ಸಾರಾಂಶ
ಯಳಂದೂರು : ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಅನೇಕ ಕಾನೂನುಗಳು ಜಾರಿಗೆ ತಂದಿದ್ದರೂ ಈ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದ್ದು ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕ ಆರ್. ಶ್ರೀಕಾಂತ್ ಕರೆ ನೀಡಿದರು.
ಗುರುವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುವಿಕೆ ವಿಷಯದ ಬಗ್ಗೆ ಮಾತನಾಡಿದರು. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸಮಾಜದಲ್ಲಿರುವ ಶೇ.೨ರಿಂದ ೩ರಷ್ಟು ಜನರು ಇಂತಹ ಕೃತ್ಯ ಎಸೆಗುತ್ತಾರೆ. ಆದರೆ ಉಳಿದವರು ಇದಕ್ಕೂ ನಮಗೂ ಸಂಬಂಧ ಇಲ್ಲದಂತೆ ಇರುತ್ತಾರೆ.
ಇಂತಹ ದುಷ್ಟರಿಗೆ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಇಂತಹವರ ವಿರುದ್ಧ ಮಾಹಿತಿಯನ್ನು ನೀಡಿ ಪೊಲೀಸರಿಗೆ ಸಹಕರಿಸಬೇಕು. ಹೆಣ್ಣನ್ನು ಭೋಗದ ವಸ್ತುವಾಗಿ ನೋಡುವ ಪರಿಪಾಠ ಇನ್ನೂ ಜೀವಂತವಾಗಿದೆ. ಈ ಮನಸ್ಥಿತಿ ಬದಲಾಗಬೇಕು. ಹೆಣ್ಣು ಮಕ್ಕಳ ಮಾರಾಟ ಜಾಲ, ಇವರನ್ನು ಪಬ್, ಕ್ಲಬ್‌ಗಳಲ್ಲಿ ಬಳಸಿಕೊಳ್ಳುವುದು, ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಬಳಸಿಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ ಇದು ನಿಲ್ಲಬೇಕು. ಸರಗಳ್ಳತನವೂ ಮಹಿಳಾ ದೌರ್ಜನ್ಯದ ಒಂದು ಭಾಗವಾಗಿದೆ. ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗುತ್ತಿದ್ದು ಈ ಬಗ್ಗೆ ಮಹಿಳೆಯರು ಎಚ್ಚರದಿಂದ ಇರಬೇಕು. ನಮ್ಮ ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ.
ಪೋಕ್ಸೋ ಕಾಯ್ದೆಯಡಿಯಲ್ಲಿ ದೂರಾಗಿ ಅನೇಕರು ಜೈಲಿನಲ್ಲಿದ್ದಾರೆ. 13 ರಿಂದ 19 ವರ್ಷ ವಯಸ್ಸಿನ ಮಕ್ಕಳ ಕಡೆ ಪೋಷಕರು ವಿಶೇಷ ಆಸಕ್ತಿ ವಹಿಸಬೇಕು. ಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಗುಂಗಿನಲ್ಲಿ ಸಿಲುಕಿ ಮೋಸ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದು ನಿಲ್ಲಬೇಕಾದರೆ ಪೋಷಕರು ವಿಶೇಷ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎನ್.ಎಂ.ಸರಸ್ವತಿ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳು ಹಾಗೂ ಕಾನೂನು ಅರಿವು ಹಾಗೂ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರಿಗೆ ಒತ್ತಡ ಎಂಬ ವಿಷಯದ ಕುರಿತು ಮಾತನಾಡಿದರು. ಜ್ಞಾನವಿಕಾಸದ ಯೋಜನಾಧಿಕಾರಿ ಮೂಕಾಂಬಿಕಾ, ಜಿಲ್ಲಾ ಜನಜಾಗೃತಿ ವೇದಿಕೆಯ ಭೀಮಪ್ಪ ಮಕ್ಕಳ ಸಹಾಯವಾಣಿ ಮೇಲ್ವಿಚಾರಕ ಮಹೇಶ್, ತಾಪಂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವೈ.ಕೆ. ಮೋಳೆ ನಾಗರಾಜು ಸೇರಿದಂತೆ ಅನೇಕರು ಇದ್ದರು.