ನಮ್ಮ ಕನ್ನಡ ನಾಡು ಶಿಲ್ಪಿಗಳ ನಾಡು, ಬೇಲೂರು, ಹಳೆಬೀಡಿನ ಶಿಲ್ಪಕಲೆಗಳನ್ನು ಜಕಣಾಚಾರ್ಯರು ಕೆತ್ತಿರುವುದು ಇತಿಹಾಸ ಪ್ರಸಿದ್ಧವಾಗಿದೆ ಎಂದು ತಹಸೀಲ್ದಾರ್ ಶರಣಮ್ಮ ಹೇಳಿದರು.
ಹಾವೇರಿ:ನಮ್ಮ ಕನ್ನಡ ನಾಡು ಶಿಲ್ಪಿಗಳ ನಾಡು, ಬೇಲೂರು, ಹಳೆಬೀಡಿನ ಶಿಲ್ಪಕಲೆಗಳನ್ನು ಜಕಣಾಚಾರ್ಯರು ಕೆತ್ತಿರುವುದು ಇತಿಹಾಸ ಪ್ರಸಿದ್ಧವಾಗಿದೆ ಎಂದು ತಹಸೀಲ್ದಾರ್ ಶರಣಮ್ಮ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ಜಯಂತಿಗಳು ಬರೀ ಒಂದೇ ಸಮಾಜಕ್ಕೆ ಸೀಮಿತವಾಗದೆ, ನಾವೆಲ್ಲರೂ ಒಂದು ಎಂದು ಭಾವಿಸಿ, ಒಟ್ಟುಗೂಡಿ ಇಂತಹ ಮಹನೀಯರ ಜಯಂತಿಗಳನ್ನು ಎಲ್ಲರೂ ಸ್ಮರಿಸಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮಾತನಾಡಿ, ಇಂದಿನ ದಿನಗಳಲ್ಲಿ ಬಡಗಿತನ, ಕುಲುಮೆ, ಇಂತಹ ಕಲೆಗಳು ನಶಿಸಿ ಹೋಗುತ್ತಿವೆ. ಪ್ರಸ್ತುತ ದಿನಮಾನಗಳಲ್ಲಿ ರೈತರು ಅತಿ ಹೆಚ್ಚಾಗಿ ಟ್ರ್ಯಾಕ್ಟರ್ ಮುಂತಾದ ಉಪಕರಣಗಳನ್ನು ಬಳಸಿ ಹಳೆಯ ಪದ್ಧತಿಗಳನ್ನು ಮರೆಯುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಜಕಣಾಚಾರ್ಯರ ಬಹಳಷ್ಟು ಶಿಲ್ಪ ಕೆತ್ತನೆಯ ಕಲೆಗೆ ವಿಶೇಷವಾದ ಇತಿಹಾಸವಿದ್ದು, ಇದನ್ನು ನಾವೆಲ್ಲರೂ ಸ್ಮರಿಸಬೇಕು. ರೈತರು ಕೃಷಿಗೆ ಬಳಸುವ ಅನೇಕ ಸಲಕರಣೆಗಳನ್ನು ವಿಶ್ವಕರ್ಮ ಬಂಧುಗಳು ತಯಾರಿಸುವುದು ವಿಶೇಷ ಎಂದು ಹೇಳಿದರು.ವಿಶ್ವಕರ್ಮ ಸಮಾಜ ಸಮಿತಿ ತಾಲೂಕು ಗೌರವಾಧ್ಯಕ್ಷ ರೇವಣಚಾರ್ಯ ಭಾ. ಬಡಿಗೇರ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ, ಗಣೇಶಪ್ಪ ವಿ. ಕಮ್ಮಾರ, ವಿಠಲಾಚಾರ್ಯ ಶಂ. ಬಡಿಗೇರ, ರುದ್ರೇಶ ಮಾ. ಬಡಿಗೇರ, ಮೌನೇಶ್ ಬಡಿಗೇರ ಉಪಸ್ಥಿತರಿದ್ದರು.