ಹಿರಿಯರ ಆದರ್ಶಗಳೇ ಕಿರಿಯರಿಗೆ ಸ್ಪೂರ್ತಿ: ನ್ಯಾ.ಸಿ.ಎಂ.ಜೋಶಿ

| Published : Mar 11 2025, 12:50 AM IST

ಸಾರಾಂಶ

ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿಯ ಹಿರಿಯ ನ್ಯಾಯವಾದಿ, ದಿ.ವಿ.ಮೋಹನ್‌ದಾಸ್ ಶೆಟ್ಟಿ ಅವರ ಭಾವಚಿತ್ರ ಅನಾವರಣ ಉಡುಪಿ ವಕೀಲರ ಸಂಘದಲ್ಲಿ ಸೋಮವಾರ ನಡೆಯಿತು. ಹೈಕೋರ್ಟ್ ನ್ಯಾಯಮೂರ್ತಿ ನ್ಯಾ.ಸಿ.ಎಂ. ಜೋಶಿ ಭಾವಚಿತ್ರ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿಯ ಹಿರಿಯ ನ್ಯಾಯವಾದಿ, ದಿ.ವಿ.ಮೋಹನ್‌ದಾಸ್ ಶೆಟ್ಟಿ ಅವರ ಭಾವಚಿತ್ರ ಅನಾವರಣ ಉಡುಪಿ ವಕೀಲರ ಸಂಘದಲ್ಲಿ ಸೋಮವಾರ ನಡೆಯಿತು.

ಭಾವಚಿತ್ರ ಅನಾವರಣಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ.ಸಿ.ಎಂ. ಜೋಶಿ ಮಾತನಾಡಿ, ವೃತ್ತಿಯಲ್ಲಿ ಆದರ್ಶ ಮತ್ತು ನೈಪುಣ್ಯತೆಯಿಂದ ಬದುಕಿದ ವ್ಯಕ್ತಿಯನ್ನು ಕಳೆದುಕೊಂಡಾಗ ಕುಟುಂಬ ವರ್ಗ, ಆತ್ಮೀಯರು ಹಾಗು ಸಮಾಜಕ್ಕೆ ದೊಡ್ಡ ನಷ್ಟ. ಹಿರಿಯ ವಕೀಲರನ್ನು ಕಳೆದುಕೊಂಡಾಗ, ಇತ್ತೀಚೆಗೆ ಕಾನೂನು ವೃತ್ತಿಯಲ್ಲಿ ಹೆಜ್ಜೆ ಇರಿಸಿದ ವೃತ್ತಿಪರರೂ ನಷ್ಟ ಅನುಭವಿಸುತ್ತಾರೆ ಎಂದರು.

ಹಿರಿಯ ವಕೀಲರ ಆದರ್ಶಗಳೇ ಕಿರಿಯ ವಕೀಲರಿಗೆ ಪ್ರೇರಣೆ ನೀಡುತ್ತವೆ. ಆ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಂಡು ವೃತ್ತಿ ಮುಂದುವರಿಸಿದರೆ ಯಶಸ್ಸು ಲಭಿಸಲು ಸಾಧ್ಯ ಎಂದರು.

ವೃತ್ತಿಯಲ್ಲಿ ಆದರ್ಶ ಮಾತ್ರ ಇದ್ದರೆ ಸಾಲದು, ನೈಪುಣ್ಯತೆಯೂ ಅಗತ್ಯ. ಇದನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. 50 ವರ್ಷದ ಹಿಂದಿನ ವಕೀಲ ವೃತ್ತಿಗೂ, ಇಂದಿನ ಕಾಲಘಟ್ಟದ ವೃತ್ತಿಗೂ ಬಹಳಷ್ಟು ವ್ಯತ್ಯಾಸ ಇದೆ. ಗುರು ಮುಖೇನ ಅನೇಕ ಸಂಗತಿಗಳನ್ನು ಕಲಿಯಬೇಕು. ಶಾಲಾ, ಕಾಲೇಜುಗಳಲ್ಲಿ ಕೌಶಲ್ಯಗಳನ್ನು ಹೇಳಿಕೊಡಲು ಸಾಧ್ಯವಿಲ್ಲ. ಇವೆಲ್ಲವೂ ಹಿರಿಯ ವಕೀಲರ ಮೂಲಕ ಕಲಿಯಬೇಕಾಗುತ್ತದೆ ಎಂದು ನುಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಮಾತನಾಡಿ, ದಿ. ಮೋಹನ್‌ದಾಸ್ ಶೆಟ್ಟಿ ಅವರ ಕೆಲಸದ ನ್ಯೆಪುಣ್ಯ ಮತ್ತು ವ್ಯಕ್ತಿತ್ವದಿಂದ ಸಮಾಜ ಅವರನ್ನು ಗುರುತಿಸಿತ್ತು. ಉತ್ಕೃಷ್ಟ ಗುಣಗಳನ್ನು ಅಳವಡಿಸಿಕೊಂಡಾಗ ಸಾರ್ಥಕ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.

ದಿ.ಮೋಹನ್‌ದಾಸ್ ಶೆಟ್ಟಿ ಪತ್ನಿ ರಶ್ಮಿ ಎಮ್ ಶೆಟ್ಟಿ ಇದ್ದರು.

ನ್ಯಾಯವಾದಿ ಆನಂದ್ ಮಡಿವಾಳ ಪ್ರಾಸ್ತಾವಿಕ ಮಾತನಾಡಿದರು. ಇಂಚರಾ ಶಿವಪುರ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್.ಎ.ಆರ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.