ಶ್ರೀರಾಮನ ಆದರ್ಶ, ನಿಷ್ಠುರ ನೀತಿ, ಭರತನ ಭ್ರಾತೃಪ್ರೇಮ, ಭಕ್ತಿ ಮತ್ತು ಸೌಹಾರ್ದದ ನಡವಳಿಕೆ ಜಗತ್ತಿಗೆ ಮಾದರಿಯಾಗಿವೆ. ಕವಿ ಅಸೂರಿ ಕೆ. ರಾಮಸ್ವಾಮಿ ಅಯ್ಯಂಗಾರ್‌ ಅವರು ಭರತನನ್ನೇ ನಾಯಕನನ್ನಾಗಿ ಮಾಡಿಕೊಂಡು ರಚಿಸಿರುವ ಭರತಭಕ್ತಿಕಾವ್ಯ ಸಹೋದರ ಪ್ರೀತಿ, ತ್ಯಾಗ ಹಾಗೂ ಭಕ್ತಿಯ ಉನ್ನತ ಮೌಲ್ಯಗಳನ್ನು ಸಾರುತ್ತದೆ ಎಂದು ಖ್ಯಾತ ವ್ಯಾಖ್ಯಾತೃ ವಿದುಷಿ ಶಾಂತಾ ನಾಗಮಂಗಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಶ್ರೀರಾಮನ ಆದರ್ಶ, ನಿಷ್ಠುರ ನೀತಿ, ಭರತನ ಭ್ರಾತೃಪ್ರೇಮ, ಭಕ್ತಿ ಮತ್ತು ಸೌಹಾರ್ದದ ನಡವಳಿಕೆ ಜಗತ್ತಿಗೆ ಮಾದರಿಯಾಗಿವೆ. ಕವಿ ಅಸೂರಿ ಕೆ. ರಾಮಸ್ವಾಮಿ ಅಯ್ಯಂಗಾರ್‌ ಅವರು ಭರತನನ್ನೇ ನಾಯಕನನ್ನಾಗಿ ಮಾಡಿಕೊಂಡು ರಚಿಸಿರುವ ಭರತಭಕ್ತಿಕಾವ್ಯ ಸಹೋದರ ಪ್ರೀತಿ, ತ್ಯಾಗ ಹಾಗೂ ಭಕ್ತಿಯ ಉನ್ನತ ಮೌಲ್ಯಗಳನ್ನು ಸಾರುತ್ತದೆ ಎಂದು ಖ್ಯಾತ ವ್ಯಾಖ್ಯಾತೃ ವಿದುಷಿ ಶಾಂತಾ ನಾಗಮಂಗಲ ತಿಳಿಸಿದರು.

ನಗರದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಘಟಕ ಹಾಗೂ ದೇವಾಲಯದ ಆಡಳಿತ ಮಂಡಳಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೧೧ ದಿನಗಳ ಗಮಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಭರತಭಕ್ತಿಕಾವ್ಯದ ‘ಪಾದುಕಾ ಕಿರೀಟಿ’ ಭಾಗಕ್ಕೆ ವ್ಯಾಖ್ಯಾನ ನೀಡಿದರು. ಭರತನ ಜೀವನವು ಸಹೋದರ ಪ್ರೀತಿ, ತ್ಯಾಗ, ವೈರಾಗ್ಯ ಮತ್ತು ಕರ್ತವ್ಯನಿಷ್ಠೆಗೆ ಅಪೂರ್ವ ಉದಾಹರಣೆಯಾಗಿದೆ. ತಂದೆ ದಶರಥನ ನಿಧನ ಹಾಗೂ ತಾಯಿ ಕೈಕೇಯಿಯಿಂದ ಉಂಟಾದ ಅನಾಹುತವನ್ನು ತಿಳಿದ ಭರತ, ಅದರಿಂದ ದುಃಖಿತನಾಗಿ ರಾಮನನ್ನು ಮರಳಿ ಅಯೋಧ್ಯೆಗೆ ಕರೆತರಲು ಅರಣ್ಯಕ್ಕೆ ತೆರಳುತ್ತಾನೆ. ಆದರೆ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ತೆರಳಿದ ಶ್ರೀರಾಮ ಹಿಂದಿರುಗಲು ನಿರಾಕರಿಸಿದಾಗ, ಆತನ ಪಾದುಕೆಗಳನ್ನೇ ಪಡೆದು ಅಯೋಧ್ಯೆಗೆ ಮರಳುತ್ತಾನೆ. ನಂತರ ನಾರುಮಡಿಯನ್ನು ಧರಿಸಿ, ನಂದಿಗ್ರಾಮದಲ್ಲಿ ೧೪ ವರ್ಷಗಳ ಕಾಲ ನೆಲೆಸಿ, ರಾಮನ ಪ್ರತಿನಿಧಿಯಾಗಿ ರಾಜ್ಯದ ಆಡಳಿತವನ್ನು ನಿರ್ವಹಿಸುತ್ತಾನೆ. ಶ್ರೀರಾಮನ ಆಗಮನಕ್ಕಾಗಿ ಕಾದು ತಪಸ್ಸಿನ ಜೀವನ ನಡೆಸಿದ ಭರತನ ತ್ಯಾಗ ಮತ್ತು ಭಕ್ತಿ ಅನುಕರಣೀಯ. ಅಧಿಕಾರದ ಆಸೆಗಿಂತ ಸಹೋದರನ ಮೇಲಿನ ಪ್ರೀತಿ ಹಾಗೂ ಧರ್ಮದ ಪಾಲನೆಗೆ ಆದ್ಯತೆ ನೀಡಿದ ಆತನ ವ್ಯಕ್ತಿತ್ವ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ರಾಮಾಯಣವು ಕೇವಲ ಕಥಾನಕವಲ್ಲ, ಅದು ಸೌಹಾರ್ದ, ಮೌಲ್ಯಯುತ ಜೀವನ, ಕರ್ತವ್ಯ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ಸಾರುವ ಆದಿಕಾವ್ಯವಾಗಿದೆ. ದಶರಥನ ಸಂದಿಗ್ಧತೆ, ಗುರುಗಳು ಮತ್ತು ಪ್ರಜೆಗಳ ಅಸಹಾಯಕತೆ ಹಾಗೂ ಶ್ರೀರಾಮನ ಔದಾರ್ಯ ಇವೆಲ್ಲದರ ನಡುವೆ ಭರತನ ದಿವ್ಯ ಭಕ್ತಿ ವಿಶಿಷ್ಟವಾಗಿ ಎದ್ದು ಕಾಣುತ್ತದೆ. ಇಂತಹ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಸಮಾಜಕ್ಕೂ ಅಗತ್ಯವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷರಾದ ಕರ್ನಾಟಕ ಕಲಾಶ್ರೀ ಗಣೇಶ್ ಉಡುಪ ಅವರು ಕಾವ್ಯದ ಪ್ರತಿಯೊಂದು ಪದ್ಯವನ್ನೂ ರಾಗಭಾವ ಮತ್ತು ಪದಭಾವಗಳ ಸಮನ್ವಯದೊಂದಿಗೆ ಸುಶ್ರಾವ್ಯವಾಗಿ ಗಾಯನ ಮಾಡಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದರು. ಕೀರ್ತಿಶೇಷ ಮಹಾಲಕ್ಷ್ಮಮ್ಮ ಹಾಗೂ ಕೀರ್ತಿಶೇಷ ಎಚ್. ವಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಬೆಂಗಳೂರಿನ ವಿದುಷಿ ಶಾಂತಾ ನಾಗಮಂಗಲ ಮತ್ತು ಡಾ. ಗೋಪಾಲಕೃಷ್ಣಮೂರ್ತಿ ದಂಪತಿಯ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರೋಪದಲ್ಲಿ ಪ್ರಾಯೋಜಕ ದಂಪತಿಯನ್ನು ದೇವಾಲಯದ ಆಡಳಿತ ಮಂಡಳಿ ಹಾಗೂ ಗಮಕ ಕಲಾ ಪರಿಷತ್ತಿನ ಪದಾಧಿಕಾರಿಗಳು ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸಿದರು.

ಆರಂಭದಲ್ಲಿ ಪರಿಷತ್ತಿನ ಜಿಲ್ಲಾ ಘಟಕದ ಉಪಾಧ್ಯಕ್ಷೆ ಗಮಕ ಕಲಾಶ್ರೀ ರುಕ್ಮಿಣಿ ನಾಗೇಂದ್ರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು. ದೇವಾಲಯದ ಎಚ್. ಕೆ. ರಮೇಶ್ ಅವರು ೧೧ ದಿನಗಳ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಫೊಟೋ:

ಖ್ಯಾತ ವ್ಯಾಖ್ಯಾತೃ ವಿದುಷಿ ಶಾಂತಾ ನಾಗಮಂಗಲ ೧೧ ದಿನಗಳ ಗಮಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಭರತಭಕ್ತಿಕಾವ್ಯದ ‘ಪಾದುಕಾ ಕಿರೀಟಿ’ ಭಾಗಕ್ಕೆ ವ್ಯಾಖ್ಯಾನ ನೀಡಿದರು.