ಬಸವೇಶ್ವರ ಆದರ್ಶಗಳ ಪಾಲನೆ ಅಗತ್ಯ: ಚಂದ್ರಶೇಖರ್ ನಾಯ್ಕ್

| Published : May 11 2024, 01:30 AM IST / Updated: May 11 2024, 01:31 AM IST

ಸಾರಾಂಶ

ಬಸವಣ್ಣ ಮಹಾನ್ ಕವಿ, ಸಮಾಜ ಸುಧಾರಕ, ದಾರ್ಶನಿಕರಾಗಿ ಹೊರಹೊಮ್ಮಿದವರು. ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ. ಜೀವನದಲ್ಲಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಜಗಳೂರಲ್ಲಿ ಹೇಳಿದ್ದಾರೆ.

- ಜಗಳೂರಿನಲ್ಲಿ ಬಸವ ಜಯಂತಿ, ಹೇಮರೆಡ್ಡಿ ಮಲ್ಲಮ್ಮ ಜಯಂತಿ - - -

ಕನ್ನಡಪ್ರಭ ವಾರ್ತೆ ಜಗಳೂರು

ಬಸವಣ್ಣ ಮಹಾನ್ ಕವಿ, ಸಮಾಜ ಸುಧಾರಕ, ದಾರ್ಶನಿಕರಾಗಿ ಹೊರಹೊಮ್ಮಿದವರು. ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ. ಜೀವನದಲ್ಲಿ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಶ್ರೀ ಬಸವೇಶ್ವರ ಜಯಂತಿ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜ್ಜಳನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವಣ್ಣ ಅನುಭವ ಮಂಟಪ ಪ್ರಾರಂಭಿಸಿದರು. ಇದು ಎಲ್ಲ ವರ್ಗದ ಜನರಿಗೆ ಜೀವನದ ಆಧ್ಯಾತ್ಮಿಕ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಸಾಮಾನ್ಯ ಕೇಂದ್ರವಾಯಿತು. ಬಸವೇಶ್ವರರ ಸಾಕ್ಷರತಾ ಕೃತಿಗಳು ವಚನ ಸಾಹಿತ್ಯವನ್ನು ಒಳಗೊಂಡಿವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಲಿಂಗಾಯತ ಸಮಾಜದವರು ಈ ಜಯಂತಿಯನ್ನು ಆಚರಿಸುತ್ತಿದ್ದಾರೆ ಎಂದರು.

ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ನಿರ್ಧರಿಸಿದೆ. ಮೇ ೧೦ರಂದು ಇದೇ ಮೊದಲ ಬಾರಿಗೆ ಹೇಮರಡ್ಡಿ ಮಲ್ಲಮ್ಮ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವಾಗಿ ಆರಾಧಿಸಿ, ಅವರನ್ನು ಸಾಕ್ಷಾತ್ಕರಿಸಿಕೊಂಡವರು ಹೇಮರಡ್ಡಿ ಮಲ್ಲಮ್ಮ. ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ, ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದರು. ತಾನು ಎಷ್ಟೇ ಕಷ್ಟ ಅನುಭವಿಸಿದರೂ ಅದಕ್ಕೆ ನೊಂದುಕೊಳ್ಳದೇ, ಮಲ್ಲಿಕಾರ್ಜುನನನ್ನು ಪೂಜಿಸಿ, ಧ್ಯಾನಿಸಿ ಮುಕ್ತಿ ಪಡೆದರು ಎಂದು ತಿಳಿಸಿದರು.

ಅಖಿಲ ವೀರಶೈವ ಸಮಾಜದ ಮುಖಂಡ ಶಿವನಗೌಡ ಮಾತನಾಡಿ, ಭಗವಾನ್ ಬಸವಣ್ಣ ಲಿಂಗಾಯತ ಧರ್ಮದ ಸಂಸ್ಥಾಪಕ ಮತ್ತು ಅವರ ಜನ್ಮದಿನವನ್ನು ಹೊಸ ಯುಗದ ಆರಂಭವೆಂದು ಪರಿಗಣಿಸಲಾಗಿದೆ. ಹಲವಾರು ಸುಧಾರಣೆಗಳ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ತಂದರು. ಜಾತಿ, ಬಣ್ಣ, ಆರ್ಥಿಕ ಸ್ಥಿತಿ ಇದ್ದರೂ ಎಲ್ಲರೂ ಸಮಾನರು ಎಂದು ಹೇಳಿದ ಬಸವಣ್ಣನವರು ಭಕ್ತಿ ಮಾರ್ಗವನ್ನು ಬೆಂಬಲಿಸಬೇಕು ಎಂದು ಹೇಳಿದರು.

ಸಂಜೆ 5 ಗಂಟೆ ಹೊತ್ತಿಗೆ ಪಟ್ಟಣದಲ್ಲಿ ಬಸವೇಶ್ವರ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧಿ ವೃತ್ತದಿಂದ ಪಾದಗಟ್ಟೆಯವರೆಗೂ ಬಸವೇಶ್ವರ ರಥೋತ್ಸವ ನೆರವೇರಿತು ನೂರಾರು ಭಕ್ತರು ಪಾಲ್ಗೊಂಡಿದ್ದರು.

ಉಪ ತಹಸೀಲ್ದಾರ್ ರೂಪ, ಸಿಡಿಪಿಒ ಅಧಿಕಾರಿ ಬೀರೇಂದ್ರ ಕುಮಾರ್, ಆರ್‌.ಐ. ಧನಂಜಯ್, ಕೀರ್ತಿ ಕುಮಾರ್, ಕಾಂತರಾಜ್, ಸಮಾಜದ ಮುಖಂಡರಾದ ಎಂ.ಎಸ್. ಪಾಟೀಲ್, ರಂಗನಾಥ್ ರೆಡ್ಡಿ, ಕುಬೇರಪ್ಪ ಸೇರಿದಂತೆ ಕಚೇರಿ ಸಿಬ್ಬಂದಿ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

- - - -10ಜೆ.ಜಿ.ಎಲ್1:

ಜಗಳೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಶ್ರೀ ಬಸವೇಶ್ವರ ಜಯಂತಿ, ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ನಡೆಯಿತು.