ಭಾರತೀಯ ನ್ಯಾಯ ಸಂಹಿತೆಯು ಐಪಿಸಿಯ ಬದಲಾದ ಸ್ವರೂಪ: ಡಿ.ವಿ.ಗುರುಪ್ರಸಾದ್

| Published : Jun 13 2024, 12:52 AM IST

ಭಾರತೀಯ ನ್ಯಾಯ ಸಂಹಿತೆಯು ಐಪಿಸಿಯ ಬದಲಾದ ಸ್ವರೂಪ: ಡಿ.ವಿ.ಗುರುಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ನ್ಯಾಯ ಸಂಹಿತೆಯಲ್ಲಿ ಇವೆಲ್ಲವನ್ನೂ ಸೆಕ್ಷನ್ 2ರ ಅಡಿಯಲ್ಲಿ ತರಲಾಗಿದೆ. ಐಪಿಸಿಯಲ್ಲಿದ್ದ 175 ಸೆಕ್ಷನ್ ಗಳನ್ನು ಮಾರ್ಪಾಡು ಮಾಡಲಾಗಿದೆ. 22 ಸೆಕ್ಷನ್ ಗಳನ್ನು ಕೈ ಬಿಡಲಾಗಿದೆ. 8 ಹೊಸ ಸೆಕ್ಷನ್ ಗಳ ಸೇರ್ಪಡೆಯಾಗಿದೆ. ಇದರಿಂದ ಒಂದೇ ಸಮನಾದ ಅಪರಾಧ ಮತ್ತು ಅವುಗಳ ಶಿಕ್ಷೆಯನ್ನು ಒಂದೇ ಅಧ್ಯಾಯದ ಅಡಿ ತರಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪರಿಷ್ಕೃತಗೊಂಡಿರುವ ಭಾರತೀಯ ನ್ಯಾಯ ಸಂಹಿತೆಯು ಐಪಿಸಿಯ ಬದಲಾದ ಸ್ವರೂಪ ಎಂದು ನಿವೃತ್ತ ಡಿಜಿಪಿ ಡಾ.ಡಿ.ವಿ. ಗುರುಪ್ರಸಾದ್ ತಿಳಿಸಿದರು.

ಮೈಸೂರು ವಕೀಲರ ಸಂಘ ಮತ್ತು ಬೆಂಗಳೂರಿನ ಲಾಯರ್ಸ್ಲಾಬ್ ಬುಕ್ ಸಹಯೋಗದಲ್ಲಿ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023, ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಐಪಿಸಿಯಲ್ಲಿ ಒಟ್ಟು 23 ಅಧ್ಯಾಯಗಳೂ 511 ಸೆಕ್ಷನ್ ಗಳೂ ಇದ್ದವು. ಈ ಸಂಹಿತೆಯಲ್ಲಿ ಅವುಗಳ ಸಂಖ್ಯೆಯನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ 20 ಅಧ್ಯಾಯ ಮತ್ತು 358 ಸೆಕ್ಷನ್ ಗಳಿಗೆ ಸೀಮಿತಗೊಳಿಸಲಾಗಿದೆ. ಇದರ ಮುಖ್ಯ ಕಾರಣ ಐಪಿಸಿಯಲ್ಲಿ ಸೆಕ್ಷನ್ 6 ರಿಂದ 52ಎ ವರೆಗೆ ವ್ಯಾಖ್ಯಾನಗಳಿದ್ದವು.

ಭಾರತೀಯ ನ್ಯಾಯ ಸಂಹಿತೆಯಲ್ಲಿ ಇವೆಲ್ಲವನ್ನೂ ಸೆಕ್ಷನ್ 2ರ ಅಡಿಯಲ್ಲಿ ತರಲಾಗಿದೆ. ಐಪಿಸಿಯಲ್ಲಿದ್ದ 175 ಸೆಕ್ಷನ್ ಗಳನ್ನು ಮಾರ್ಪಾಡು ಮಾಡಲಾಗಿದೆ. 22 ಸೆಕ್ಷನ್ ಗಳನ್ನು ಕೈ ಬಿಡಲಾಗಿದೆ. 8 ಹೊಸ ಸೆಕ್ಷನ್ ಗಳ ಸೇರ್ಪಡೆಯಾಗಿದೆ. ಇದರಿಂದ ಒಂದೇ ಸಮನಾದ ಅಪರಾಧ ಮತ್ತು ಅವುಗಳ ಶಿಕ್ಷೆಯನ್ನು ಒಂದೇ ಅಧ್ಯಾಯದ ಅಡಿ ತರಲಾಗಿದೆ ಎಂದರು.

ಐಪಿಸಿಯಲ್ಲಿ ದೇಶದ್ರೋಹದ ಅಪರಾಧಕ್ಕಾಗಿ ಸೆಕ್ಷನ್ 124ಎ ನಮೂದಿಸಲಾಗಿತ್ತು. ಈ ಸಂಹಿತೆಯಲ್ಲಿ ಆ ಸೆಕ್ಷನ್ ಅನ್ನು ಹಿಂಪಡೆಯಲಾಗಿದೆ. ಆದರೆ ಈ ಹಿಂದೆ ದೇಶದ್ರೋಹವೆಂದು ಪರಿಗಣಿಸಲಾದ ಕೃತ್ಯಗಳನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 150ರಲ್ಲಿ ನೀಡಲಾಗಿದೆ.

