ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಾತಿಲ್ಲದ ಮೌನ… ಕೇಳಿಸದ ಲೋಕ… ಆದರೆ ಹೃದಯಗಳ ಸಂಭಾಷಣೆ ಮಾತ್ರ ಅನಂತ. ಇಂತಹ ಅಪರೂಪದ ಭಾವನೆಗಳಿಗೆ ಸಾಕ್ಷಿಯಾಗಿ, ಹುಟ್ಟಿನಿಂದಲೇ ಮಾತು ಬಾರದ ಹಾಗೂ ಶ್ರವಣ ದೋಷ ಹೊಂದಿರುವ ಯುವ ಜೋಡಿಯೊಂದು ಗುರು ಹಿರಿಯರು, ಬಂಧು ಮಿತ್ರರ ಸಮ್ಮುಖದಲ್ಲಿ ಸೋಮವಾರ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.ಹೊಸದುರ್ಗ ತಾಲೂಕಿನ ಹಳೇಮಳಲಿ ಗ್ರಾಮದ ಕೃಷಿಕರಾದ ಶೋಭಾ ಹಾಗೂ ಪ್ರಕಾಶ ಅವರ ಪುತ್ರಿ ಸಂಗೀತಾ ಪಿ (ಯಶಸ್ವಿನಿ) ಹಾಗೂ ಕಡೂರು ತಾಲೂಕಿನ ಕಾಮನಕರೆ ಗ್ರಾಮದ ಕೃಷಿಕರಾದ ಕೋಮಲಾ ಶಿವಲಿಂಗಪ್ಪ ಅವರ ಪುತ್ರ ಕೆ.ಎಸ್.ಅವಿನಾಶ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ಮೌನ ಜೋಡಿಗಳು.
ಸಂಗೀತಾ ಮತ್ತು ಅವಿನಾಶ್ ಮೈಸೂರಿನ ಜೆಎಸ್‍ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದು, ಕಳೆದ ಎರಡು ವರ್ಷಗಳಿಂದ ಪರಸ್ಪರರ ಮನೆಯಲ್ಲಿ ವಿವಾಹಕ್ಕೆ ವಧು ವರರನ್ನು ಹುಡುಕುತ್ತಿದ್ದರು. ಮೂರ್ನಾಲ್ಕು ಸಂಬಂಧಗಳು ಹುಡುಕಿಕೊಂಡು ಬಂದಿದ್ದರು ಒಪ್ಪಿಗೆ ಆಗಿರಲಿಲ್ಲ. ಈ ನಡುವೆ ಇಬ್ಬರಿಗೂ ಮೊದಲೇ ಪರಿಚಯ ಇದ್ದುದ್ದರಿಂದ ಮನೆಯವರ ಒಪ್ಪಿಗೆ ಮೂಲಕ ವಿವಾಹ ಕಾರ್ಯ ನೆರವೇರಿಸಲಾಗಿದೆ. ಇದು ಅರೆಂಜ್ ಮ್ಯಾರೇಜ್ ಎಂದು ಸಂಗೀತಾ ಅವರ ತಂದೆ ಪ್ರಕಾಶ್ ಹೇಳಿದರು.ಮೈಸೂರಿನ ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಗೀತಾ ಮತ್ತು ಅವಿನಾಶ್ ಒಟ್ಟಿಗೆ ಓದಿದ್ದಾರೆ. ಅವಿನಾಶ್ ಡಿಪ್ಲೋಮಾ ಇನ್ ಜ್ಯೂವೆಲ್ಲರಿ ಡಿಸೈನರ್ ವಿಭಾಗದಲ್ಲಿ ಅಧ್ಯಯನ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಜ್ಯೂವೆಲ್ಲರಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಸಂಗೀತಾ ಕೂಡ ದೊಡ್ಡಬಳ್ಳಾಪುರದ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರ ಮದುವೆಗೆ ಆಗಮಿಸಿದ್ದ ಸಹಪಾಠಿಗಳು ನೂತನ ಜೋಡಿಗಳಿಗೆ ಶುಭ ಹಾರೈಸಿದರು.
*ಪದಕ ವಿಜೇತ ಅವಿನಾಶ್: ವರ ಅವಿನಾಶ ಅವರು 2023ರ ಮಾರ್ಚ್‌ನಲ್ಲಿ ಫ್ರಾನ್ಸ್‌ನ ಮೆಟ್ಜ್ ನಗರದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಅಬಿಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಭಾಗವಹಿಸಿ ಕೌಶಲ್ಯ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಮಹತ್ವದ ಸಾಧನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವಿರೇಂದ್ರ ಕುಮಾರ್ ಅವರಿಂದ ಸನ್ಮಾನ ಸ್ವೀಕರಿಸಿದ್ದಾರೆ. ಮದುವೆಗೆ ಆಗಮಿಸಿದ್ದ ಬಂಧುಗಳು ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಹೊಂದಾಣಿಕೆಯಿಂದ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಮನತುಂಬಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಎನ್. ಸಿದ್ದರಾಮಪ್ಪ, ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕೆ. ಲೋಕೇಶ್ವರಪ್ಪ, ಖಜಾಂಚಿ ಟಿ.ಪಾಲಾಕ್ಷಪ್ಪ ಅವರು ಶುಭ ಹಾರೈಸಿ, ಈ ದಾಂಪತ್ಯ ಜೀವನ ಯುವಜನತೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಮಾತಿಲ್ಲದರೂ ಮನಸ್ಸುಗಳಿಂದ ಹಾರೈಸಿದ ಸ್ನೇಹಿತರು:
ಈ ವಿವಾಹದ ನಿಜವಾದ ವಿಶೇಷ ಮೌನದಲ್ಲೂ ಮಾತನಾಡುವ ಪ್ರೀತಿ. ವಾಕ್ ಮತ್ತು ಶ್ರವಣ ದೋಷ ಹೊಂದಿರುವ ಸುಮಾರು 160 ಮಂದಿ ಸ್ನೇಹಿತರು, ಸಹೋದ್ಯೋಗಿಗಳು ಭಾಗವಹಿಸಿ ತಮ್ಮದೇ ಸಂಕೇತ ಭಾಷೆಯಲ್ಲಿ ನೂತನ ದಂಪತಿಗೆ ಶುಭಾಶಯಗಳನ್ನು ತಿಳಿಸಿದ ಕ್ಷಣಗಳು ಎಲ್ಲರ ಕಣ್ಣನ್ನೂ ತೇವಗೊಳಿಸಿದವು. ಮಾತಿಲ್ಲದರೂ ಮನಸ್ಸುಗಳಿಂದ ಹಂಚಿದ ಆ ಹಾರೈಕೆಗಳು ಸಮಾರಂಭಕ್ಕೆ ವಿಭಿನ್ನ ಮೆರಗು ತಂದವು.