ಆಕಸ್ಮಿಕವಾಗಿ ಕುಟುಂಬದಿಂದ ಕಾಣೆಯಾಗಿ ಮತ್ತೆ ಕುಟುಂಬ ಸೇರಲಾಗದೇ ನಿರ್ಗತಿಕನಾಗಿ ಬದುಕುತ್ತಿದ್ದ ವೃದ್ಧ ಇನ್‌ಸ್ಟಾಗ್ರಾಂ ಮೂಲಕ ಮತ್ತೆ ಕುಟುಂಬ ಸೇರಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಆಕಸ್ಮಿಕವಾಗಿ ಕುಟುಂಬದಿಂದ ಕಾಣೆಯಾಗಿ ಮತ್ತೆ ಕುಟುಂಬ ಸೇರಲಾಗದೇ ನಿರ್ಗತಿಕನಾಗಿ ಬದುಕುತ್ತಿದ್ದ ವೃದ್ಧ ಇನ್‌ಸ್ಟಾಗ್ರಾಂ ಮೂಲಕ ಮತ್ತೆ ಕುಟುಂಬ ಸೇರಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್ ಪುರ್ ತಾಲೂಕಿನ ಧನ್ವಾಸಿ ಗ್ರಾಮದ ಪ್ರೀತಂ ಸಿಂಗ್ (60) ಎಂಬಾತ ಮತ್ತೆ ಕುಟುಂಬ ಸೇರಿದ ವೃದ್ಧ. ಈ ವ್ಯಕ್ತಿ ತನ್ನ ಕುಟುಂಬದವರೊಂದಿಗೆ ಕೂಲಿ ಕೆಲಸಕ್ಕಾಗಿ ಯಳಂದೂರಿಗೆ ಬಂದಿದ್ದನು. ಆದರೆ, ಅಚಾನಾಕ್ಕಾಗಿ ಕುಟುಂಬದಿಂದ ಬೇರೆಯಾಗಿ ದಾರಿ, ಭಾಷೆ ಯಾವುದೂ ಗೊತ್ತಾಗದೇ ಪರದಾಡಿ ಕೊನೆಗೆ ನಿರ್ಗತಿಕನಾಗಿದ್ದರು.
ಹಿಂದಿ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದೆ, ಮನೆಯವರ ಫೋನ್ ನಂಬರ್ ತಿಳಿಯದೆ, ವಾಪಸ್ ಹೋಗಲು ಕೂಡ ಗೊತ್ತಾಗದಿರುವುದರಿಂದ ಮನೆಯವರ ಪಾಲಿಗೆ ನಾಪತ್ತೆಯಾಗಿದ್ದರು. ಯಳಂದೂರು ಬಸ್ ನಿಲ್ದಾಣದ ಸುತ್ತಮುತ್ತ ಓಡಾಡುತ್ತ, ರಾತ್ರಿ ವೇಳೆ ರಸ್ತೆ ಬದಿ ಮಲಗಿಕೊಂಡು ದಿನಗಳನ್ನು ಕಳೆಯುತ್ತಿದ್ದರು. ನಿರ್ಗತಿಕ ವೃದ್ಧನನ್ನು ಗಮನಿಸಿದ ಯಳಂದೂರು ಠಾಣೆ ಪೊಲೀಸರು ನ.11ರಂದು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಅಂದಿನಿಂದ ವೃದ್ಧಾಶ್ರಮದಲ್ಲಿದ್ದ ಪ್ರೀತಂ ಸಿಂಗ್ ಊರು, ಮನೆಯವರ ಬಗ್ಗೆ ಹಿಂದಿಯಲ್ಲಿ ಹೇಳಿಕೊಂಡು ಪೇಚಾಡುತ್ತಿದ್ದರು. ಸರಿಯಾಗಿ ಊರಿನ ಹೆಸರು ಹೇಳುತ್ತಿದ್ದಾರಾ ಎನ್ನುವ ಗೊಂದಲ ಮೂಡಿತ್ತು. ವೃದ್ಧಾಶ್ರಮದ ಅಧೀಕ್ಷಕ ಎಂ.ಮಹದೇವಸ್ವಾಮಿ, ಸಮಾಜ ಸೇವಕ ಎಚ್.ಬಿ.ಪ್ರಕಾಶ್‌ಗೆ ಪ್ರೀತಂ ಸಿಂಗ್‌ನನ್ನು ಕುಟುಂಬದ ಮಡಿಲು ಸೇರಿಸಬೇಕೆಂಬ ಆಸೆ ಇತ್ತು.ಈ ಸಂದರ್ಭದಲ್ಲಿ ವೃದ್ದಾಶ್ರಮದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಬಂದಿದ್ದ ಸತ್ಯ ಎಜುಕೇರ್ ಕಾಂಪೆಟೆನ್ಸಿ ಟ್ರಸ್ಟ್‌ನ ಮಹೇಶ್ ಅವರು ಪ್ರೀತಂ ಸಿಂಗ್ ಅವರ ವಿಡಿಯೋವನ್ನು ಮಾಡಿ ಇನ್‌ಸ್ಟಾಗ್ರಾಂನಲ್ಲಿರುವ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗ್ರೂಪ್‌ಗೆ ವಿಡಿಯೋವನ್ನು ಹಾಕಿ ಸಹಾಯ ಕೋರಿದ್ದರು.
ಇನ್‌ಸ್ಟಾಗ್ರಾಂನಿಂದ ಸಿಕ್ಕ ಮಾಹಿತಿ ಆಧರಿಸಿ ಡಿ.30ರಂದು ವೃದ್ಧ ಪ್ರೀತಂ ಸಿಂಗ್ ಪುತ್ರ ರಾಜೇಶ್ ಸಿಂಗ್ ಧುರ್ವಿ ಬಂದರು. ಕಾನೂನು ನಿಯಮಾವಳಿ ಪ್ರಕಾರ, ಪ್ರೀತಂ ಸಿಂಗ್ ಅನ್ನು ಯಳಂದೂರು ಪೊಲೀಸರ ಮೂಲಕ ಮಗನಿಗೆ ಒಪ್ಪಿಸಲಾಯಿತು. ಕೆಲವು ತಿಂಗಳು ಕುಟುಂಬದಿಂದ, ಸ್ವಗ್ರಾಮದಿಂದ ದೂರವಾಗಿ ಇಳಿ ವಯಸ್ಸಿನಲ್ಲಿ ನಿರ್ಗತಿಕನಂತೆ ಯಳಂದೂರಿನಲ್ಲಿ ಬದುಕುತ್ತಿದ್ದ ವೃದ್ಧ ಕೊನೆಗೂ ಕುಟುಂಬ ಸೇರಿದರು.