ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣದ ಹೋರಾಟದ ನೇತೃತ್ವ ವಹಿಸಿರುವ ವ್ಯಕ್ತಿಗಳು ನ್ಯಾಯಕ್ಕಾಗಿ ಹೋರಾಡುತ್ತಿಲ್ಲ. ಬದಲಾಗಿ ಹಣ ಮಾಡುವ ಉದ್ದೇಶದಿಂದ ಈ ಪ್ರಕರಣ ಬಳಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ನ್ಯಾಯವಾದಿ ಹಾಗೂ ‘ವಾಯ್ಸ್ ಆಫ್ ಪಬ್ಲಿಕ್’ ಸಂಘಟನೆ ಮುಖ್ಯಸ್ಥ ಅಮೃತೇಶ್ ಆಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣದ ಹೋರಾಟದ ನೇತೃತ್ವ ವಹಿಸಿರುವ ವ್ಯಕ್ತಿಗಳು ನ್ಯಾಯಕ್ಕಾಗಿ ಹೋರಾಡುತ್ತಿಲ್ಲ. ಬದಲಾಗಿ ಹಣ ಮಾಡುವ ಉದ್ದೇಶದಿಂದ ಈ ಪ್ರಕರಣ ಬಳಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ನ್ಯಾಯವಾದಿ ಹಾಗೂ ‘ವಾಯ್ಸ್ ಆಫ್ ಪಬ್ಲಿಕ್’ ಸಂಘಟನೆ ಮುಖ್ಯಸ್ಥ ಅಮೃತೇಶ್ ಆಪಾದಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಸಿಬಿಐ ತನಿಖೆಗಾಗಿ ಬರೋಬ್ಬರಿ ಕೋಟ್ಯಂತರ ರು.ಗಳಿಗೂ ಹೆಚ್ಚು ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿದೆ. ಈಗ ಮತ್ತೆ ಮರುತನಿಖೆಗಾಗಿ ಹೊಸ ಎಸ್‌ಐಟಿ ರಚಿಸಿರುವುದರಿಂದ ಯಾವುದೇ ಹೊಸ ಸತ್ಯ ಹೊರಬರುವುದಿಲ್ಲ. ಇದು ಕೇವಲ ಸಾರ್ವಜನಿಕರ ಹಣದ ಮತ್ತೊಂದು ಪೋಲು ಎಂದೂ ಅವರು ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗಾಗಿ ರಚಿಸುವ ವಿಶೇಷ ತನಿಖಾ ತಂಡದಲ್ಲಿ (ಎಸ್‌ಐಟಿ) ಈ ಹಿಂದೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಸೇರಿಸಬಾರದು. ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೆ, ಲಭ್ಯವಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಆರಂಭದಲ್ಲಿ ನಾಪತ್ತೆ ಪ್ರಕರಣ ದಾಖಲು:

ಸೌಜನ್ಯ ಪ್ರಕರಣದ ಸಂಪೂರ್ಣ ಹಿನ್ನೆಲೆ, ವೈದ್ಯಕೀಯ ವರದಿಗಳಲ್ಲಿ ಮುಚ್ಚಿಡಲಾದ ಸತ್ಯಗಳು ಹಾಗೂ ಧರ್ಮಸ್ಥಳದಂಥ ಪುಣ್ಯಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ವ್ಯವಸ್ಥಿತ ಸಂಚುಗಳ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ಅಮೃತೇಶ್‌, ಸೌಜನ್ಯ ಪ್ರಕರಣ ಆರಂಭದಲ್ಲಿ ಕೇವಲ ನಾಪತ್ತೆ (ಮಿಸ್ಸಿಂಗ್) ಪ್ರಕರಣವಾಗಿ ದಾಖಲಾಗಿತ್ತು. ಆಕೆಯ ಮೃತದೇಹ ಪತ್ತೆಯಾದ ಮರುದಿನ ಆಕೆಯ ದೇಹದ ಮೇಲಿದ್ದ ಗಾಯಗಳನ್ನು ಆಧರಿಸಿ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವಾಗಿ ಬದಲಾಯಿಸಲಾಯಿತು. ತದನಂತರ ಈ ಪ್ರಕರಣ ಸ್ಥಳೀಯ ಪೊಲೀಸರಿಂದ ಸಿಐಡಿ ತನಿಖೆಗೆ ಹಸ್ತಾಂತರಗೊಂಡಿತು ಎಂದರು.

