ಸಾರಾಂಶ
ಬಂಟ್ವಾಳ: ಮನೆಯೊಂದಕ್ಕೆ ನುಗ್ಗಿದ ನಾಲ್ವರು ಮುಸುಕುದಾರಿಗಳು ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ಮೌಲ್ಯದ ನಗನಗದನ್ನು ದರೋಡೆಗೈದ ಘಟನೆ ಗುರುವಾರ ಬೆಳಗಿನಜಾವ ತಾಲೂಕಿನ ವಗ್ಗದಲ್ಲಿ ನಡೆದಿದೆ.ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿ ರುವ ಪ್ಲೋರಿನ್ ಪಿಂಟೋ ಎಂಬವರಿಗೆ ಸೇರಿದ ಹೊಸ ಮನೆಯಲ್ಲಿ ಈ ದರೋಡೆ ಪ್ರಕರಣ ನಡೆದಿದ್ದು, ಮೆರಿಟಾ ಸಿಂತಿಯಾ ಪಿಂಟೋ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ ; ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಮಗಳುಮೆರಿಟಾ ಪಿಂಟೋ ಇಬ್ಬರು ಮಾತ್ರ ಇದ್ದ ವೇಳೆ ಈ ಘಟನೆ ನಡೆದಿದೆ, ಗುರುವಾರ ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ಕಾಲಿಂಗ್ ಬೆಲ್ ಶಬ್ದವಾಗಿದ್ದು,ಬಾಗಿಲು ತೆಗೆದು ನೋಡಿದಾಗ ನಾಲ್ವರು ಮುಸುಕುದಾರಿಗಳು ಮನೆಯೊಳಗೆ ನುಗ್ಗಿದ್ದಾರೆ.ಬಳಿಕ ಮನೆಯಲ್ಲಿರುವ ನಗನಗದು ಕೊಡುವಂತೆ ಬೆದರಿಸಿದ್ದಾರೆ. ಬೆದರಿಕೆಗೆ ಬಗ್ಗದೆ ಪ್ರತಿಭಟಿಸಿದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದು, ಈವೇಳೆ ಮನೆಮಂದಿ ಗೊದ್ರೇಜ್ ನ ಬೀಗದ ಕೀ ನೀಡಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮೆರಿಟಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನೆ ವೇಳೆ ಕಪಾಟಿನಲ್ಲಿದ್ದ ಅಂದಾಜು ರೂ 3,20,000/-ಮೌಲ್ಯದ ಒಟ್ಟು 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು, ರೂ 11,000/- ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡಿರುವುದಲ್ಲದೆ, ಪಿರ್ಯಾದುದಾರರಿಗೆ ಬೆದರಿಕೆ ಒಡ್ಡಿ ಅವರಿಂದ ರೂ 30,000/- ನಗದು ಹಣವನ್ನು ಪಡೆದು ಪರಾರಿಯಾಗಿರುತ್ತಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ.
ದರೋಡೆ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಜಿಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಬೇಟಿ ನೀಡಿದ್ದಾರೆ. ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.