ಸಾರಾಂಶ
ರಾಮನಗರ: ಬಲಿಜ ಸಮುದಾಯದಲ್ಲಿ ಹುಟ್ಟಿದ ಸಮಾಜ ಸುಧಾರಕರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ ಕರೆ ನೀಡಿದರು.
ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಶನಿವಾರ ರಾಮನಗರ ಜಿಲ್ಲಾ ಬಲಿಜ ಸಂಘ ಉದ್ಘಾಟನೆ, ಸಾವಿತ್ರಿಬಾಯಿ ಫುಲೆ ಜಯಂತಿ, ಸನ್ಮಾನ ಹಾಗೂ 2025ರ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ನಮ್ಮ ಜನಾಂಗದ ಕಾಲಕ್ಞಾನ ಬರೆದ ಶ್ರೀ ಕೈವಾರ ತಾತಯ್ಯ, ಶ್ರೀ ಕೃಷ್ಣ ದೇವರಾಯ, ಅಕ್ಷರದಾತೆ ಸಾವಿತ್ರಿಬಾಯಿ ಪುಲೆ, ಜ್ಯೋತಿಬಾಪುಲೆ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಸ್ಮರಣೀಯ. ಅವರೆಲ್ಲರು ನಮ್ಮ ಸಮುದಾಯಕ್ಕಷ್ಟೇ ಸೀಮಿತವಾಗಿರದೆ, ಶೋಷಿತರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದರು. ಈ ದಾರ್ಶನಿಕರ ಹೋರಾಟ, ತತ್ವಾದರ್ಶಗಳು ನಮಗೆಲ್ಲ ಆದರ್ಶವಾಗಿವೆ ಎಂದು ಹೇಳಿದರು.
ಸಮುದಾಯದಲ್ಲಿರುವ ಹಲವು ಉಪ ಪಂಗಡಗಳನ್ನು ಒಟ್ಟುಗೂಡಿಸಿ ಸಮನ್ವಯತೆಯಿಂದ ಸಂಘಟನೆ ಮಾಡಿದಾಗ ಮಾತ್ರ ವಿಶ್ವಾಸಾರ್ಹ ಸಂಘಟನೆಯಾಗಿ ಜಿಲ್ಲೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಅಷ್ಟೆ ಅಲ್ಲದೆ ನಿಮ್ಮಗಳ ಮೇಲೆ ಸಮುದಾಯದ ಜನರಿಗೆ ನಿಮ್ಮ ಕೆಲಸಗಳ ಮೇಲೆ ಹೆಚ್ಚು ವಿಶ್ವಾಸ ಮೂಡುತ್ತದೆ ಎಂದು ಶೇಷಾದ್ರಿ ಹೇಳಿದರು.ಜಿಲ್ಲಾ ಬಲಿಜ ಸಂಘದ ಕಾರ್ಯಾಧ್ಯಕ್ಷ ಚನ್ನಪಟ್ಟಣದ ಕಿಶೋರ್ ಮಾತನಾಡಿ, ಪ್ರತಿ ತಾಲೂಕಿನಲ್ಲಿ ಸಂಘಟನೆ ಮಾಡಿ ಜಿಲ್ಲಾ ಬಲಿಜ ಸಂಘ ರಚನೆ ಮಾಡಲಾಗಿದ್ದು, ಮೀಸಲಾತಿ, ಶಿಕ್ಷಣ ಕ್ಷೇತ್ರ , ಹಾಸ್ಟೆಲ್ ಸೇರಿದಂತೆ ಸಮುದಾಯದವರಿಗೆ ಸರ್ಕಾರಿ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು. ರಾಮನಗರದ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆ ಕೈವಾರ ತಾತಯ್ಯ ಹೆಸರನ್ನಿಡಬೇಕೆಂದು ಸಂಘದ ಪರವಾಗಿ ನಗರಸಭಾಧ್ಯಕ್ಷ ಶಶಿ ಅವರಲ್ಲಿ ಮನವಿ ಮಾಡಿದರು.
