ಜಗತ್ತಿನಲ್ಲಿಯೇ ನಿಷ್ಠೆಯಿಂದ ತಾಯಿನಾಡಿನ ಸೇವೆ ಮಾಡುವ ಭಾರತೀಯ ಸೈನಿಕ ಸ್ವಾಭಿಮಾನದ ಪ್ರತೀಕವೇ ಆಗಿದ್ದಾನೆ ಎಂದು ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ ನುಡಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಜಗತ್ತಿನಲ್ಲಿಯೇ ನಿಷ್ಠೆಯಿಂದ ತಾಯಿನಾಡಿನ ಸೇವೆ ಮಾಡುವ ಭಾರತೀಯ ಸೈನಿಕ ಸ್ವಾಭಿಮಾನದ ಪ್ರತೀಕವೇ ಆಗಿದ್ದಾನೆ ಎಂದು ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ ನುಡಿದರು.ತಾಲೂಕಿನ ಹಾರಕೂಡ ಮಠದಲ್ಲಿ ಪೂಜ್ಯಶ್ರೀ ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ 78 ಸೈನಿಕರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಗಡಿ ಕಾಯುವ ಸೈನಿಕರು ಗುಡಿಯಲ್ಲಿರುವ ದೇವರಷ್ಟೇ ಶ್ರೇಷ್ಠರು. ಇಂತಹ ಮಕ್ಕಳನ್ನು ಹೆತ್ತ ತಂದೆ ತಾಯಿಂದಿರೇ ಧನ್ಯರು, ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಎತ್ತಿ ತೋರಿಸಿದ ಶ್ರೇಯಸ್ಸು ನಮ್ಮ ದೇಶದ ಸೈನಿಕರಿಗೆ ಸಲ್ಲುತ್ತದೆ.
ಒಂದೇ ವೇದಿಕೆ ಮೇಲೆ 78 ಸೈನಿಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಿರುವುದು ಡಾ. ಚನ್ನವೀರ ಶಿವಾಚಾರ್ಯರ ರಾಷ್ಟ್ರಪ್ರೇಮದ ಜೀವಂತ ನಿದರ್ಶನ, ಪೂಜ್ಯರ ಘನ ವ್ಯಕ್ತಿತ್ವದಿಂದ ಸಂಸ್ಕಾರಯುತ ಸಮಾಜ ನಿರ್ಮಾಣಗೊಂಡು ರಾಷ್ಟ್ರ ಪ್ರೇಮದ ಪನ್ನೀರ ಹೊಳೆ ಪ್ರವಹಿಸುವಲ್ಲಿ ಸಂದೇಹವಿಲ್ಲ ಎಂದು ಅಭಿಮಾನದಿಂದ ನುಡಿದರು.ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಅಧಿಕಾರಿ ಬಿ.ಕೆ. ಹಿರೇಮಠ, ಜಗನ್ನಾಥ ಪಾಟೀಲ ಮಂಠಾಳ, ರಾಜಕುಮಾರ ಬಿರಾದಾರ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ ಹಾರಕೂಡ, ಮಲ್ಲಿನಾಥ ಹಿರೇಮಠ ಹಾರಕೂಡ, ಪ್ರಕಾಶ ಸುಂಠಾಣೆ, ಪಂಡಿತರಾವ ಪೋಲಿಸ್ ಪಾಟೀಲ ಗದಲೇಗಾಂವ (ಬಿ) ಭಾಗವಹಿಸಿದ್ದರು.
ಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಭಾರತ ದೇಶದ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಬೀದರಿನ ಕ್ಯಾಪ್ಟನ್ ನರಸಿಂಗ ವೆಂಕಟರಾವ ಮೋರೆ ಸೇರಿದಂತೆ ವಿವಿಧ ಜಿಲ್ಲೆಯ ಸುಮಾರು 78 ಜನ ಯೋಧರಿಗೆ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಬಸವರಾಜ ಐನೋಳಿ ಚಿಂಚೋಳಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಶಿಕ್ಷಕ ಅಂಬಾರಾಯ ಉಗಾಜಿ ಸ್ವಾಗತಿಸಿದರು.