ಸೌಜನ್ಯ ಹತ್ಯೆ ಘಟನೆ ನಡೆದು 14 ವರ್ಷಗಳೇ ಕಳೆದರೂ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಒಂದು ನಿರ್ದಿಷ್ಟ ವರ್ಗದ ಜನ ಮಠ ಮಾನ್ಯಗಳು, ದೇವಸ್ಥಾನಗಳು, ಹಿಂದೂ ಗುರುಗಳನ್ನು ಹಾಗೂ ಮಠಾಧೀಶರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಮಹಾ ಅಭಿಯಾನ ನಡೆಸುತ್ತಿದ್ದಾರೆ. ಅವುಗಳ ಘನತೆಗೆ ಧಕ್ಕೆ ತರುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೌಜನ್ಯ ತಂದೆ-ತಾಯಿ ಸುದ್ದಿಗೋಷ್ಠಿ ನಡೆಸಿದ್ದರು:

ಈ ಪ್ರಕರಣ ನಡೆದ ಕೆಲ ವಾರಗಳಲ್ಲಿ ಸೌಜನ್ಯ ಅವರ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ ಹಾಗೂ ಮಾವ ವಿಠಲ್ ಗೌಡ ನಡೆಸಿದ್ದ ಸುದ್ದಿಗೋಷ್ಠಿಯ ವಿಡಿಯೋವನ್ನು ಪ್ರದರ್ಶಿಸಿದ ಅಮೃತೇಶ ಅವರು, ಧರ್ಮಸ್ಥಳದ ಅಧಿಕಾರಿಗಳಾಗಲಿ, ಆ ಕ್ಷೇತ್ರದವರಾಗಲಿ ನಮ್ಮ ಮೇಲೆ ಯಾವುದೇ ಪ್ರಭಾವ ಬೀರಲು ಬಂದಿಲ್ಲ ಎಂದು ಕುಟುಂಬಸ್ಥರು ಅಂದು ಸ್ಪಷ್ಟಪಡಿಸಿದ್ದರು. ಆದರೆ, ಇಂದು ಅದೇ ಕುಟುಂಬಸ್ಥರನ್ನು ಮುಂದಿಟ್ಟುಕೊಂಡು ಕೆಲವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಕರಣದ ಕುರಿತು ಹೊಸದಾಗಿ ನಡೆಯುವ ತನಿಖೆಯಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಮತ್ತು ಸಾರ್ವಜನಿಕ ಹಣ ವ್ಯರ್ಥವಾಗಬಹುದು. ಆದರೆ, ಮರುತನಿಖೆಯ ವ್ಯಾಪ್ತಿ ಹಾಗೂ ಕಾನೂನು ಪರಿಣಾಮಗಳನ್ನು ನ್ಯಾಯಾಲಯದ ಆದೇಶದ ಪೂರ್ಣಪಾಠದ ಆಧಾರದಲ್ಲಿ ಪರಿಶೀಲಿಸಬೇಕು. ತನಿಖೆ ಪೂರ್ಣಗೊಳ್ಳುವ ಮೊದಲೇ ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಅಪರಾಧಿಗಳೆಂದು ಬಿಂಬಿಸುವ ಮಾಧ್ಯಮ ವಿಚಾರಣೆ ಸರಿಯಲ್ಲ. ಆರೋಪ ಮತ್ತು ಸಾಬೀತಾದ ಅಪರಾಧದ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಸೌಜನ್ಯ ಪ್ರಕರಣದ ಸತ್ಯ ಹೊರಬರಲು ಅಧಿಕೃತ ದಾಖಲೆಗಳು, ವಿಧಿವಿಜ್ಞಾನ ವರದಿಗಳು ಮತ್ತು ನ್ಯಾಯಾಲಯದ ಆದೇಶಗಳ ಆಧಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ ಸಂತೋಷ್ ರಾವ್‌ನನ್ನು ಪೊಲೀಸರು ಬಲವಂತವಾಗಿ ಹಿಡಿದು ತಂದಿರಲಿಲ್ಲ. ಬದಲಾಗಿ, ಸೌಜನ್ಯಳ ಮಾವ ವಿಠಲ್ ಗೌಡ ಹಾಗೂ ಅವರ ಗುಂಪೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅಮೃತೇಶ್ ಹೊರಹಾಕಿದರು. ಸಿಬಿಐ ವಿಚಾರಣೆ ಎದುರಿಸಿದ ಬಳಿಕ ಸಂತೋಷ್ ರಾವ್ ದೋಷಮುಕ್ತನಾಗಿ ಹೊರಬಂದಿದ್ದಾನೆ.

