ಕಲೆಯಿಂದ ಸಿಗುವ ಆನಂದ ಉನ್ನತ ಹುದ್ದೆಗಳಿಂದ ದೊರೆಯಲ್ಲ: ಕೀರ್ತನಾ

| Published : Jan 19 2025, 02:18 AM IST

ಕಲೆಯಿಂದ ಸಿಗುವ ಆನಂದ ಉನ್ನತ ಹುದ್ದೆಗಳಿಂದ ದೊರೆಯಲ್ಲ: ಕೀರ್ತನಾ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಲೆ, ಸಂಗೀತ, ನಾಟಕಗಳನ್ನು ನೋಡಿದಾಗ ಸಿಗುವ ಆನಂದ ಹೊಟ್ಟೆ ತುಂಬಿಸುವ ಯಾವುದೇ ಉನ್ನತ ಹುದ್ದೆಗಳಿಂದ ದೊರೆಯುವುದಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಹೇಳಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಲೆ, ಸಂಗೀತ, ನಾಟಕಗಳನ್ನು ನೋಡಿದಾಗ ಸಿಗುವ ಆನಂದ ಹೊಟ್ಟೆ ತುಂಬಿಸುವ ಯಾವುದೇ ಉನ್ನತ ಹುದ್ದೆಗಳಿಂದ ದೊರೆಯುವುದಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಹೇಳಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಗೌರವ ಪ್ರಶಸ್ತಿ, 2025ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಮತ್ತು 15ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನಸ್ಸು ಮತ್ತು ಆತ್ಮವನ್ನು ಸಂತೋಷಗೊಳಿಸುವುದಕ್ಕೆ ಕಲೆಯಿಂದ ಮಾತ್ರ ಸಾಧ್ಯ ಎಂದು ಹೇಳಿದ ಅವರು, ಇತ್ತೀಚಿನ ದಿನಗಳಲ್ಲಿ ಕಲೆಗೆ ಪ್ರೋತ್ಸಾಹ ಮತ್ತು ಕಲಾವಿದರನ್ನು ಗುರುತಿಸಿ ಉತ್ತೇಜಿಸುವ ಕೆಲಸ ನಡೆಯುತ್ತಿಲ್ಲ. ಅಂತಹ ಕೆಲಸ ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.

ಇತ್ತೀಚಿಗೆ ಮನುಷ್ಯ ಕಲೆಯನ್ನು ಉಳಿಸಬೇಕು ಎಂಬುದರ ಬದಲಾಗಿ ಕಲೆಯೇ ಮನುಷ್ಯನನ್ನು ಉಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್‌ನಲ್ಲಿ ನೆಟ್ ವರ್ಕ್ ಖಾಲಿಯಾದ ತಕ್ಷಣ ಮನುಷ್ಯನಿಗೆ ಏಕಾಂಗಿತನ ಮತ್ತು ಮಾನಸಿಕ ಖಿನ್ನತೆ ಕಾಡಲು ಶುರುವಾಗಿದೆ. ಇಂತಹ ಮನುಷ್ಯನ ಮನಸ್ಸಿನ ಸಮತೋಲನ ಕಾಪಾಡಲು ಕಲೆಯ ಅಗತ್ಯವಿದೆ ಎಂದರು.

ಅಯೋಧ್ಯೆ ಬಾಲರಾಮನ ಮೂರ್ತಿ ತಯಾರಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಶಿಲ್ಪಿಯಾದವನಿಗೆ ಯಾವುದೇ ಭಾಷೆ ಇಲ್ಲ. ಕಲಾವಿದ ಮಾತನಾಡಬಾರದು ಅವನು ತಯಾರಿಸಿದ ಶಿಲ್ಪದ ಜೀವಂತಿಕೆ ಮಾತನಾಡು ವಂತಾದಾಗ ಅವನ ಶ್ರಮಕ್ಕೆ ನಿಜವಾದ ಮೌಲ್ಯ ಬರುತ್ತದೆ ಎಂದು ಹೇಳಿದರು.

ಶಿಲ್ಪಿಗಳು ತಾವು ತಯಾರಿಸಲಿರುವ ಶಿಲ್ಪಕ್ಕೆ ಜೀವಂತಿಕೆ ತುಂಬಲು ಕಲ್ಲಿನೊಂದಿಗೆ ಕಾಲ ಕಳೆದಾಗ ಅದು ನಮ್ಮ ಮಾತು ಕೇಳುತ್ತದೆ, ಅದರ ಮೇಲೆ ಕಲಾವಿದನಿಗೆ ಹಿಡಿತ ಬರುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಒಬ್ಬ ಪರಿಪೂರ್ಣ ಕಲಾವಿದರಾಗಬಹುದು ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಕಲಾವಿದ ಶ್ರೀಧರ ಮೂರ್ತಿ ಮಾತನಾಡಿ, ಕಲಾವಿದನ ಹುಟ್ಟು ಬಹು ಅಪರೂಪವಾಗಿದ್ದು, ಪೋಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಪ್ರಪಂಚದ ಅದ್ಭುತ ಕಲಾವಿದನ್ನಾಗಿ ರೂಪಿಸಲು ಸಾಧ್ಯ ಎಂದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಓದಿಸಿ ತುರ್ತಾಗಿ ದುಡಿಮೆಗೆ ತಳ್ಳುವ ಧಾವಂತದಲ್ಲಿ ಕಲೆ ಸಂಗೀತ, ನಾಟಕ ಶಿಲ್ಪಕಲೆಯೂ ಸೇರಿದಂತೆ ಲಲಿತ ಕಲೆಗಳಿಂದ ಮಕ್ಕಳನ್ನು ದೂರ ತಳ್ಳುತ್ತಿದ್ದಾರೆ. ಕಲಾವಿದರನ್ನಾಗಿ ರೂಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ. ರಮೇಶ್, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಶಾಂತಿ ನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ, ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಎ.ಪಿ. ಜಯಣ್ಣಾಚಾರ್‌ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.

18 ಕೆಸಿಕೆಎಂ 3ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಪ್ರಶಸ್ತಿ ಪುರಸ್ಕೃತರು ಹಾಗೂ ಗಣ್ಯರು ಇದ್ದರು.