ಗಣೇಶ್ ಜ್ಯುವಲರ್ಸ್ ಮಾಲೀಕ ಲಕ್ಷ್ಮಣ್ ಮಾತನಾಡಿ, ನಮ್ಮ ಜನಾಂಗದವರಾದ ಕೃಷ್ಣ ದೇವರಾಯನ ಆಡಳಿತದಲ್ಲಿ ರಸ್ತೆಯಲ್ಲಿ ಚಿನ್ನಬೆಳ್ಳಿ ಮಾರಾಟ ಮಾಡಿದರು ಎಂಬ ಹಿರಿಮೆ ಇರುವ ನಮ್ಮ ಜನಾಂಗ ಇನ್ನೂ ಸಂಘಟನೆ ಆಗಬೇಕಿದೆ. ಹಾಗಾಗಿ ಎಲ್ಲರೂ ಸೇವಾ ಮನೋಭಾವದಿಂದ ಒಗ್ಗಟ್ಟಿನ ಪ್ರದರ್ಶನ ಮಾಡೋಣ ಎಂದು ಕಿವಿಮಾತು ಹೇಳಿದರು.ನಾಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್ ಮಾತನಾಡಿ, ಬಲಿಜ ಸಮುದಾಯ ಶ್ರೇಷ್ಠ ಸಮುದಾಯಕ್ಕೆ ಸೇರಿದ್ದರೂ ಸಂಘಟನೆ ಕೊರತೆಯಿಂದ ಸಾಕಷ್ಟು ಹಿಂದುಳಿದಿದೆ. ಬಲಿಜ ಸಮಾಜ ಇದುವರೆಗೂ ಪೂರ್ಣಪ್ರಮಾಣದಲ್ಲಿ ಸಂಘಟಿತವಾಗಿಲ್ಲ. ಸಂಘಟಿತವಾದರೆ ಆರ್ಥಿಕ ಹಾಗೂ ಶೈಕ್ಷಣಿಕ, ರಾಜಕೀಯವಾಗಿ ಬಲಿಷ್ಠವಾಗಬಹುದು. ಸಮಾಜದ ಜನರನ್ನು ಮೇಲೆತ್ತಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಇದೆ ವೇಳೆ ಸಮುದಾಯದ ಹಿರಿಯರಾದ ಹಾರೋಹಳ್ಳಿ ವೆಂಕಟಶೆಟ್ಟಿ, ಮಾಗಡಿ ರಂಗಣ್ಣ, ರಾಮನಗರದ ನರಸಿಂಹಮೂರ್ತಿ, ಸಿಎನ್‌ಆರ್ ವೆಂಕಟೇಶ್ ಹಾಗೂ ಕೃಷ್ಣ ಮೂರ್ತಿ ಅವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವೇದಿಕೆ ಗಣ್ಯರು 2025ರ ದಿನದರ್ಶಿಕೆ ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಸಮಗ್ರ ಬಲಿಜ ವೇದಿಕೆ ರಾಜ್ಯಾಧ್ಯಕ್ಷ ಮುನ್ನಿಕೃಷ್ಣ, ರಾಮನಗರ ಬಲಿಜ ಸಂಘದ ಜಿಲ್ಲಾಧ್ಯಕ್ಷ ಆರ್.ವಿ.ಸುರೇಶ್, ರಾಮನಗರ ತಾಲೂಕು ಕೈವಾರ ತಾತಯ್ಯ ಬಲಜಿಗ ಸಂಘದ ಅಧ್ಯಕ್ಷ ಹನುಮಶೆಟ್ಟಿ, ಕನಕಪುರ ತಾಲೂಕು ಅಧ್ಯಕ್ಷ ಬಾಲರಾಜು, ಹಾರೋಹಳ್ಳಿ ತಾಲೂಕು ಅಧ್ಯಕ್ಷ ವೆಂಕಟಶೆಟ್ಟಿ ಮುಖಂಡರಾದ ಕೃಷ್ಣ ಮೂರ್ತಿ, ಪದ್ಮನಾಭ, ರಾಮಚಂದ್ರಯ್ಯ, ಕಿಟ್ಟಣ್ಣ, ಮಾವಿನಸಸಿ ವೆಂಕಟೇಶ್, ಸುಧಾರಾಣಿ ಕಲಾಪ್ರಿಯ, ಮಾಲತಿ, ಜಾನ್ಸಿ, ಪುಷ್ಪಾ, ಮಂಜು, ಸುಹಾಸ್, ಅನಂತ್, ಶಿವಕುಮಾರ್, ಅಜಯ್‌ಬಾಬು ಮತ್ತಿತರರು ಉಪಸ್ಥಿತರಿದ್ದರು.
11ಕೆಆರ್ ಎಂಎನ್ 2.ಜೆಪಿಜಿರಾಮನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ರಾಮನಗರ ಜಿಲ್ಲಾ ಬಲಿಜ ಸಂಘ ಉದ್ಘಾಟನೆ, ಸಾವಿತ್ರಿಬಾಯಿ ಫುಲೆ ಜಯಂತಿ, ಸನ್ಮಾನ ಹಾಗೂ 2025ರ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ನಗರಸಭೆ ನೂತನ ಅಧ್ಯಕ್ಷ ಕೆ.ಶೇಷಾದ್ರಿ ಅವರನ್ನು ಸನ್ಮಾನಿಸಲಾಯಿತು.