ದೊಡ್ಡಬಳ್ಳಾಪುರ: ಬೆಂಗಳೂರು ನಗರದ ಅಂಚಿನಲ್ಲೇ ಇರುವ ದೊಡ್ಡಬಳ್ಳಾಪುರ ತಾಲೂಕು ಸೇರಿದಂತೆ ಇತರೆ ತಾಲೂಕುಗಳಲ್ಲಿ ಮಹಿಳೆಯರು ಕಾಣೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದು ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಡಾ.ಎಂ.ಬಿ.ನವೀನ್‌ಕುಮಾರ್ ಹೇಳಿದರು.ಅವರು ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಪೋಕ್ಸೋ ಪ್ರಕರಣಗಳಲ್ಲಿ ಯುವಕರು ಜೈಲು ಸೇರುವುದು ಸಹ ಹೆಚ್ಚಾಗುತ್ತಿವೆ. ಈ ಬಗ್ಗೆ ಮನೆಗಳಲ್ಲಿ ಪೋಷಕರು ಹದಿಹರೆಯದ ಮಕ್ಕಳ ಮೊಬೈಲ್ ಬಳಕೆ ಕಡೆಗೆ ನಿಗಾವಹಿಸಬೇಕು. ನಮ್ಮ ಮಕ್ಕಳು ಎಷ್ಟೇ ಒಳ್ಳೆಯವರಾಗಿದ್ದರು ಸಹ ತಿಂಗಳಲ್ಲಿ ಒಂದೆಡರು ಬಾರಿಯಾದವರು ಮಕ್ಕಳಿಗೆ ತಿಳಿಯದಂತೆ ಶಾಲಾ ಬ್ಯಾಗ್‌ಗಳನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿದರು.

ದೇಶವು ಪ್ರಗತಿಯ ಹಾದಿಯಲ್ಲಿ ನಡೆಯಲು ಯೋಜನೆಗಳಷ್ಟೇ ಪ್ರಮುಖವಾಗಿರುವುದು ಯುವ ಸಮುದಾಯವು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಬದುಕು ರೂಪಿಸಿಕೊಳ್ಳುವಂತೆ ಮಾಡುವ ಗುರುತರವಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಯಾವುದೇ ಒಂದು ದೇಶವನ್ನು ಹಾಳು ಮಾಡಲು ಯುದ್ದ ಮಾತ್ರ ದಾರಿಯಲ್ಲ, ಅಲ್ಲಿನ ಯುವ ಸಮುದಾಯವನ್ನು ಮಾದಕ ವಸ್ತುಗಳ ದಾಸಾರಾಗುವಂತೆ ಮಾಡಿದರೆ ಯುದ್ದಕ್ಕಿಂತಲು ದೊಡ್ಡ ನಷ್ಟವನ್ನು ಅನುಭವಿಸಲಿದೆ. ಯುವ ಸಮುದಾಯವು ಮಾದಕ ವಸ್ತುಗಳ ದಾಸರಾಗುವಂತೆ ತಡೆಯಲು ಪೊಲೀಸರಿಗೆ ಸಾರ್ವಜನಿಕರ ಸಹಕಾರವು ಮುಖ್ಯವಾಗಿದೆ. ಪೊಲೀಸ್ ಇಲಾಖೆಯಿಂದ ಹಿರಿಯ ನಾಗರಿಕರ ಸುರಕ್ಷತೆಗಾಗಿ ಮನೆ ಮನೆಗೆ ಪೊಲೀಸ್, ಯುವ ಸಮುದಾಯವು ಉತ್ತಮ ದಾರಿಯಲ್ಲಿ ನಡೆಯುವಂತೆ ಮಾಡುವ ಸಲುವಾಗಿ ಸನ್ಮಿಮಿತ್ರ ಯೋಜನೆ, ಆಸರೆ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಇವುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಶ್ರೀನಂದೀಶ್, ಪ್ರಕಾಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್, ಸಂಘದ ಕಾರ್ಯನಿರ್ವಾಹಕ ದೇವರಾಜ್, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ಚಲನ ಚಿತ್ರ ನಟ, ನಿರ್ದೇಶಕ ರುದ್ರೇಶ್ನಾಗಸಂದ್ರ, ತರಬೇತಿ ಸಬ್ಇನ್ಸ್ಪೆಕ್ಟರ್ ಪ್ರೀತಿ, ಶ್ರೀದೇವಿ,ಗ್ರಾಮ ಗಸ್ತು ಕಾನ್ಸ್ಟೆಬಲ್ ಪೂಜಾ,ಗ್ರಾಮಾಂತರ ಪೊಲೀಸ್ ಠಾಣೆ ಗುಪ್ತ ಮಾಹಿತಿ ವಿಭಾಗದ ಚಂದ್ರು ಇದ್ದರು.


ಫೋಟೋ-

14ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆಯಿಂದ ನಡೆದ ಗ್ರಾಮಸಭೆಯಲ್ಲಿ ಆರಕ್ಷಕ ನಿರೀಕ್ಷಕ ನವೀನ್‌ಕುಮಾರ್‌ ಮಾತನಾಡಿದರು.