ಒತ್ತುವರಿ ಜಾಗವನ್ನು ಸರ್ವೇ ಮಾಡಿದ ನೀರಾವರಿ ಇಲಾಖೆ

| Published : Jul 17 2024, 12:51 AM IST

ಸಾರಾಂಶ

ಸಮೀಪದ ಮಸಣಾಪುರ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕಾವೇರಿ ನೀರಾವರಿ ನಿಯಮಿತ ನಿಗಮಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಂಗಳವಾರ ಕಂದಾಯ, ನೀರಾವರಿ ಇಲಾಖೆ ಹಾಗೂ ಸರ್ವೇ ಇಲಾಖೆಯ ತಂಡ ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವೇ ನಡೆಸಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಸಮೀಪದ ಮಸಣಾಪುರ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕಾವೇರಿ ನೀರಾವರಿ ನಿಯಮಿತ ನಿಗಮಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಂಗಳವಾರ ಕಂದಾಯ, ನೀರಾವರಿ ಇಲಾಖೆ ಹಾಗೂ ಸರ್ವೇ ಇಲಾಖೆಯ ತಂಡ ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವೇ ನಡೆಸಿದರು.ಈ ಜಮೀನು ಮಸಣಾಪುರ ಸರ್ವೇ ನಂ.೧೯ ರಲ್ಲಿ ೨೭ ಗುಂಟೆ ಇದ್ದು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದೆ. ಆದರೆ ಖಾಸಗಿ ವ್ಯಕ್ತಿಯೊಬ್ಬರು ಇದನ್ನು ಉಳುಮೆ ಮಾಡಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಈ ಗ್ರಾಮದ ಉಪ್ಪಾರ ಹಾಗೂ ನಾಯಕ ಜನಾಂಗದವರು ದೂರಿದ್ದರು. ಅಲ್ಲದೆ ಈ ಸ್ಥಳವನ್ನು ಇವೆರಡು ಜನಾಂಗದ ಸ್ಮಶಾನಕ್ಕೆ ಕೇಳಲಾಗಿತ್ತು ಹಾಗಾಗಿ ಇದು ಸರ್ಕಾರಿ ಜಾಗವಾಗಿದ್ದು ಇದನ್ನು ಸರ್ವೇ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಅರ್ಜಿ ನೀಡಿದ್ದರು. ಈ ಸಂಬಂಧ ಜು.೬ ರಂದು ಪ್ರತಿಭಟನೆಯನ್ನೂ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಈ ಜಾಗವನ್ನು ಸರ್ವೇ ಮಾಡಿತು. ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಎಇಇ ವಿಶ್ವನಾರಾಯಣ ಮಾತನಾಡಿ, ಈ ಸರ್ವೇ ನಂಬರಿನಲ್ಲಿ ಇರುವ ೨೭ ಗುಂಟೆ ನಮ್ಮ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಈಗ ನಾವು ಸರ್ವೇ ಮಾಡಿದ್ದು ನಮ್ಮ ಜಮೀನನ್ನು ಹದ್ದು ಬಸ್ತು ಮಾಡಿಕೊಳ್ಳಲಾಗಿದೆ. ಇದು ಇಲಾಖೆಗೆ ಸೇರಿದ ಜಮೀನಾಗಿದೆ ಎಂದು ಮಾಹಿತಿ ನೀಡಿದರು. ನಮಗೆ ಸ್ಮಶಾನಕ್ಕೆ ಈ ಸ್ಥಳ ನೀಡುವಂತೆ ಮನವಿ:

ಗ್ರಾಮದ ಮುಖಂಡ ಮಾದೇಶ್ ಮಾತನಾಡಿ, ಈಗಿರುವ ಕಾಲುವೆ ಬಳಿ ನಮಗೆ ಈ ಹಿಂದೆ ಸ್ಮಶಾನಕ್ಕೆ ಸ್ಥಳ ನೀಡಲಾಗಿತ್ತು. ಆದರೆ ಕಾಲುವೆ ಬಂದಿದ್ದರಿಂದ ಇದರ ಪಕ್ಕದಲ್ಲಿರುವ ಕಾವೇರಿ ನೀರಾವರಿ ನಿಗಮದ ಜಮೀನಿನಲ್ಲಿ ಉಪ್ಪಾರ ಹಾಗೂ ನಾಯಕ ಜನಾಂಗದವರು ಅಂತ್ಯಸಂಸ್ಕಾರ ಮಾಡುತ್ತಿದ್ದೆವು. ಆದರೆ ಈಚೆಗೆ ಖಾಸಗಿ ವ್ಯಕ್ತಿಯೊಬ್ಬರು ಈ ಸ್ಥಳಕ್ಕೆ ಬೇಲಿ ಹಾಕಿ ಜಮೀನನ್ನು ಉಳುಮೆ ಮಾಡಿಕೊಂಡಿದ್ದರು. ಹೀಗಾಗಿ ನಾವು ಇದನ್ನು ವಿರೋಧಿಸಿದ್ದೆವು. ಕಾನೂನಾತ್ಮಕವಾಗಿ ಈ ಸ್ಥಳ ಸರ್ವೇ ಮಾಡಿ ಎಂದು ಅರ್ಜಿ ಸಲ್ಲಿಸಿದ್ದೇವು. ಈಗ ಈ ಜಮೀನನ್ನು ಸರ್ವೇ ಮಾಡಿದ್ದಾರೆ. ಇದು ಇಲಾಖೆಯ ಜಮೀನು ಎಂದು ಸಾಬೀತಾಗಿದೆ. ಈಗ ನಾವು ಇದನ್ನು ಉಪ್ಪಾರ ಹಾಗೂ ನಾಯಕ ಜನಾಂಗಕ್ಕೆ ಸ್ಮಶಾನಕ್ಕೆ ನೀಡಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ. ಸರ್ವೇ ಅಧಿಕಾರಿ ವಿನಯ್‌ಕುಮಾರ್, ಭೂಮಾಪನಾ ಇಲಾಖೆಯ ತಾಲೂಕು ಅಧಿಕಾರಿ ರಮೇಶ್ ಗ್ರಾಮ ಲೆಕ್ಕಾಧಿಕಾರಿ ಲೋಕೇಶ್ ನಾಯಕ, ರಾಜೇಂದ್ರ, ಮಹದೇವು, ಲೋಕೇಶ್ ನಾಯಕ, ರಂಗಸ್ವಾಮಿನಾಯಕ, ಅಂಕನಾಯಕ, ವೆಂಕಟರಂಗಸ್ವಾಮಿ, ಶ್ರೀನಿವಾಸ, ಅಂಕಶೆಟ್ಟಿ, ಮಾದೇಶ್, ಕೃಷ್ಣ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.