ಇದಲ್ಲದೆ ಅಸ್ವಾಭಾವಿಕ ಸಂಭೋಗದ ಅಪರಾಧವಾಗಿದ್ದ ಸೆಕ್ಷನ್ 377 ಅನ್ನು ಕೈಬಿಡಲಾಗಿದೆ. ಸ್ವತ್ತಿನ ಅಪರಾಧಗಳಲ್ಲಿ ನಮೂದಿಸಿದ್ದ ರಾತ್ರಿ ವೇಳೆ ಮನೆಗೆ ಹೊಂಡು ಹಾಕುವುದು (ಸೆಕ್ಷನ್ 444) ಮತ್ತು ರಾತ್ರಿ ವೇಳೆ ಮನೆ ಮುರಿಯುವುದು (ಸೆಕ್ಷನ್ 446) ಕೈಬಿಡಲಾಗಿದ್ದು, ಈ ಎರಡೂ ಅಪರಾಧಕ್ಕೆ ಸಮಯದ ನಿಗದಿಯಿಲ್ಲ ಎಂದರು.

ಐಪಿಸಿಯಲ್ಲಿ ವ್ಯಭಿಚಾರವನ್ನು ಅಪರಾಧವೆಂದು ಪರಿಗಣಿಸಲಾಗಿದ್ದು, ಅದಕ್ಕೆಂದೇ ಸೆಕ್ಷನ್ 497 ನಮೂದಾಗಿತ್ತು. ಈ ಸಂಹಿತೆಯಲ್ಲಿ ಅದನ್ನು ತೆಗೆಯಲಾಗಿದೆ. ಆದರೆ ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ಕರೆದೊಯ್ಯುವುದನ್ನು ಭಾರತೀಯ ನ್ಯಾಯ ಸಂಹಿತೆ 83ರಲ್ಲಿ ಅಪರಾಧವನ್ನಾಗಿ ನಮೂದಿಸಿದೆ. ಸೆಕ್ಷನ್ 124ಎ ಅಲ್ಲದೆ ಐಪಿಸಿಯಲ್ಲಿದ್ದ ಕೆಲವು ಸೆಕ್ಷನ್ 236, 237, 264, 265, 266, 267, 310, 311, 444 ಮತ್ತು 446ನ್ನು ಕೈ ಬಿಡಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಹೆಗ್ಡೆ ಮಾತನಾಡಿ, ನೂತನ ಸಂಹಿತೆಯ ಬಗ್ಗೆ ನಮಗೂ ಸಂಪೂರ್ಣ ಮಾಹಿತಿ ಇಲ್ಲ. ನಾಳೆಯಿಂದ ನಮಗೆ ತರಬೇತಿ ನಡೆಯುತ್ತದೆ. ಕೆಲವೊಂದು ಮಾರ್ಪಾಡುಗಳನ್ನು ಮಾಡಿರುವುದಾಗಿ ಹೇಳಿದ್ದಾರೆ ಎಂದರು.

ಮೂರು ಪುಸ್ತಕಗಳ ಒಟ್ಟು ಬೆಲೆ 2,050 ರೂ. ಇತ್ತು. ಅದನ್ನು ಬುಧವಾರ 1,200 ರೂ. ಗೆ ಮಾರಾಟ ಮಾಡಲಾಯಿತು. ವಕೀಲ ಮತ್ತು ಲಾ ಗೈಡ್ಮಾಸಪತ್ರಿಕೆ ಸಂಪಾದಕ ಎಚ್.ಎನ್. ವೆಂಕಟೇಶ್ ಮಾತನಾಡಿ, ಈ ಪುಸ್ತಕಗಳ ನೂರು ಪ್ರತಿಯನ್ನು ವಕೀಲರ ಸಂಘಕ್ಕೆ ಕೊಡುಗೆಯಾಗಿ ನೀಡುತ್ತೇನೆ ಎಂದರು.

ವಕೀಲ ಬಿ.ಎಸ್. ಪ್ರಶಾಂತ್, ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಕಾರ್ಯದರ್ಶಿ ಎ.ಜಿ. ಸುಧೀರ್, ಉಪಾಧ್ಯಕ್ಷ ಎಂ.ವಿ. ಚಂದ್ರಶೇಖರ, ಜಂಟಿ ಕಾರ್ಯದರ್ಶಿ ಕೆ.ಆರ್. ಚರಣ್ ರಾಜ್, ಮಹಿಳಾ ಜಂಟಿ ಕಾರ್ಯದರ್ಶಿ ಬಿ.ವಿ. ವಿನೋದಾ, ಖಜಾಂಚಿ ಎಚ್.ಬಿ. ಭರತ್ ಮತ್ತು ಸಂಘದ ಸದಸ್ಯರು ಇದ್ದರು.