ಸಾರಾಂಶ
ಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲಸುಮಾರು ₹೪೧೮ ಕೋಟಿ ವೆಚ್ಚದ ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿ ಹಂತದಲ್ಲಿದೆ. ದಶಕಗಳ ನೀರಾವರಿ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಈಗ ವರದಾ ನದಿಯಲ್ಲಿನ ನೀರಿನ ಕೊರತೆ ತಾತ್ಕಾಲಿಕ ಆತಂಕ ಸೃಷ್ಟಿಸಿದೆ. ಆದರೆ ರೈತನ ಭರವಸೆ ಮಾತ್ರ ಜೀವಂತವಾಗಿದೆ.
ಹಾನಗಲ್ಲ ತಾಲೂಕಿನ ಶೇ.೪೦ರಷ್ಟು ಕೃಷಿ ಭೂ ಪ್ರದೇಶದ ೬೭ ಗ್ರಾಮಗಳ ೧೮೨ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬುವ ಮೂಲಕ ಅಂತರ್ಜಲ ಅಭಿವೃದ್ಧಿ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರು ಕೊಡುವ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮಾಜಿ ಸಚಿವ ಸಿ.ಎಂ. ಉದಾಸಿ ಅವರ ಬಹು ವರ್ಷಗಳ ಒತ್ತಾಸೆ ಇಚ್ಛಾಶಕ್ತಿಯ ಫಲವಾಗಿ ೨೦೧೯ರಲ್ಲಿ ಆರಂಭವಾದ ಕಾಮಗಾರಿ ಈಗ ಪೂರ್ಣಗೊಂಡು ರೈತರ ಕೆರೆಗಳಿಗೆ ನೀರು ಹರಿಸಲು ಸಜ್ಜಾಗಿದೆ. ೧೮೨ ಕೆರೆಗಳಿಗೆ ೧.೩೩ ಟಿಎಂಸಿ ನೀರು ಒಂದು ಬಾರಿಗೆ ಹರಿಸಲಾಗುತ್ತದೆ. ಒಟ್ಟು ೧೨ ನೌಕರರು ಇಡೀ ನೀರು ಹರಿಸುವಿಕೆಯನ್ನು ನಿಯಂತ್ರಿಸಲಿದ್ದಾರೆ. ೩೨೫೦ ಎಚ್‌ಪಿ ಸಾಮರ್ಥ್ಯದ ೪ ಮೋಟಾರುಗಳು ಕೆಲಸ ಮಾಡಲಿದ್ದು, ಒಂದು ಮೋಟಾರು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ.೨೨ ಕಿಮೀ ಮುಖ್ಯ ಪೈಪ್‌ಲೈನ್, ೨೨೧ ಕಿಮೀ ವಿತರಣಾ ಪೈಪ್‌ಲೈನ್ ಹೊಂದಿರುವ ಈ ಯೋಜನೆಯಡಿ ೧೫ ಮುಖ್ಯ ವಿಭಾಗಗಳ ಮೂಲಕ ನೀರು ಹರಿಸಲಾಗುತ್ತದೆ. ಏಕ ಕಾಲಕ್ಕೆ ೧೮೬ ಕ್ಯುಸೆಕ್ಸ್ ನೀರನ್ನು ವರದಾ ನದಿಯಿಂದ ಹರಿಸುವ ಸಾಮರ್ಥ್ಯ ಇದೆ. ಒಂದು ಕೃಷಿ ವರ್ಷದಲ್ಲಿ ೯೦ ದಿನ ನೀರು ಹರಿಸಿ ಕೆರೆಗಳನ್ನು ತುಂಬುವ ಯೋಜನೆಯಾಗಿದ್ದರೂ, ಅಗತ್ಯ ಬಿದ್ದರೆ ಮತ್ತೆ ಮತ್ತೆ ನೀರು ಹರಿಸಿ ಮಳೆಗಾಲದಲ್ಲಿ ಕೆರೆ ತುಂಬಿ, ಬೇಸಿಗೆಗೆ ಅಂತರ್ಜಲ ವೃದ್ಧಿಗೊಳಿಸುವ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ. ೫ ವರ್ಷಗಳ ಕಾಲ ಗುತ್ತಿಗೆದಾರರೇ ಈ ಯೋಜನೆ ನಿರ್ವಹಣೆ ಮಾಡಲಿದ್ದು, ನಂತರ ಮರು ಗುತ್ತಿಗೆ ಮೂಲಕ ನಿರ್ವಹಣೆಗೆ ತುಂಗಾ ಮೇಲ್ದಂಡೆ ಯೋಜನೆ, ಕರ್ನಾಟಕ ನೀರಾವರಿ ನಿಗಮ ಮುಂದಾಗಲಿದೆ.