ಅತ್ಯಂತ ಗಂಭೀರವಾದ ವೈದ್ಯಕೀಯ ಸಾಕ್ಷ್ಯವೊಂದನ್ನು ತನಿಖಾ ಹಂತದಲ್ಲಿ ನಿರ್ಲಕ್ಷಿಸಲಾಗಿದೆ. ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಅವರ ದೇಹದಲ್ಲಿ 11 ಗಾಯಗಳಿದ್ದವು. ಈತನ ಜನನಾಂಗದಲ್ಲಿದ್ದ ಗಾಯದ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದ ವೈದ್ಯರಾದ ಡಾ.ಮಹಾಬಲೇಶ್ ಶೆಟ್ಟಿ ಅವರು ಈತ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆ ಎಂದು ಸ್ಪಷ್ಟವಾದ ಅಭಿಪ್ರಾಯ ನೀಡಿದ್ದರು. ಇಷ್ಟೊಂದು ಸ್ಪಷ್ಟವಾದ ವೈದ್ಯಕೀಯ ವರದಿ ಇದ್ದರೂ ಈ ಸತ್ಯವನ್ನು ಯಾರಿಗೂ ತಿಳಿಯದಂತೆ ಮುಚ್ಚಿಡಲಾಗಿತ್ತು. ಈ ಅಂಶಗಳನ್ನು ತನಿಖೆಯಲ್ಲಿ ಸಮರ್ಪಕವಾಗಿ ಪರಿಗಣಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಘಟನೆ ನಡೆದ 20-25 ದಿನಗಳ ನಂತರ ಬೆಳ್ತಂಗಡಿಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ, ತಂದೆ ಚಂದಪ್ಪ ಗೌಡ ಹಾಗೂ ಸೋದರ ಮಾವ ವಿಠಲ್ ಗೌಡ ಅವರು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸೌಜನ್ಯ ಕುಟುಂಬಸ್ಥರು ಸ್ವತಃ ಧರ್ಮಸ್ಥಳದ ಪರವಾಗಿ ಮಾತನಾಡಿದ್ದರು. ಧರ್ಮಸ್ಥಳದ ಅಧಿಕಾರಿಗಳಾಗಲಿ, ಆ ಕ್ಷೇತ್ರದವರಾಗಲಿ ನಮ್ಮ ಮೇಲೆ ಯಾವುದೇ ಪ್ರಭಾವ ಬೀರಲು ಬಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಅವರು ನಮ್ಮ ಯಾವುದೇ ಆಸ್ತಿ ಕಬಳಿಸಲು ಬಂದಿಲ್ಲ ಮತ್ತು ನಮಗೆ ಅವರಿಂದ ಯಾವುದೇ ಬೆದರಿಕೆ ಇಲ್ಲ ಎಂಬ ಸತ್ಯವನ್ನು ಅಂದು ಸೌಜನ್ಯಳ ತಾಯಿ ಹಾಗೂ ಮಾವ ವಿಠಲ್ ಗೌಡ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು. ಆದರೆ, ಇಂದು ಅದೇ ಕುಟುಂಬಸ್ಥರನ್ನು ಮುಂದಿಟ್ಟುಕೊಂಡು ಕೆಲವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಮೃತೇಶ್ ದೂರಿದರು.