ಪತ್ನಿಯ ಕೊಂದು ಠಾಣೆಯಲ್ಲಿ ನಾಪತ್ತೆ ದೂರು ಕೊಟ್ಟ ಪತಿ!

| Published : May 05 2024, 02:09 AM IST / Updated: May 05 2024, 01:12 PM IST

ಸಾರಾಂಶ

ದೊಡ್ಡಬಳ್ಳಾಪುರ: ಪತ್ನಿ ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದ ಪತಿಯೇ ಪೊಲೀಸರ ಅತಿಥಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ: ಪತ್ನಿ ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದ ಪತಿಯೇ ಪೊಲೀಸರ ಅತಿಥಿಯಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಅನಾಥ ಯುವತಿಗೆ ಬಾಳು ಕೊಡುವುದಾಗಿ ಹೇಳಿ ಮದುವೆಯಾಗಿದ್ದ ವ್ಯಕ್ತಿ, 2 ವರ್ಷ ದಾಂಪತ್ಯ ನಡೆಸಿದ್ದ. ಆದರೆ ಅದೊಂದು ದಿನ ಗಾರ್ಮೆಂಟ್ಸ್ ಕೆಲಸಕ್ಕೆ ಹೋದ ತನ್ನ ಪತ್ನಿ ವಾಪಸ್ ಬಂದಿಲ್ಲ. ಕಾಣೆಯಾಗಿದ್ದಾಳೆ, ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ.

ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿ 19 ವರ್ಷದ ವೀಣಾ, ಏಪ್ರಿಲ್ 22ರಂದು ಸೋಮವಾರ ನಾಪತ್ತೆಯಾಗಿದ್ದರು. ಗಾಬರಿಗೊಂಡ ಆಕೆಯ ಗಂಡ ರವಿ ಹೆಂಡತಿ ಕಾಣೆಯಾದ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅದಾದ ಒಂದು ವಾರಕ್ಕೆ ತೂಬಗೆರೆಯ ನಾರಸಿಂಹನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಫಾರೆಸ್ಟ್ ಗಾರ್ಡ್‌ಗೆ ಸುಟ್ಟು ಕರಕಲಾಗಿರುವ ಅಪರಿಚಿತ ಶವ ಕಣ್ಣಿಗೆ ಬಿದ್ದಿತ್ತು.

ಅಪರಿಚಿತ ಶವದ ಸುತ್ತ...:

ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕಾಡಿನಲ್ಲಿ ಪತ್ತೆಯಾದ ಅಪರಿಚಿತ ಶವದ ತನಿಖೆ ಆರಂಭಿಸಿದ ಪೊಲೀಸರು, ಇತ್ತೀಚೆಗೆ ನಾಪತ್ತೆಯಾದ ಪ್ರಕರಣಗಳನ್ನ ಕೈಗೆತ್ತಿಕೊಂಡರು. ಈ ವೇಳೆ ಏಪ್ರಿಲ್ 22ರಂದು ನಾಪತ್ತೆಯಾಗಿದ್ದ ವೀಣಾ ಅವರ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಆಕೆಯ ಸಂಬಂಧಿಕರಿಗೆ ಕರೆ ಮಾಡಿ ಶವದ ಗುರುತು ಪತ್ತೆ ಮಾಡಲು ಹೇಳಿದರು. ಶವದ ಕಾಲಿನಲ್ಲಿದ್ದ ಕಾಲ್ಗೆಜ್ಜೆ, ಅರೆಬೆಂದ ಚಪ್ಪಲಿ ನೋಡಿದ ಸಂಬಂಧಿಕರು ಇದು ವೀಣಾ ಶವ ಎಂದು ಗುರುತು ಹಿಡಿದರು. ಆಗ ನಾರಸಿಂಹನಹಳ್ಳಿ ಅರಣ್ಯ ಪ್ರದೇಶದಲ್ಲಿ ದೊರೆತದ್ದು ವೀಣಾಳ ಮೃತದೇಹ ಎಂದು ದೃಢಪಟ್ಟಿದೆ.

ವಿಚಾರಣೆ ವೇಳೆ ಸತ್ಯಾಂಶ ಬಯಲು:

ಈಕೆಯನ್ನು ಕೊಂದವರ ತನಿಖೆ ಕೈಗೆತ್ತಿಕೊಂಡ ಪೊಲೀಸರು, ವೀಣಾಳ ಅತ್ತೆ, ಮಾವ, ಆಕೆಯ ಗಂಡ ಮತ್ತು ಸಂಬಂಧಿಕರ ವಿಚಾರಣೆ ನಡೆಸಿದಾಗ ಆಕೆಯ ಗಂಡನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿ ರವಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಹೆಂಡತಿಯನ್ನು ಕೊಂದಿದ್ದು ನಾನೇ ಎಂದು ಆತ ಬಾಯಿ ಬಿಟ್ಟಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಅನೈತಿಕ ಸಂಬಂಧ ಕೊಲೆಗೆ ಕಾರಣ:

ಆರೋಪಿ ರವಿ ಪಕ್ಕದ ಮನೆಯ ಮಹಿಳೆಯೊಬ್ಬರ ಜೊತೆ ಹೊಂದಿದ್ದ ಅನೈತಿಕ ಸಂಬಂಧ ಕೊಲೆಗೆ ಕಾರಣ ಎನ್ನಲಾಗಿದೆ. ಅನೈತಿಕ ಸಂಬಂಧದ ವಿಚಾರ ವೀಣಾಗೆ ತಿಳಿದಿದ್ದು, ಈ ಬಗ್ಗೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು. ಮಗನಿಗೆ ಬುದ್ದಿವಾದ ಹೇಳುವಲ್ಲಿ ಆತನ ಮನೆಯವರೂ ವಿಫಲರಾಗಿದ್ದರು ಎನ್ನಲಾಗಿದೆ.

ಫ್ಯಾಕ್ಟರಿಯಿಂದ ಹೆಂಡತಿಯನ್ನು ತಾನೇ ಕರೆದೊಯ್ದಿದ್ದ ಆರೋಪಿ!

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಹೆಂಡತಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಆತ ಏ.22ರಂದು ಆಕೆ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಗೆ ಹೋಗಿ, ಸಂಜೆ ಆಕೆಯನ್ನು ಜೊತೆಗೆ ಕರೆದುಕೊಂಡು ಹೋಗಿ ನಾರಸಿಂಹನಹಳ್ಳಿ ಬಳಿ ಕರೆದೊಯ್ದು ಕೊಲೆ ಮಾಡಿದ್ದಾನೆ. ಶವದ ಗುರುತು ಸಿಗಬಾರದೆಂದು ಪೆಟ್ರೋಲ್‌ ಸುರಿದು ಸುಟ್ಟಿದ್ದಾನೆ. ಬಳಿಕ ರಾತ್ರಿ ಮನೆಗೆ ಬಂದು, ತನಗೇನೂ ಗೊತ್ತಿಲ್ಲ ಎಂಬಂತೆ, ಅಕ್ಕಪಕ್ಕದ ಮನೆಯವರ ಬಳಿ ತನ್ನ ಹೆಂಡತಿಯನ್ನು ಹುಡುಕುವ ನಾಟಕ ಮಾಡಿದ್ದಾನೆ. ರಾತ್ರಿ 10 ಗಂಟೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ಹೆಂಡತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾನೆ. ಮರು ದಿನ ಎಂದಿನಂತೆ ತನ್ನ ದೈನಂದಿನ ಕಾರ್ಯಗಳಲ್ಲಿ ತೊಡಗಿದ್ದಾನೆ.