ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಮುಂದಿನ ಪೀಳಿಗೆಗೆ ಶಿಕ್ಷಣದ ಮತ್ತು ನೌಕರಿಯ ಮಹತ್ವವನ್ನು ತಿಳಿಸಬೇಕಾಗಿದೆ ಎಂದು ಕಾನೂನು ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಬಾಬು ಅಭಿಪ್ರಾಯಪಟ್ಟರು.ತಾಲೂಕಿನ ಕಟ್ಟೆಮಳಲವಾಡಿ ಸರ್ಕಾರಿ ನೌಕರ ಸಂಘದ ವತಿಯಿಂದ ನಿವೃತ್ತ ನೌಕರರಿಗೆ, ನೂತನವಾಗಿ ಸರ್ಕಾರಿ ಸೇವೆಗೆ ಸೇರಿದವರಿಗೆ, ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ಪ್ರತಿಭಾನ್ವಿತರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ನೌಕರರು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಗ್ರಾಮದ ಜನರಲ್ಲಿ ಸೌಹಾರ್ದತೆ ಮತ್ತು ಶಿಕ್ಷಣದ ಬಗ್ಗೆ ಒಲವು ಮೂಡಲು ಸಹಕಾರಿಯಾಗುತ್ತದೆ. ಕಟ್ಟೆಮಳಲವಾಡಿ ಗ್ರಾಮದಲ್ಲಿರುವ ಹೊಗೆ ಸೊಪ್ಪು ಹರಾಜು ಮಂಡಳಿಗೆ ಕೆಲಸ ಹಾಗೂ ಹಣದ ಆಸೆಗಾಗಿ ನಮ್ಮ ಮಕ್ಕಳು ಹೋಗುತ್ತಿದ್ದು ಅದನ್ನು ತಡೆದು ಶಾಲಾ ಕಾಲೇಜುಗಳಿಗೆ ಅವರನ್ನು ಕಳುಹಿಸಬೇಕಾಗಿದೆ ಎಂದರು.ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಸಚಿವ ಪ್ರೊ. ಪಾಂಡುರಂಗ ಬಾಬು ಮಾತನಾಡಿ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ ಮಕ್ಕಳಿಗೆ ಗ್ರಾಮದಲ್ಲಿ ಸುಸಜ್ಜಿತವಾದ ಒಂದು ಕೋಚಿಂಗ್ ಸೆಂಟರ್ ಸ್ಥಾಪಿಸಿ ಅವರನ್ನು ಆಧುನಿಕ ಶಿಕ್ಷಣ ಪದ್ಧತಿಯ ಬಗ್ಗೆ ವೃತ್ತಿ ಮಾರ್ಗದರ್ಶನ ಮಾಡುವ ಅವಶ್ಯಕತೆ ಇದೆ ಇದನ್ನು ನೌಕರರ ಎಲ್ಲರೂ ಜೊತೆಗೂಡಿ ಮಾಡಬೇಕಾಗಿದೆ. ಇದಲ್ಲದೆ ಬೌದ್ಧ ಸ್ತೂಪ ನಿರ್ಮಾಣ ಮಾಡಿ ಅದರಲ್ಲಿ ಧ್ಯಾನ ಆಧ್ಯಾತ್ಮಿಕ ಮತ್ತು ಉತ್ತಮವಾದ ಗ್ರಂಥಾಲಯವನ್ನು ಸ್ಥಾಪಿಸಿ ಗ್ರಾಮದ ಯುವಕರಿಗೆ ಓದುವ ಹವ್ಯಾಸವನ್ನು ರೂಢಿಗತ ಮಾಡಿಸಬೇಕಾಗಿದೆ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ಸನ್ಮಾನ ಮಾಡಿ ನಾಗರಾಜ್ ಮಲ್ಲಾಡಿ ಮಾತನಾಡಿ, ಪ್ರತಿ ತಿಂಗಳು ನೌಕರರು ಸಭೆ ಸೇರಿ ಗ್ರಾಮದ ಕುಂದು ಕೊರತೆ ಹಾಗೂ ಅವಶ್ಯಕತೆಗಳನ್ನು ಚರ್ಚಿಸಿದರೆ ನಮ್ಮ ಗ್ರಾಮ ಮಾದರಿ ಗ್ರಾಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ವೀರಭದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ನಿಂಗರಾಜ್ ಮಲ್ಲಾಡಿ, ಉಪಪ್ರಾಂಶುಪಾಲ ಸಂತೋಷ್ ಕುಮಾರ್, ಉಪನ್ಯಾಸಕ ನಾಗೇಂದ್ರ, ಕೆ.ಎಂ.ರಾಜು, ಕೆ.ಪಿ.ಪ್ರಸನ್ನ, ರುದ್ರ ಕೃಷ್ಣ, ಸಂಪತ್, ಕೃಷ್ಣಯ್ಯ, ಆನಂದ್ ಯಜಮಾನರಾದ ಅಂಕಯ್ಯ, ವೈಕುಂಠಯ್ಯ, ಪುಟ್ಟರಾಜು, ಶ್ರೀನಿವಾಸ್, ಭಾಸ್ಕರ್, ಗ್ರಾಪಂ ಸದಸ್ಯ ದಿಲೀಪ್, ವರಲಕ್ಷ್ಮಿ ಮತ್ತು ಗ್ರಾಮಸ್ಥರು ಇದ್ದರು.
ಸಿಂಗೇಶ್ ಮತ್ತು ತಂಡದವರು ಬುದ್ಧ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.