ಕನ್ನಡಪ್ರಭ ವಾರ್ತೆ ವಿಜಯಪುರ

ನಾವು ಇಂದು ಅಭಿವೃದ್ಧಿ, ಶಿಕ್ಷಣ ಮತ್ತು ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಿರುವುದು ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರ ತ್ಯಾಗ ಮತ್ತು ಶ್ರಮದಿಂದ ಬಂದಿದ್ದಾಗಿದೆ. ಅಂತಹ ಹಳಕಟ್ಟಿಯವರನ್ನು ಸದಾ ಸ್ಮರಿಸುತ್ತಿರುವ ಬಿಎಲ್‌ಡಿಇ ಕಾರ್ಯ ಅನುಪಮವಾದದ್ದು ಎಂದು ನಿಡೋಣಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.

ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ದಾಶ್ಯಾಳ ರಸ್ತೆಯ ವಿರಕ್ತಮಠಕ್ಕೆ ಸೇರಿದ 11 ಎಕರೆ ಜಮೀನಿನಲ್ಲಿ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನ ಪ್ರಯುಕ್ತ ಬಿ.ಎಲ್.ಡಿ.ಇ ಸಂಸ್ಥೆ, ಅಕ್ಷಯಕಲ್ಪ ಮತ್ತು ಕೃಷಿಕಲ್ಪ ಸಹಯೋಗದಲ್ಲಿ ಕೈಗೊಂಡಿರುವ ಕ್ಷೀರ ಯೋಜನೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಧಾರವಾಡದಿಂದ ಬಂದ ಹಳಕಟ್ಟಿ ಅವರು ವಿಜಯಪುರದಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಅವರ ನಂತರದ ತಲೆಮಾರುಗಳು ಕೂಡ ಅವರನ್ನು ಸ್ಮರಿಸುವ ಕಾರ್ಯಕ್ಕೆ ಮುಂದಾಗಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಸ್ಮರಿಸಿದರು.

ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಫೌಂಡೇಶನ್ ಸಹಕಾರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕ್ಷೀರ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ರೈತರ ಬಗ್ಗೆ ಕಾಳಜಿಯಿಂದ ಸರ್ಕಾರಿಂದ ರೈತರ ಜಮೀನುಗಳಿಗೆ ನೀರು ಒದಗಿಸಿ, ನಂತರ ಸಂಸ್ಥೆಯ ಮೂಲಕ ಹೈನುಗಾರಿಕೆಗೂ ಉತ್ತೇಜನ ನೀಡುತ್ತಿರುವ ಸಚಿವ ಎಂ.ಬಿ.ಪಾಟೀಲರನ್ನು ಅಭಿನಂದಿಸಿದರು.

ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಸನಗೌಡ ಪಾಟೀಲ ಮಾತನಾಡಿ, ಮಹಾನಗರಗಳಲ್ಲಿರುವ ದೊಡ್ಡ ದೊಡ್ಡ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿರುವರಂತೆ ರೈತರು ಹೈನುಗಾರಿಕೆಯಿಂದ ಮೇಲೆ ಬರಬೇಕು ಎಂಬ ಉದ್ದೇಶದಿಂದ ಕ್ಷೀರ ಯೋಜನೆಯನ್ನು ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದರು.


ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ರೈತರ ಆರ್ಥಿಕತೆಯನ್ನು ಹೆಚ್ಚಿಸುವ ಕ್ಷೀರ ಪೈಲೆಟ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಯೋಜನೆಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಿಂದ ಪ್ರತಿವರ್ಷ ₹ 50 ಲಕ್ಷ ವೆಚ್ಚವನ್ನು ನೀಡುತ್ತಿದೆ. ಹಳಕಟ್ಟಿಯವರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕಾರ್ಯವನ್ನು ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಎಂ.ಬಿ.ಪಾಟೀಲರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಅಕ್ಷಯಕಲ್ಪ ಫೌಂಡೇಶನ್‌ ಸಿ.ಎಂ.ಪಾಟೀಲ, ಕೆಎಂಎಫ್ ಮಾಜಿ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ಮಾತನಾಡಿದರು. ತಿಕೋಟಾ ನ್ಯೂ ಆರ್ಟ್ಸ್ ಕಾಲೇಜಿನ ಹಾಗೂ ಬಬಲೇಶ್ವರ ಶಾಂತವೀರ ಆರ್ಟ್ಸ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಫಾರಂನಲ್ಲಿ ಸಸಿಗಳನ್ನು ನೆಟ್ಟರು. ಪೈಲಟ್ ಯೋಜನೆ ಸಿಬ್ಬಂದಿಗಳಾದ ಈರಣ್ಣ ರೊಟ್ಟಿ, ಸಂತೋಷ ಬಿರಾದಾರ, ರಾಜಕುಮಾರ ಕುಮಠೆ, ಶಾನು ಸಾರವಾಡ, ಜಬ್ಬಾರ ಇನಾಮದಾರ, ಪ್ರಭುಲಿಂಗ ಬಿರಾದಾರ, ಶಿವಪುತ್ರ ಕೊಲಕಾರ, ಶರಣು ರೆಬಿನಾಳರನ್ನು ಸನ್ಮಾನಿಸಲಾಯಿತು. ಗ್ರಾಮಸ್ಥರಾದ ಮಲ್ಲಿಕಾರ್ಜುನ ಬಾಗಿ, ಶಶಿಧರ ಕೋಟ್ಯಾಳ, ಬಸನಗೌಡ ಬಿರಾದಾರ, ಸೋಮಶೇಖರ ಕೋಟ್ಯಾಳ, ಸಾಹೇಬಗೌಡ ಪಾಟೀಲ, ದಾನಮ್ಮ ಜಿರ್ಲಿ, ಮಹಾದೇವ ಬೆನಕಟ್ಟಿ, ಜಾಪರ ಇನಾಮದಾರ ಸೇರಿದಂತೆ ಉಪಸ್ಥಿತರಿದ್ದರು.-----------