ಸಾರಾಂಶ
-ಆರೋಪಿ ಶಿವು ಬಂಡಯ್ಯ ಸ್ವಾಮಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ಬಳಿಕ ಪ್ರಕರಣ ಬೆಳಕಿಗೆ
--------ಕನ್ನಡಪ್ರಭ ವಾರ್ತೆ ರಾಯಚೂರು
ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿ ಮನೆ ಮಾಲಕಿಯನ್ನ ಹತ್ಯೆ ಮಾಡಿ, ಅಂತ್ಯ ಸಂಸ್ಕಾರ ಮಾಡಿದ ಆರೋಪಿಯು ಕೊನೆಗೆ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಸ್ಥಳೀಯ ಉದಯನಗರ ನಿವಾಸಿ ಶೋಭಾ ಪಾಟೀಲ್ (63) ಕೊಲೆಯಾದ ಮನೆ ಮಾಲಿಕಿಯಾಗಿದ್ದು, ಆರೋಪಿ ಶಿವು ಬಂಡಯ್ಯ ಸ್ವಾಮಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕೊಲೆಯಾದ ಶೋಭಾ ಪಾಟೀಲ್ ಅವರು ಉದಯನಗರದಲ್ಲಿರುವ ತಮ್ಮ ಮನೆಯನ್ನು ಶಿವು ಬಂಡಯ್ಯಸ್ವಾಮಿ ಎಂಬುವವರಿಗೆ ಮನೆ ಬಾಡಿಗೆ ನೀಡಿದ್ದರು. ಮನೆಯನ್ನು ಬಿಡುವಂತೆ ಮನೆ ಮಾಲೀಕರು ಕಳೆದ ಕೆಲ ದಿನಗಳಿಂದ ಆರೋಪಿ ಶಿವು ಬಂಡಯ್ಯಸ್ವಾಮಿಗೆ ತಿಳಿಸುತ್ತಾ ಬಂದಿದ್ದರು. ಅದರಂತೆಯೇ ಠೇವಣಿ ಮರಳಿಸುವ ವಿಚಾರದಲ್ಲಿ ಇಬ್ಬರ ಮಧ್ಯೆ ವಾಗ್ವಾದವು ಸಹ ನಡೆದಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿರಬಹುದು ಎನ್ನಲಾಗುತ್ತಿದೆ. ಕಳೆದ ಸೆ.21 ರಂದು ಆರೋಪಿ ಮಾಲೀಕರ ಮನೆಗೆ ಹೋಗಿ ಶೋಭಾ ಪಾಟೀಲ್ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ, ಕಿವಿಯೋಲೆ ಹಾಗೂ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ. ಶೋಭಾರಿಗೆ ಓರ್ವ ಪುತ್ರನಿದ್ದು, ಅವರು ಊರಲ್ಲಿ ಇರಲಿಲ್ಲ. ತಾಯಿಗೆ ಫೋನ್ ಮಾಡಿದರೆ ಅದು ಸ್ವಿಚ್ ಆಫ್ ಅಂತ ಬರುತ್ತಿತ್ತು. ಶೋಭಾ ಅವರ ಮಗ, ಶಿವು ಬಂಡಯ್ಯಸ್ವಾಮಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಮನೆಗೆ ಬಂದು ಗಮನಿಸಿದಂತೆ ಮಾಡಿ, ಮನೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಪುತ್ರನಿಗೆ ತಿಳಿಸಿದ್ದನು.ಪೌರೋಹಿತ್ಯ ಮಾಡುತ್ತಿದ್ದ ಶಿವುಬಂಡಯ್ಯ ಸ್ವಾಮಿಯೇ ಮಹಿಳೆಯ ಸಂಸ್ಕಾರದ ಕಾರ್ಯಗಳೆಲ್ಲವನ್ನೂ ಮಾಡಿದ್ದನು. ತಾಯಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಅದರಿಂದಲೇ ಮೃತಪಟ್ಟಿರಬಹುದು ಎಂದು ಮಗ ಚೆನ್ನಬಸವ ಪಾಟೀಲ್ ನಂಬಿದ್ದರು. ಅಂತ್ಯಕ್ರಿಯೆ ನಂತರ ತಾಯಿಯ ಚಿನ್ನದ ಸರ, ಕಿವಿಯೋಲೆ, ಮೊಬೈಲ್ ಮನೆಯಲ್ಲಿ ಶೋಧಿಸಿದರೂ ದೊರಕದಿದ್ದಾಗ, ಅನುಮಾನಗೊಂಡ ಮಗ ಪೊಲೀಸರ ಮೊರೆ ಹೋಗಿದ್ದಾನೆ. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಪ್ರಕರಣ ಬಯಲಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪಶ್ಚಿಮ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
------------------27ಕೆಪಿಆರ್‌ಸಿಆರ್ 04: ಶೋಭಾ ಪಾಟೀಲ್
27ಕೆಪಿಆರ್‌ಸಿಆರ್ 05: ಶಿವು ಬಂಡಯ್ಯಸ್ವಾಮಿ