ ವಾಸವಿದ್ದೇವೆ. ಜಾಗ ಸ್ವಾಧೀನಪಡಿಸಿಕೊಂಡಿದ್ದರೂ ನಮಗೆ ಇದುವರೆಗೂ ಯಾವುದೇ ಪರಿಹಾರ ಬಂದಿಲ್ಲ. ನಮಗೆ ಪರಿಹಾರ ಕೊಡಿ ನಾವೇ ಈ ಜಾಗವನ್ನು ತೆರವುಗೊಳಿಸುತ್ತೇವೆ ಎಂದು ಗ್ರಾಮಸ್ಥರು ಪಟ್ಟುಹಿಡಿದರು.

ಹೆದ್ದಾರಿಯಲ್ಲಿರುವ 20 ಮನೆಗಳ ಪೈಕಿ ಕೇವಲ ಒಂದು ಮನೆಗೆ ಮಾತ್ರ ಈಗಾಗಲೇ ಪರಿಹಾರ ಸಂದಾಯವಾಗಿದ್ದು, ಉಳಿದ ಮನೆಗಳಿಗೆ ಹಾಗೂ ಜಾಗದ ಮಾಲೀಕರಿಗೆ ಪರಿಹಾರದ ಹಣ ಬಂದಿಲ್ಲ. ಕಾರಣ ಜಾಗ ತೆರವುಗೊಳಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನಾಧಿಕಾರಿ ಜಗದೀಶ್ ಮಾತನಾಡಿ, ಜಾಗದ ಮಾಲೀಕರು ತಮಗೆ ತಿಳಿಸಿರುವ ದಾಖಲೆಗಳನ್ನು ತಂದು ಆದಷ್ಟು ಬೇಗ ಪರಿಹಾರದ ಹಣ ಪಡೆದುಕೊಳ್ಳಬೇಕು ಎಂದು ಕೋರಿದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ತಮಗೆ 15ರಿಂದ 20 ದಿನ ಸಮಯ ಬೇಕು. ಆಗ ನಾವು ಬೇರೆ ಬಾಡಿಗೆ ಮನೆ ಹುಡುಕಿಕೊಂಡು ಜಾಗ ತೆರವುಗೊಳಿಸುತ್ತೇವೆ ಎಂದು ತಿಳಿಸಿದರು. ಅದಕ್ಕೊಪ್ಪಿದ ಅಧಿಕಾರಿಗಳು ಸಮಯ ನೀಡಿ ಅಲ್ಲಿಂದ ವಾಪಸ್ಸಾದರು.

ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಪವನ್‌ಕುಮಾರ್, ಡಿವೈಎಸ್‌ಪಿ ವಿನಾಯಕ ಶಟಗೇರಿ, ಪೊಲೀಸ್ ಸಿಬ್ಬಂದಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು. -------------------------------

2019ರಲ್ಲಿಯೇ ಇಲ್ಲಿರುವ ಮನೆಗಳನ್ನು ವಶಪಡಿಸಿಕೊಳ್ಳಲು ನೋಟೀಸ್ ನೀಡಲಾಗಿತ್ತು. ಜಮೀನು ಮತ್ತು ಮನೆಗಳಿಗೆ ಪರಿಹಾರವನ್ನೂ ನಿದಿಪಡಿಸಲಾಗಿತ್ತು. ಇವರಿಗೆ ಪರಿಹಾರದ ಹಣ ನೀಡುವಷ್ಟರಲ್ಲಿ ಒಬ್ಬರು ಕೋರ್ಟ್‌ಗೆ ಹೋಗಿ ಪರಿಹಾರ ಹಣ ನೀಡದಿರಲು ಸ್ಟೇ ತಂದಿದ್ದರಿಂದ ಪರಿಹಾರ ದೊರಕಲಿಲ್ಲ. ಆಗ ಪ್ರಾಧಿಕಾರವು ಪರಿಹಾರಕ್ಕೆ ಮೀಸಲಿದ್ದ 2 ಕೋಟಿ 22 ಲಕ್ಷ ರು. ಹಣವನ್ನು ಸಿವಿಲ್ ಕೋರ್ಟ್‌ಗೆ ಡೆಪಾಸಿಟ್ ಮಾಡಿ ವ್ಯಾಜ್ಯ ಇತ್ಯರ್ಥವಾದ ನಂತರ ಜಾಗದ ಮಾಲೀಕರಿಗೆ ನೀಡಲು ಕೋರ ಲಾಗಿದೆ. ಜಾಗದ ಮಾಲೀಕರುಗಳು ತಮ್ಮ ಮಾಲೀಕತ್ವ ರುಜುವಾತು ಮಾಡುವ ದಾಖಲೆಗಳನ್ನು ನೀಡಿದರೆ ಕೂಡಲೆ ಹಣ ನೀಡಲಾಗುವುದು.

- ಭೂಸ್ವಾಧೀನಾಧಿಕಾರಿ

--------------------- 2021ರಲ್ಲಿ ನಮಗೆ ನೋಟೀಸ್ ಕೊಡಲಾಯಿತು ಅದಕ್ಕೂ ಮುಂಚೆ ಒಬ್ಬರಿಗೆ ಪರಿಹಾರ ೩೩ ಲಕ್ಷ ನೀಡಲಾಗಿದೆ. ಅಷ್ಟರಲ್ಲಿ ಭಾಗ್ಯಲಕ್ಷ್ಮಿ ಮತ್ತು ಮಂಜುನಾಥ್ ಎಂಬುವವರು ಈ ಜಾಗದ ಮಾಲೀಕರು ನಾವು. ನಮಗೆ ಪರಿಹಾರ ನೀಡಿ ಎಂದು ಸುಳ್ಳು ಕೇಸ್ ದಾಖಲಿಸಿದ್ದರಿಂದ ನಮಗೆಲ್ಲಾ ತೊಂದರೆಯಾಯಿತು. ಅವರು ಜಾಗದ ಮಾಲೀಕರೇ ಅಲ್ಲ. ಜಾಗದ ಯಾವುದೇ ದಾಖಲೆಗಳು ಇಲ್ಲ. ನಮ್ಮ ಪರಿಹಾರ ತಡೆಯಲು ಅವರು ಕೇಸ್ ಹಾಕಿದ್ದಾರೆ. ಈಗ ನಮ್ಮ ದಾಖಲೆಗಳನ್ನು ಒದಗಿಸುತ್ತಿದ್ದೇವೆ.

- ಕಾಂತರಾಜು, ಮನೆ ಮಾಲೀಕ,