ಶಾಂತಿ ಸ್ಥಾಪನೆಗೆ ಮಹಾವೀರರ ಆದರ್ಶ ಅಗತ್ಯ

| Published : Apr 22 2024, 02:00 AM IST

ಸಾರಾಂಶ

ಜಗತ್ತಿಗೆ ಜ್ಞಾನದ ಬೆಳಕು ಸದ್ವಿಚಾರ ಬೋಧಿಸಲೆಂದೇ ಮಹಾವೀರರ ಜನನವಾಗಿದೆ. ಅಹಿಂಸೆ ಧರ್ಮದ ಮೂಲ ತಿರುಳು

ಚಿಕ್ಕಮಗಳೂರು: ಜಗತ್ತಿನಲ್ಲಿ ಶಾಂತಿ ನೆಲೆಸಲು ಮಹಾವೀರರ ಬೋಧನೆ ಮತ್ತು ಮಾರ್ಗದರ್ಶನ ಅಗತ್ಯ ಎಂದು ತೇರಾಪಂಥ್ ಸಭಾ ಅಧ್ಯಕ್ಷರಾದ ತಾರಾಚಂದ್‌ ಜೈನ್ ಹೇಳಿದರು. ನಗರದ ತೇರಾಪಂಥ್ ಭವನದಲ್ಲಿ ಶ್ರೀ ಜೈನ್ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಾವೀರ್‌ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಜಗತ್ತಿಗೆ ಜ್ಞಾನದ ಬೆಳಕು ಸದ್ವಿಚಾರ ಬೋಧಿಸಲೆಂದೇ ಮಹಾವೀರರ ಜನನವಾಗಿದೆ. ಅಹಿಂಸೆ ಧರ್ಮದ ಮೂಲ ತಿರುಳು ಎಂದು ಹೇಳಿದರು. ನಾವುಗಳೆಲ್ಲರೂ ಅವರ ಮಾರ್ಗದರ್ಶನದಲ್ಲಿಯೇ ನಡೆಯಬೇಕು ಎಂದರು. ಜೈನ್ ಮೂರ್ತಿ ಪೂಜಾ ಸಂಘದ ಕಾರ್ಯದರ್ಶಿ ಸಂಜಯ್‌ ಜೈನ್ ಮಾತನಾಡಿ, ಅಹಿಂಸೆ, ಸತ್ಯ, ಧರ್ಮ ಮಹಾವೀರರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿದ್ದು ಮಾನವರು ದುಃಖ, ಹಿಂಸೆಗೆ ಉತ್ತರ ಹುಡುಕಬೇಕಾದರೆ ಏನು ಮಾಡಬೇಕು ಎನ್ನುವ ಸಂದೇಶ ಸಾರಿದ್ದರು. ಇಂದಿನ ಯುವ ಪೀಳಿಗೆಯು ಮಹಾವೀರರ ತತ್ವ, ಆದರ್ಶ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆ ಮಾಡಬೇಕು ಎಂದು ಹೇಳಿದರು.

ನಗರಸಭೆ ಸದಸ್ಯ ವಿಫುಲ್‌ಕುಮಾರ್‌ ಜೈನ್ ಮಾತನಾಡಿದರು. ಈ ವೇಳೆ ಜೈನ್‌ ಯುವ ಒಕ್ಕೂಟದ ಹಿತೇಶ್‌ ಗಾದಿಯಾ, ಜೈನ್ ಮಹಿಳಾ ಸಂಘದ ಅಧ್ಯಕ್ಷೆ ಸಪ್ನಾ ಜಾಜೇದ್, ಜೈನ್ ಸಂಘದ ಕಾರ್ಯದರ್ಶಿ ರಮೇಶ್‌ ಖಿವೇಸರ್, ಕಿಶೋರ್‌ ಖಿವೇಸರ್, ತೇರಾಪಂಥ್ ಸಂಘದ ಕಾರ್ಯದರ್ಶಿ ಮಹೇಂದ್ರ ಸಿಯಲ್ ಉಪಸ್ಥಿತರಿದ್ದರು.