ಬಾಳಂಬೀಡ ಏತ ನೀರಾವರಿ ಯೋಜನೆಯ ಕಾಮಗಾರಿ ಆರಂಭವಾದಾಗಿನಿಂದ ಈ ಭಾಗದಲ್ಲಿ ಸಾವಿರಾರು ಎಕರೆ ಅಡಕೆ ತೋಟ ಮಾಡಲು ರೈತರು ಮುಂದಾಗಿದ್ದು, ಈಗ ಬಾಳಂಬೀಡ ಏತ ನೀರಾವರಿ ಯೋಜನೆ ನೀರು ಹರಿಸುವಿಕೆ ಆರಂಭವನ್ನು ಎದುರು ನೋಡುತ್ತಿದ್ದಾರೆ.ಈಗ ಹೆಸ್ಕಾಂಗೆ ₹೧.೩೦ ಕೋಟಿ ಶುಲ್ಕ ತುಂಬಿದರೆ ಒಂದೆರಡು ದಿನಗಳಲ್ಲಿ ವಿದ್ಯುತ್ ಒದಗಿಸಲು ಹೆಸ್ಕಾಂ ಸಿದ್ಧವಾಗಿದೆ. ಈ ಕಾರ್ಯ ಕೂಡ ಈಗ ಚಾಲನೆಯಲ್ಲಿದೆ. ಈ ಯೋಜನೆಗೆ ಹಣದ ಕೊರತೆಯೂ ಇಲ್ಲ ಎಂದು ಬ್ಯಾಡಗಿ ಉಪ ವಿಭಾಗದ ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ.ಎಚ್. ರುದ್ರಪ್ಪ ತಿಳಿಸಿದ್ದಾರೆ.
ಬಾಳಂಬೀಡ ಏತ ನೀರಾವರಿ ಯೋಜನೆ ಬಹುದಿನಗಳ ಕನಸು. ಇದರ ಸಾಕಾರಕ್ಕೆ ನಾನು ಕೂಡ ಕೈ ಜೋಡಿಸಿದ್ದೇನೆ. ಈ ಭಾಗದ ರೈತರ ಕನಸು ಹಸನಾಗಬೇಕು. ಹಾನಗಲ್ಲ ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವ ಕನಸಿದೆ. ಈ ಯೋಜನೆಯೊಂದಿಗೆ ಆರಂಭವಾದ ಹಿರೇಕಾಂಸಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಇದು ನನಗೂ ಹೆಚ್ಚು ಖುಷಿ ತಂದಿದೆ. ಅತಿ ಶೀಘ್ರ ಇದರ ಉದ್ಘಾಟನೆಗೆ ಮುಖ್ಯಮಂತ್ರಿ ಆಗಮಿಸಲಿದ್ದಾರೆ ಎನ್ನುತ್ತಾರೆ ಶಾಸಕ ಶ್ರೀನಿವಾಸ ಮಾನೆ.ಬಾಳಂಬೀಡ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರ ಪ್ರಾಯೋಗಿಕ ನೀರು ಹರಿಸುವಿಕೆ ಮಾಡಲಾಗುತ್ತದೆ. ಈಗ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಪ್ರಕ್ರಿಯೆ ನಡೆದಿದೆ. ಕಾಮಗಾರಿಗಾಗಿ ರೈತರು ಕೂಡ ಸ್ಪಂದಿಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದರೂ ಅಂತರ್ಜಲ ಹೆಚ್ಚಳ ರೈತರಿಗೆ ಹೆಚ್ಚು ಸಹಕಾರಿಯಾಗಲಿದೆ. ಈ ಯೋಜನೆ ನಿಜಕ್ಕೂ ರೈತರ ಹಿತ ಕಾಯುವ ಯೋಜನೆಯಾಗಿದೆ ಎನ್ನುತ್ತಾರೆ ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎ.ಎಚ್. ರುದ್ರಪ್ಪ.