ಕಾಡಾನೆಗಳ ಹಾ‍ವಳಿ ನಿಯಂತ್ರಣಕ್ಕೆ ವಿಶೇಷ ಯೋಜನೆ ರೂಪಿಸಲು ಗ್ರಾಮಸ್ಥರ ಒತ್ತಾಯ

| Published : Jan 05 2024, 01:45 AM IST

ಕಾಡಾನೆಗಳ ಹಾ‍ವಳಿ ನಿಯಂತ್ರಣಕ್ಕೆ ವಿಶೇಷ ಯೋಜನೆ ರೂಪಿಸಲು ಗ್ರಾಮಸ್ಥರ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲೆಗೆ ಸೇರಿದ ಮೀಸಲು ಅರಣ್ಯದಿಂದ ಕೊಡಗು ಜಿಲ್ಲೆಗೆ ಬೆಸೂರು ಗ್ರಾ.ಪಂ. ವ್ಯಾಪ್ತಿ ಮೂಲಕ ಕಾಡಾನೆಗಳು ಪ್ರವೇಶಿಸುತ್ತವೆ. ಬೆಸೂರು ಗ್ರಾ.ಪಂ. ವ್ಯಾಪ್ತಿ ಕಾಡಾನೆ ಕಾರಿಡಾರ್ ಆಗಿರುವುದರಿಂದ ಕಾಡಾನೆಗಳು ರೈತರ ತೋಟ, ಹೊಲ ಗದ್ದೆಗಳಿಗೆ ನುಸುಳಿ ಕೃಷಿ ಬೆಳೆಗಳನ್ನು ಧ್ವಂಸಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ನಮ್ಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ವಿಶೇಷ ಯೋಜನೆ ರೂಪಿಸಬೇಕೆಂದು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ.ಯ 2023- 24ನೇ ಸಾಲಿನ ಗ್ರಾಮಸಭೆ ಗುರುವಾರ ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಆವರಣದಲ್ಲಿ ನಡೆಯಿತು. ಗ್ರಾಮಸಭೆಯಲ್ಲಿ ಇಲಾಖೆ ಅಧಿಕಾರಿಗಳ ಮಾಹಿತಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಯಿತು. ಕೊಡ್ಲಿಪೇಟೆ ಅರಣ್ಯ ಉಪ ವಲಯಾಧಿಕಾರಿ ಗೋವಿಂದ್‍ರಾಜ್ ನೀಡಿದ ಮಾಹಿತಿಯಂತೆ ಗ್ರಾಮಸ್ಥರು ವಿಷಯ ಪ್ರಸ್ತಾಪಿಸಿ, ಹಾಸನ ಜಿಲ್ಲೆಗೆ ಸೇರಿದ ಮೀಸಲು ಅರಣ್ಯದಿಂದ ಕೊಡಗು ಜಿಲ್ಲೆಗೆ ಬೆಸೂರು ಗ್ರಾ.ಪಂ. ವ್ಯಾಪ್ತಿ ಮೂಲಕ ಕಾಡಾನೆಗಳು ಪ್ರವೇಶಿಸುತ್ತವೆ. ಬೆಸೂರು ಗ್ರಾ.ಪಂ. ವ್ಯಾಪ್ತಿ ಕಾಡಾನೆ ಕಾರಿಡಾರ್ ಆಗಿರುವುದರಿಂದ ಕಾಡಾನೆಗಳು ರೈತರ ತೋಟ, ಹೊಲ ಗದ್ದೆಗಳಿಗೆ ನುಸುಳಿ ಕೃಷಿ ಬೆಳೆಗಳನ್ನು ಧ್ವಂಸಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ನಮ್ಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ವಿಶೇಷ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು. ಕಂದಾಯ ಇಲಾಖೆಯು ಕಟ್ಟೆಪುರ ಗ್ರಾಮದಲ್ಲಿ ಎಸ್‍ಸಿ ಮತ್ತು ಎಸ್‍ಟಿ ಜನಾಂಗದವರಿಗೆ ಕಾದಿರಿಸಿರುವ ಸ್ಮಶಾನ ಜಾಗವು ಕಲ್ಲುಬಂಡೆಗಳಿಂದ ಕೂಡಿದೆ. ಈ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗುವುದಿಲ್ಲ ಇದರ ಬದಲಿಗೆ ಸ್ಮಶಾನಕ್ಕಾಗಿ ಸೂಕ್ತ ಜಾಗವನ್ನು ಮಂಜೂರು ಮಾಡಿಕೊಡುವಂತೆ ಗ್ರಾಮಸ್ಥರ ಪರವಾಗಿ ಪವಿತ್ರಾ ವಿಷಯ ಪ್ರಸ್ತಾಪಿಸಿದರು. ನ್ಯಾಯದಳ್ಳ ಸರ್ಕಾರಿ ಶಾಲೆ ಬಳಿ ಗ್ರಾ.ಪಂ.ನಿಂದ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್‍ನಿಂದ ನೀರು ಸೋರುತ್ತಿದ್ದು ನೀರು ಪೋಲಾಗುತ್ತಿರುವ ಬಗ್ಗೆ ಗ್ರಾಮಸ್ಥ ಸುಂದರಮೂರ್ತಿ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಗ್ರಾಮಸ್ಥರು ಮತ್ತು ಗ್ರಾ.ಪಂ. ಸದಸ್ಯರ ನಡುವೆ ಸುದೀರ್ಘ ಚರ್ಚೆ ನಡೆಯಿತು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಬೆಸೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾಮ ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಹರೀಶ್, ಸರ್ವ ಸದಸ್ಯರು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಗಿರೀಶ್, ಗ್ರಾ.ಪಂ.ಕಚೇರಿ ಸಿಬ್ಬಂದಿ ಹಾಜರಿದ್ದರು.